ಮುಂಬೈ : ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇದರಿಂದ ಕಳೆದ ಎರಡು ವರ್ಷಗಳಿಂದ ಶಿವಸೇನೆ, ಎನ್ ಸಿಪಿ ಮತ್ತು ಕಾಂಗ್ರೆಸ್ ಜತೆ ಸೇರಿ ಮಾಡಿಕೊಂಡಿದ್ದ ಮಹಾ ವಿಕಾಸ್ ಅಘಾಡಿ ಸರ್ಕಾರ ಪತನಗೊಂಡಿತು.
ಶಿವಸೇನೆ ಮುಖಂಡ ಹಾಗೂ ಸಚಿವ ಏಕನಾಥ್ ಶಿಂಧೆ ನೇತೃತ್ವದ 39 ಶಾಸಕರು ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರದ ವಿರುದ್ಧ ಬಂಡಾಯ ಎದ್ದಿದ್ದರಿಂದ ಒಂಭತ್ತು ದಿನಗಳ ಅತಂತ್ರದ ಬಳಿಕ ಸರ್ಕಾರ ಪತನಗೊಂಡಿತು.
ವಿಶ್ವಾಸಮತ ಯಾಚನೆ ಮಾಡಲು ರಾಜ್ಯಪಾಲರು ಆದೇಶ ನೀಡಿದ್ದರು. ಇದನ್ನು ಪ್ರಶ್ನಿಸಿ ಠಾಕ್ರೆ ಅವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಅಲ್ಲಿ ಗುರುವಾರವೇ ವಿಶ್ವಾಸಮತಯಾಚನೆ ಮಾಡಬೇಕು ಎಂದು ಸೂಚಿಸಿತ್ತು. ಇದಾದ ಬಳಿಕ ಅವರು ಫೇಸ್ ಬುಕ್ ಲೈವ್ ನಲ್ಲಿ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದಾಗಿ ತಿಳಿಸಿದ್ದರು.
ನಂತರ ಅವರು ತಮ್ಮ ಕಾರನ್ನು ಸ್ವತಹ ಅವರೇ ಡ್ರೈವ್ ಮಾಡಿ ರಾಜಭವನಕ್ಕೆ ತೆರಳಿ, ರಾಜ್ಯಪಾಲರಿಗೆ ರಾಜೀನಾಮೆ ಪತ್ರ ಸಲ್ಲಿಸಿದರು. ಹಾಗೆಯೇ ತಮ್ಮ ವಿಧಾನಪರಿಷತ್ ಸ್ಥಾನಕ್ಕೂ ಅವರು ರಾಜೀನಾಮೆ ಸಲ್ಲಿಸಿದ್ದಾರೆ. ರಾಜೀನಾಮೆ ನೀಡಲು ನನಗೆ ಯಾವುದೇ ವಿಷಾದವಿಲ್ಲ, ಆದರೆ ಶಾಸಕರು ಬಂಡಾಯ ಸಾರಿರುವುದು ಬೇಸರ ತಂದಿದೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇವೆಲ್ಲಾ ಘಟನೆ ನಂತರ ಬಿಜೆಪಿ ವಿರೋಧ ಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನಿವೀಸ್ ಮುಂದಿನ ಸರ್ಕಾರ ರಚನೆಗೆ ಮುಂದಾಗಿದ್ದು, ಇಂದು ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಅವಕಾಶ ಕೋರಬಹುದು ಎಂದು ತಿಳಿದುಬಂದಿದೆ.
ಧನ್ಯವಾದ ಸಮರ್ಪಿಸಿದ ಠಾಕ್ರೆ
ತಮ್ಮ ಫೇಸ್ ಬುಕ್ ಲೈವ್ ನಲ್ಲಿ ಎನ್ ಸಿಪಿ ನಾಯಕ ಶರದ್ ಪವಾರ್, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರಿಗೆ ಉದ್ಧವ್ ಠಾಕ್ರೆ ಧನ್ಯವಾದ ತಿಳಿಸಿದರು. ಮಹಾ ಅಘಾಡಿ ಸರ್ಕಾರ ಮತ್ತು ತಮಗೆ ಕೆಲವರು ಬೆನ್ನಿಗೆ ಚೂರಿ ಹಾಕಿದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಿಮ್ಮ ವಿರೋಧ ಯಾರಿಗೆ ಎಂದು ಏಕನಾತ್ ಶಿಂಧೆ ಹಾಗೂ ಬೆಂಬಲಿಗ ಶಾಸಕರಿಗೆ ಕೇಳಿದ್ದೇನೆ. ನಿಮ್ಮ ಸಮಸ್ಯೆಗಳನ್ನು ನೇರವಾಗಿ ಬಂದು ಮಾತನಾಡಿ ಎಂದು ಬಂಡಾಯ ಶಾಸಕರಿಗೆ ಮನವಿ ಮಾಡಿದ್ದೇನೆ. ಶಿವಸೇನೆ ಕಾರ್ಯಕರ್ತರ ಆಕ್ರೋಶದ ಹಿನ್ನಲೆಯಲ್ಲಿ ಕೇಂದ್ರ ಭದ್ರತಾ ಪಡೆ ಹಾಗೂ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ರಾಜಧಾನಿಗೆ ಬರುತ್ತಿರುವ ಶಾಸಕರಿಗೆ ಸಾಕಷ್ಟು ಬಂದೂಬಸ್ತ್ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
#uddhavthackeray, #cmresigns, #maharastragovernment, #mahavikasaghadi, #sharadpawar, #ncp, #congress, #soniagandhi, #yekanathsindhe, #39mladecident, #supreemecourt, #governor, #mejority




