ಹೊಸದಿಲ್ಲಿ: ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ- ಪಾಕಿಸ್ತಾನ ನಡುವೆ ಕಾದಾಟ ನಡೆಯಲಿದೆ. ಅಕ್ಟೋಬರ್ 23 ರಂದು ಮೆಲ್ಬೋರ್ನ್ ನಲ್ಲಿ ಈ ಪಂದ್ಯ ನಡೆಯಲಿದ್ದು, ಈ ಬಾರಿಯ ವಿಶ್ವ ಕಪ್ ಟೂರ್ನಿ ಆಸ್ಟ್ರೇಲಿಯಾ ಅತಿಥ್ಯದಲ್ಲಿ ನಡೆಯಲಿದೆ. ಈ ಹೈ ವೋಲ್ಟೇಜ್ ಪಂದ್ಯಕ್ಕಾಗಿ ಅಭಿಮಾನಿಗಳು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ಇದರ ನಡುವೆಯೇ ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೊಂದು ಸಂತಸದ ಸುದ್ದಿ ಬಂದಿದ್ದು, ಬದ್ದ ವೈರಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಟಿ 20 ವಿಶ್ವಕಪ್ ಗೂ ಮುನ್ನಾ ಸೆಣಸಾಟ ನಡೆಸಲಿವೆ. ಅಗಸ್ಟ್ ತಿಂಗಳಲ್ಲಿ ಶ್ರೀಲಂಕ ಕ್ರಿಕೆಟ್ ಮಂಡಳಿ ಆತಿಥ್ಯದಲ್ಲಿ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ ನಡೆಯಲಿದೆ ಎಂದು ತಿಳಿಬಂದಿದೆ.
ಟಿ20 ಕ್ರಿಕೆಟ್ ಮಾದರಿಯಲ್ಲಿಯೇ ಈ ಟೂರ್ನಿ ನಡೆಯಲಿದ್ದು, ಇದರಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ ಮತ್ತು ಅಫಘಾನಿಸ್ತಾನ ತಂಡಗಳು ಕ್ರಿಕೆಟ್ ಕಪ್ ಗಾಗಿ ಸೆಣಸಾಟ ನಡೆಸಲಿವೆ. ಅಗಸ್ಟ್ 27 ರಿಂದ ಈ ಟೂರ್ನಿ ಆರಂಭವಾಗಲಿದೆ.
ಶ್ರೀಲಂಕಾ ದೇಶ ತೀವ್ರ ಆರ್ಥಿಕ ಮುಗ್ಗಟ್ಟು ಮತ್ತು ರಾಜಕೀಯ ಬಿಕ್ಕಟ್ಟಿನ ನಡುವೆಯೇ ಶ್ರೀಲಂಕಾ ಕ್ರಿಕೆಟ್ ಮಂಡಳಿ ಟೂರ್ನಿ ಆಯೋಜಿಸಲು ಮುಂದಾಗಿದೆ.
2021ರಲ್ಲಿ ಯುಎಇ ನಲ್ಲಿ ನಡೆದ ಕ್ರಿಕೆಟ್ ಸಮರದ ಕಹಿ ನೆನಪು ಇನ್ನು ಮಾಸಿಲ್ಲ. ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನ ಎದುರು ಹತ್ತು ವಿಕೆಟ್ ಗಳ ಹೀನಾಯ ಸೋಲನ್ನು ಅನುಭವಿಸಿತ್ತು. ಇದು ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡಕ್ಕೆ ಭಾರತದ ವಿರುದ್ಧ ಸಿಕ್ಕ ಮೊದಲ ಜಯವಾಗಿದೆ.
ಭಾರತ ತಂಡ ಈ ಹೀನಾಯ ಸೋಲಿಗೆ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ. ರೋಹಿತ್ ಶರ್ಮಾ ನಾಯಕ ಮತ್ತು ಕೋಚ್ ರಾಹುಲ್ ದ್ರಾವಿಡ್ ಸಾರಥ್ಯದಲ್ಲಿ ಭಾರತ ತಂಡ ಏಷ್ಯಾ ಕಪ್ ಗೆಲುವಿಗಾಗಿ ರಣತಂತ್ರ ರೂಪಿಸಲಿದೆ.
#T20CRICKET, #ROHITHSHARMA, #INDIA, #SRILANKA, #AUSTRILIA, #PAKISTAN, #ASIA CUP, #ICC T20 WORLD CUP, #SRILANKA CRICKET BOARD




