ಬೆಂಗಳೂರು : ಬೆಳಗಾವಿ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಇಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಭೇಟಿ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ನಿವಾಸಕ್ಕೆ ತೆರಳಿದ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಪ್ರತ್ಯೇಕವಾದ ಮಾತುಕತೆ ನಡೆಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಭೇಟಿಯಲ್ಲಿ ಕುತೂಹಲ ಏನಿಲ್ಲ, ಬೆಂಗಳೂರಿಗೆ ಬಂದಾಗ ಭೇಟಿಯಾಗುತ್ತಿರುತ್ತೇನೆ, ಅವರು ಹಿರಿಯರು, ನಮ್ಮ ಸಮಾಜದ ಮುಖಂಡರು, ಇವತ್ತು ಗುರುಪೂರ್ಣಿಮೆ ಆಗಿದ್ದರಿಂದ ಹಿರಿಯರ ಆಶೀರ್ವಾದ ಪಡೆಯೋಣ ಎಂಬ ಕಾರಣಕ್ಕೆ ಭೇಟಿಯಾಗಿದ್ದೇನೆ ಎಂದು ಹೇಳಿದರು.
ಇದೊಂದು ಸೌಹಾರ್ದಯುತ ಭೇಟಿಯಾಗಿದ್ದು, ಇದರಲ್ಲಿ ಬೇರೆ ಏನು ವಿಶೇಷವಿಲ್ಲ, ಅವರ ಮಾರ್ಗದರ್ಶನ ಪಡೆದಿದ್ದೇನೆ, ಅವರ ಜೊತೆ ರಾಜಕಾರಣದ ಚರ್ಚೆ ಮಾಡಿಲ್ಲ, ಅವರಿಗೆ ಗೌರವ ಕೊಡುತ್ತಾ ಬಂದಿದ್ದೇನೆ ಎಂದು ಬಿಎಸ್ ವೈ ಭೇಟಿ ಬಳಿಕ ಹೆಬ್ಬಾಳ್ಕರ್ ತಿಳಿಸಿದರು.
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲು ವಿಚಾರ
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲು ವಿಚಾರ ಸಂಬಂಧವಾಗಿ ಪ್ರತಿಕ್ರಿಯೆ ನೀಡಿದ ಅವರು, ಬಿಎಸ್ ವೈ ಅವರಿಗೆ ಇದನ್ನು ಕೊಡಬೇಕು ಎಂಬ ಆಸಕ್ತಿ ಇತ್ತು, ಕೆಲವು ಕಾರಣಾಂತರಗಳಿಂದ ಕೊಡಲು ಆಗಿರಲಿಲ್ಲ, ಮೀಸಲಾತಿ ಸಿಗುವ ಭರವಸೆ ಇದೆ ಎಂದು ತಿಳಿಸಿದ ಅವರು, ಮುಖ್ಯಮಂತ್ರಿ ಬೊಮ್ಮಾಯಿ ಅವರ ಮೇಲೆ ಭರವಸೆ ಇದೆ ಎಂದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಮೃತ ಮಹೋತ್ಸವದಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಮಹೋತ್ಸವವನ್ನು ನಡೆಸಬೇಕು ಎಂಬ ಬೆಂಬಲಿಗರ ಒತ್ತಾಯ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಅದರ ಬಗ್ಗೆ ನನಗೆ ಗೊತ್ತಿಲ್ಲ, ಸಿದ್ದರಾಮಯ್ಯ ಉತ್ಸವ ಮಾಡುತ್ತಾರೆ, ಆ ಕಮಿಟಿಯಲ್ಲಿ ನಾನು ಇದ್ದೇನೆ, ಇವತ್ತು ಸಭೆ ಇದೆ, ಭಾಗವಹಿಸ್ತೇನೆ ಎಂದು ವಿವರಿಸಿದರು.

ಸಿದ್ದರಾಮಯ್ಯ ಅವರು 75 ವರ್ಷ ರಾಜಕಾರಣದಲ್ಲಿ ಸೇವೆ ಸಲ್ಲಿಸಿದ್ದಾರೆ, ಜೀವನದಲ್ಲಿ ಅದೊಂದು ಸಾರ್ಥಕತೆ, ಅವರು ಉತ್ಸವ ಮಾಡಿ ಎಂದು ಹೇಳಿಲ್ಲ, ನಾವೆಲ್ಲ ಸೇರಿ ಮಾಡುತ್ತಿದ್ದೇವೆ ಎಂದು ತಿಳಿಸಿದರು.
#mla laxmi hebbalkar, #b s yeddiyurappa, #former chief minister, #siddaramaiah, # dk shivakumar, #panchamasali #reservation




