CANADIAN MP CHANDRA ARYA: ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ಪಡೆದ ಕೆನಡಾ ಸಂಸದರ ಕುಟುಂಬ: ಎಲ್ಲರನ್ನೂ ಒಂದುಗೂಡಿಸುವ ಶಕ್ತಿ ಭಾಷೆ: ಕೆನಡಾ ಸಂಸದ ಚಂದ್ರ ಆರ್ಯ

ಬೆಂಗಳೂರು: ಜಾತಿ, ಮತ, ಪಂಥ, ಧರ್ಮಗಳ ಕಟ್ಟುಗಳನ್ನು ಮೀರಿ ಏಕಸೂತ್ರದಲ್ಲಿ ಎಲ್ಲರನ್ನೂ ಒಂದು ಮಾಡುವ ಶಕ್ತಿ ಮಾತೃಭಾಷೆಗೆ ಇದೆ. ಈ ಭಾಷಾಬಂಧನಕ್ಕೆ ಪ್ರಪಂಚದಲ್ಲಿ ಎಲ್ಲರನ್ನೂ ಒಂದು ಮಾಡುವ ಶಕ್ತಿ ಇದೆ ಎಂದು ಹೆಮ್ಮೆಯ ಕನ್ನಡಿಗ, ಕೆನಡಾ ಸಂಸದ ಚಂದ್ರ ಆರ್ಯ ಹೇಳಿದರು.
ಚಂದ್ರ ಆರ್ಯ ಅವರು ಕನ್ನಡ ಸಾಹಿತ್ಯ ಪರಿಷತ್ತಿಗೆ ಭೇಟಿ ನೀಡಿ, ಕನ್ನಡಿಗರ ಅಸ್ಮಿತೆಯ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ಪಡೆದುಕೊಂಡರು. ಅವರ ಜೊತೆ ಅವರ ಶ್ರೀಮತಿ ಸಂಗೀತಾ ಗಾಯತ್ರಿ, ಸಹೋದರ ಶ್ರೀನಿವಾಸ್ ಸಹ ಸದಸ್ಯತ್ವ ಪಡೆದುಕೊಂಡರು.
ಪಂಪ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಪರಿಷತ್ತಿನ ಕಾರ್ಯಚಟುವಟಿಕೆಗಳ ಕುರಿತು ಚಂದ್ರ ಆರ್ಯರಿಗೆ ಸಂಪೂರ್ಣ ಮಾಹಿತಿ ನೀಡಿದರು. ನಂತರ ಮಾತನಾಡಿದ ಚಂದ್ರ ಆರ್ಯ ಅವರು, “ಕನ್ನಡ ಸಾಹಿತ್ಯ ಪರಿಷತ್ತು ಕೆಲ ಚಟುವಟಿಕೆಗಳಿಗೆ, ಕೆಲವರಿಗೆ ಮಾತ್ರ ಸೀಮಿತವಾಗದೆ ಎಲ್ಲ ಕನ್ನಡಿಗರನ್ನೂ ಒಳಗೊಳ್ಳುತ್ತಿರುವುದು ಸಂತಸದ ಸಂಗತಿ. ಇಲ್ಲಿ ನಡೆಯುತ್ತಿರುವ ಎಲ್ಲಾ ಕಾರ್ಯಚಟುವಟಿಕೆಗಳು ಕನ್ನಡ-ಕನ್ನಡಿಗ-ಕರ್ನಾಟಕವನ್ನು ಗಟ್ಟಿಗೊಳಿಸುವಂಥದ್ದು ಎಂದರು.
“ನನ್ನ ತಂದೆಯವರು ತಮ್ಮ ಸರಕಾರಿ ಸೇವೆಯಲ್ಲಿರುವಾಗ ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ರೂಪಿಸುವಲ್ಲಿ ಕಾರ್ಯಯೋಜನೆಯನ್ನು ಕೈಗೊಂಡಿದ್ದರು” ಎಂಬುದನ್ನು ಅವರು ಈ ಸಂದರ್ಭದಲ್ಲಿ ನೆನಪಿಸಿಕೊಂಡರು.
“ಕೆನಡಾದಲ್ಲಿರುವ ಕನ್ನಡಿಗರನ್ನು ಒಟ್ಟುಗೂಡಿಸಿ ಪರಿಷತ್ತಿನ ಘಟಕವನ್ನು ರಚಿಸಿ ಅದನ್ನು ಮುನ್ನಡೆಸುವ ಮಹತ್ವದ ಜವಾಬ್ದಾರಿಯನ್ನು ನಾಡೋಜ ಡಾ. ಮಹೇಶ ಜೋಶಿ ಅವರು ನೀಡಿದ್ದಾರೆ. ಅದನ್ನು ನಾನು ನನ್ನ ಕರ್ತವ್ಯ ಎಂದು ನಿಭಾಯಿಸುತ್ತೇನೆ” ಎಂಬ ಭರವಸೆಯನ್ನು ಚಂದ್ರ ಆರ್ಯ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಮಾತನಾಡಿ, “ಕೆನಡಾ ಸಂಸತ್ತಿನಲ್ಲಿ ಕನ್ನಡ ಮಾತನಾಡುವ ಮೂಲಕ ಎಲ್ಲರ ಮನಸ್ಸು ಗೆದ್ದ ಚಂದ್ರ ಆರ್ಯ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ಪಡೆದುಕೊಂಡಿರುವುದು ಹಾಗೂ ಕೆನಡಾದಲ್ಲಿ ಪರಿಷತ್ತಿನ ಘಟಕದ ಮುಂದಾಳತ್ವವನ್ನು ತೆಗೆದುಕೊಂಡಿರುವುದು ಶ್ಲಾಘನೀಯ. ಹಾವೇರಿಯಲ್ಲಿ ನಡೆಯಲಿರುವ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮುಖ್ಯ ಅಥಿತಿಗಳಾಗಿ ಭಾಗವಹಿಸುವುದಕ್ಕೆ ಒಪ್ಪಿಗೆ ನೀಡಿದ್ದಾರೆ. ಹೆಮ್ಮೆಯ ಕನ್ನಡಿಗ ಚಂದ್ರ ಆರ್ಯ ಅವರ ಕನ್ನಡದ ಅಸ್ಮಿತೆಗೆ ಪರಿಷತ್ತು ಹೆಮ್ಮೆ ವ್ಯಕ್ತ ಪಡಿಸುತ್ತಿದೆ ಎಂದು ಹೇಳಿದರು.
ಪರಿಷತ್ತಿನ ಸಿಬ್ಬಂದಿಗಳೊಂದಿಗೆ ಸಂವಾದ ನಡೆಸಿದ ಚಂದ್ರ ಆರ್ಯ ಅವರು ಕನ್ನಡಕ್ಕಾಗಿ ಕೆಲಸ ಮಾಡುತ್ತಿರುವ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು.

#canadian mp #chandra arya #nadoja dr mahesh joshi #kannada sahithya parishath #membership

More News