NO INVERSTIGATION FOR ESHWARAPPA: ಗುತ್ತಿಗೆದಾರ ಸಂತೋಷ್ ಪಾಟೀಲ್ ಪತ್ನಿ ರಾಜ್ಯಪಾಲರಿಗೆ ದೂರು: ಮಾಜಿ ಸಚಿವ ಈಶ್ವರಪ್ಪ ತನಿಖೆ ಏಕಿಲ್ಲ: ಪ್ರಶ್ನಿಸಿದ ಕಾಂಗ್ರೆಸ್ ನಾಯಕರು

ಬೆಂಗಳೂರು : ಗುತ್ತಿಗೆದಾರ ಸಂತೋಷ್ ಪಾಟೀಲ್ ಶೇಕಡಾ 40% ಕಮಿಷನ್ ವಿರುದ್ಧ ಧ್ವನಿ ಎತ್ತಿದ್ದರು, ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೆ, ಈ ವರೆಗೂ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಅವರ ತನಿಖೆಗೆ ಒಳಪಡಿಸಿಲ್ಲ, ಈ ಪ್ರಕರಣ ರಾಜ್ಯ ಸರ್ಕಾರ ನಿಷ್ಪಕ್ಷಪಾತ ತನಿಖೆ ನಡೆಸುತ್ತಿಲ್ಲ ಎಂದು ಸಂಸದ ಡಿ ಕೆ ಸುರೇಶ್ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣ ಸಂಬಂಧ ಸೂಕ್ತ ರೀತಿಯಲ್ಲಿ ತನಿಖೆ ನಡೆಸಬೇಕೆಂದು ಆಗ್ರಹಿಸಿ ಸಂತೋಷ್ ಪಾಟೀಲ್‌ ಪತ್ನಿ ರಾಜ್ಯಪಾಲರನ್ನು ಭೇಟಿ ಮಾಡಿ ದೂರು ನೀಡಿದ್ದಾರೆ. ಸರ್ಕಾರ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸುತ್ತಿದೆ ಎಂದು ಡಿ ಕೆ ಸುರೇಶ್ ಆಕ್ರೋಶ ವ್ಯಕ್ತಪಡಿಸಿದರು.
ಆದ್ದರಿಂದ ಈ ಪ್ರಕರಣವನ್ನು ಹೈಕೋರ್ಟ್ ಜಡ್ಜ್ ನೇತೃತ್ವದ ತನಿಖೆ ಮಾಡಬೇಕು, ಸಂತೋಷ್ ಪಾಟೀಲ್ ಅಷ್ಟೇ ಅಲ್ಲ, ಕಂಟ್ರಾಕ್ಟರ್ ಅಸೋಸಿಯೇಷನ್ ಕೂಡ ದೂರು ಕೊಟ್ಟಿತ್ತು, ಆದರೆ ಕೇಂದ್ರ ಸರ್ಕಾರ ಮಾತ್ರ ಸುಮ್ಮನಿದೆ, ಆದ್ದರಿಂದ ಎರಡೂ ಪ್ರಕರಣಗಳ ಸಂಬಂಧ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಐಟಿ, ಇಡಿ, ಸಿಬಿಐ ಸಂಸ್ಥೆಗಳು ಮಧ್ಯಪ್ರವೇಶ ಮಾಡಬೇಕಿತ್ತು, ಆದರೆ ಅದೂ ಆಗಲಿಲ್ಲ, ಬಿಜೆಪಿ ನಾಯಕರು ಪ್ರಕರಣ ಮುಚ್ಚಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ಈ ಸಂಬಂಧ ಶಾಸಕ ಪ್ರಿಯಾಂಕ್ ಖರ್ಗೆ ಅವರು ಟ್ವೀಟ್ ಮಾಡಿದ್ದು, ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ಪತ್ನಿ ರಾಜ್ಯಪಾಲರನ್ನು ಭೇಟಿ ಮಾಡಿ ತನಿಖೆಗೆ ಮನವಿ ಮಾಡಿರುವುದು ನೊಂದವರಿಗೆ ಸಿಗುವ ನ್ಯಾಯ ಇದೇನಾ ಎಂದು ಪ್ರಶ್ನಿಸಿದ್ದಾರೆ.

ತಮ್ಮ ಟ್ವೀಟ್ ನಲ್ಲಿ ಪತ್ರವನ್ನು ಅಪ್ ಲೋಡ್ ಮಾಡಿದ್ದು, ಇದುವರೆಗೂ ಆರೋಪಿ ಕೆ.ಎಸ್ ಈಶ್ವರಪ್ಪನವರ ತನಿಖೆ ನಡೆಸಿಲ್ಲವೇಕೆ? ಎಂದು ಪ್ರಶ್ನಿಸಿದ್ದಾರೆ. ತನಿಖೆ ನಡೆಯದೆ ಆರೋಪ ಮುಕ್ತನಾಗುತ್ತೇನೆ ಎಂಬ ವಿಶ್ವಾಸ ಮಾಜಿ ಸಚಿವರಿಗೆ ಬಂದಿದ್ದೇಕೆ? ಸಿಎಂ ಉತ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಬಡ ಮಕ್ಕಳ ಆಹಾರದ ಮೇಲೂ ಕಣ್ಣು ಹಾಕಿದೆ
ಶಾಲೆಗಳಲ್ಲಿ ಮೊಟ್ಟೆ ವಿತರಣೆ ಬೇಡ ಎಂಬ ಕೇಂದ್ರ ಹಾಗೂ ರಾಜ್ಯದ ನಿಲುವಿಗೆ ಖಾರವಾಗಿ ಪ್ರತಿಕ್ರಯಿಸಿದ ಸಂಸದ ಡಿ ಕೆ ಸುರೇಶ್, ಸರ್ಕಾರ ಬಡ ಮಕ್ಕಳ ಆಹಾರದ ಮೇಲೂ ಕಣ್ಣು ಹಾಕಿದೆ, ಇದರಿಂದ ಬಿಜೆಪಿ ಅಜೆಂಡಾ ಮುಂದೆ ಬರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರಲ್ಲದೆ. ಮಕ್ಕಳ ಪೌಷ್ಠಿಕಾಂಶ ವಿಚಾರದಲ್ಲೂ ರಾಜಕೀಯ ತರಬೇಡಿ ಎಂದು ಮನವಿ ಮಾಡಿದರು.
ಪಿಎಸ್ ಐ ಪ್ರಕರಣದಲ್ಲೂ ಸರಿಯಾದ ರೀತಿಯಲ್ಲಿ ತನಿಖೆ ಆಗುತ್ತಿಲ್ಲ
ಪಿಎಸ್ ಐ ಪ್ರಕರಣದಲ್ಲಿ ಸೂಕ್ತ ರೀತಿಯಲ್ಲಿ ತನಿಖೆಯಾಗುತ್ತಿಲ್ಲ ಎಂದು ಆರೋಪಿಸಿದ ಅವರು, ಇನ್ನು ಅನೇಕರು ಈ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ, ಇದರ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರ ಯಾವುದೇ ಒತ್ತಡಕ್ಕೆ ಮಣಿಯಬಾರದು, ಯಾರೇ ಆಗಲಿ ಒತ್ತಡ ಹಾಕಿದ್ರೆ ಸುಮ್ಮನಿರಬೇಡಿ, ರಾಜ್ಯದ ಪೊಲೀಸ್ ಇಲಾಖೆ ಗೌರವವನ್ನ ಉಳಿಸಬೇಕು, ಆರೋಪಿ ಸ್ಥಾನದಲ್ಲಿ ಇದ್ದೀರ ಅಂತ ಅನ್ಯತಾ ಬಾವಿಸಬೇಡಿ, ಮಾಹಿತಿ ನೀಡಿ ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಅತಿವೃಷ್ಠಿ ಇದೆ ಆದರೆ, ಸಚಿವರಿಗೆ ಬಿಜೆಪಿ ಸಭೆ ಮುಖ್ಯವಾಗಿದೆ, ಕಳೆದ ಬಾರಿಯ ಅತಿವೃಷ್ಟಿಯ ಪರಿಹಾರ ಇದುವರೆಗೂ ನೀಡಿಲ್ಲ, ಇಲ್ಲ ಸಲ್ಲದ ಸಬೂಬುಗಳನ್ನ ಹೇಳುತ್ತಾರೆ, ಅವರಿಗೆ ರೈತರನ್ನ ಕಂಗಾಲು ಮಾಡಬೇಕು ಅಷ್ಟೇ, ಅವರಿಗೆ ಬೇಕಾಗಿರೋದು ಕಮೀಷನ್, ಒಎಂಆರ್ ಶೀಟ್ ತಿದ್ದೋದಷ್ಟೇ ಆಗಿದೆ ಎಂದು ಕಿಡಿಕಾರಿದರು.

More News