CM SHOULD ANSWER: ಶಾಂತಿ ಕದಡುತ್ತಿರುವವರು ಹಾಗೂ ಮುಖ್ಯಮಂತ್ರಿ ಅವರು ಬಾಗಲಕೋಟೆಯ ಮಹಿಳೆಗೆ ಉತ್ತರ ನೀಡಬೇಕು : ಡಿ.ಕೆ. ಶಿವಕುಮಾರ್

ಮೈಸೂರು : ಬಾಗಲಕೋಟೆಯಲ್ಲಿ ಸಿದ್ದರಾಮಯ್ಯ ಅವರು ಕೊಟ್ಟ ಪರಿಹಾರವನ್ನು ಬಿಸಾಕಿದ ಮಹಿಳೆ ನಮಗೆ ಹಣ ಬೇಡ, ಶಾಂತಿ ಬೇಕು ಎಂದು ಹೇಳಿರುವ ಕುರಿತು ಪ್ರತಿಕ್ರಯಿಸಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಈ ವಿಚಾರವಾಗಿ ರಾಜ್ಯದ ಮುಖ್ಯಮಂತ್ರಿಗಳನ್ನು ಕೇಳಬೇಕು. ಶಾಂತಿ ಕದಡುತ್ತಿರುವವರಿಗೆ ಈ ಪ್ರಶ್ನೆ ಕೇಳಬೇಕು ಎಂದಿದ್ದಾರೆ.
ಮೈಸೂರಿನಲ್ಲಿ ಚಾಮುಂಡೇಶ್ವರಿ ದೇವಿಯ ಪೂಜೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆಮ್ಮದಿ ಹಾಗೂ ರಕ್ಷಣೆ ಕೇಳಿರುವುದರಲ್ಲಿ ತಪ್ಪಿಲ್ಲ. ನಾವು ಜನಪ್ರತಿನಿಧಿಗಳು ಎಲ್ಲ ಜನರನ್ನು ರಕ್ಷಿಸುತ್ತೇವೆ, ಸಂವಿಧಾನದ ಆಶಯದಂತೆ ನಡೆದುಕೊಳ್ಳುತ್ತೇವೆ ಎಂದು ಪ್ರಮಾಣ ವಚನ ಸ್ವೀಕರಿಸಿದ್ದು, ನಾವು ಅವರಿಗೆ ರಕ್ಷಣೆ ನೀಡಬೇಕಿದೆ. ಸರ್ಕಾರ ಹಾಗೂ ರಾಜ್ಯದ ನಾಯಕತ್ವ ವಹಿಸಿಕೊಂಡಿರುವವರು ಈ ಬಗ್ಗೆ ಮೊದಲು ಗಮನ ವಹಿಸಬೇಕು. ರಾಜ್ಯದ ಅಲ್ಪಸಂಖ್ಯಾತ ವರ್ಗದ ಜನ ನೊಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ವಿರೋಧ ಪಕ್ಷದ ನಾಯಕರು ಸಹಾಯ ಮಾಡಲು ಹೋದಾಗ ನೊಂದವರ ಭಾವನೆ ವ್ಯಕ್ತವಾಗಿದ್ದು, ಇದನ್ನು ಸರ್ಕಾರ ಗಮನಿಸಬೇಕು, ಎಚ್ಛೆತ್ತುಕೊಳ್ಳಬೇಕು ಎಂದರು.
ಬೇರೆ ದೇಶಗಳಲ್ಲಿ ಆಗುತ್ತಿರುವ ಬೆಳವಣಿಗೆಗಳು ನಮ್ಮ ದೇಶ ಹಾಗೂ ರಾಜ್ಯದಲ್ಲಿ ಆಗಬಾರದು. ನಮಗೆ ಬಸವಣ್ಣ, ಕುವೆಂಪು, ಶಿಶುನಾಳ ಷರೀಫರು, ಕನಕದಾಸರ ಕರ್ನಾಟಕ ಬೇಕು. ರಾಜ್ಯ ಹಾಗೂ ದೇಶದಲ್ಲಿ ಜನರನ್ನು ವಿಭಜನೆ ಮಾಡುತ್ತಿರುವ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರು ಭಾರತವನ್ನು ಜೋಡಿಸುವ ಪಾದಯಾತ್ರೆ ಮೂಲಕ ಇಡೀ ಭಾರತ ಒಂದೇ ತಾಯಿಯ ಮಕ್ಕಳು ಎಂಬ ಸಂದೇಶ ಸಾರಲು ಮುಂದಾಗಿದ್ದಾರೆ’ ಎಂದು ತಿಳಿಸಿದರು.
ರಾಷ್ಟ್ರ ಲಾಂಚನ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಈ ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಯಾವ ಲಾಂಚನ ಇತ್ತೊ ಅದನ್ನೇ ಮುಂದುವರಿಸಿಕೊಂಡು ಹೋಗಬೇಕು. ಲಾಂಚನದಲ್ಲಿ ಶಾಂತಿಯ ಸಿಂಹವೇ ಇರಬೇಕೇ ಹೊರತು ಘರ್ಜನೆಯ ಸಿಂಹ ಬರಬಾರದು. ದೇಶದಲ್ಲಿ ಶಾಂತಿ ಇರಬೇಕೇ ಹೊರತು ಘರ್ಜನೆ ಇರಬಾರದು’ ಎಂದು ತಿಳಿಸಿದರು.

75ನೇ ಸ್ವಾತಂತ್ರ್ಯೋತ್ಸವ ಆಚರಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿರುವ ಕಾರ್ಯಕ್ರಮ ಕುರಿತು ಕೇಳಿದ ಪ್ರಶ್ನೆಗೆ, ‘ರಾಹುಲ್ ಗಾಂಧಿ ಅವರ ನೇತೃತ್ವದ ಪಾದಯಾತ್ರೆ ಕೇರಳದಿಂದ ಚಾಮರಾಜನಗರ ಮಾರ್ಗವಾಗಿ ರಾಜ್ಯವನ್ನು ಪ್ರವೇಶಿಸಲಿದೆ. ಸುಮಾರು 350 ಕ್ಕೂ ಹೆಚ್ಚು ಕಿ.ಮೀ ಉದ್ದದ ಪಾದಯಾತ್ರೆ ರಾಜ್ಯದಲ್ಲಿ ನಡೆಯಲಿದೆ. ನಾಳೆ ಸಂಜೆ ಸುರ್ಜೆವಾಲ ಅವರು ಪಕ್ಷದ ಪದಾಧಿಕಾರಿಗಳು, ಶಾಸಕರು, ಪರಾಜಿತ ಅಭ್ಯರ್ಥಿಗಳ ಜತೆ ಜೂಮ್ ನಲ್ಲಿ ಸಭೆ ನಡೆಸಲಿದ್ದಾರೆ.

ಈ ಮಧ್ಯೆ ಸೋನಿಯಾ ಗಾಂಧಿ ಅವರಿಗೆ ಸಮನ್ಸ್ ನೀಡಿರುವ ವಿಚಾರವಾಗಿಯೂ ಚರ್ಚೆ ಮಾಡುತ್ತೇವೆ. ಆ.1 ರಿಂದ ಆ.10 ರವರೆಗೂ ಪ್ರತಿ ಜಿಲ್ಲೆಯಲ್ಲಿ 75 ಕಿ.ಮೀ ಪಾದಯಾತ್ರೆ ಮಾಡಲಾಗುವುದು. ನಂತರ ಆ.15 ರಂದು 1 ಲಕ್ಷ್ಕ್ಕೂ ಹೆಚ್ಚು ಜನ ಪಕ್ಷಾತೀತವಾಗಿ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜ ಹಿಡಿದು ಹೆಜ್ಜೆ ಹಾಕಲಿದ್ದಾರೆ. ಈ ದೇಶಕ್ಕೆ ಸ್ವಾತಂತ್ರ್ಯ, ರಾಷ್ಟ್ರಧ್ವಜ, ರಾಷ್ಟ್ರಗೀತೆ, ಸಂವಿಧಾನ ಕೊಟ್ಟದ್ದು, ದೇಶವನ್ನು ಅಭಿವೃದ್ಧಿಶೀಲ ರಾಷ್ಟ್ರ ಮಾಡಿದ್ದು ಕಾಂಗ್ರೆಸ್’ ಎಂದು ಉತ್ತರಿಸಿದರು.

ಸಿದ್ದರಾಮಯ್ಯ ಅವರ ಹುಟ್ಟುಹಬ್ಬ ವಿಚಾರವಾಗಿ ಬಿಜೆಪಿಗೆ ಹೆಚ್ಚು ಆಸಕ್ತಿ ಇದ್ದಂತಿದೆ ಎಂದು ಕೇಳಿದಾಗ, ‘ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನುಡಿದಂತೆ ನಡೆದು ಆಡಳಿತ ನಡೆಸಿರುವ ಬಗ್ಗೆ ಹಾಗೂ ಅಧಿಕಾರ ಇದ್ದಾಗ ಎಲ್ಲ ಇಲಾಖೆಗಳಲ್ಲಿನ ಸಾಧನೆ ತಿಳಿಸಲಾಗುವುದು. ಹಾಲು, ಅಕ್ಕಿ, ರಸ್ತೆ, ರೈತ ಹಾಗೂ ಕೃಷಿ ವಿಚಾರಗಳ ಬಗ್ಗೆ ಜನರಿಗೆ ಮುಟ್ಟಿಸುವ ಕಾರ್ಯಕ್ರಮ ಇದಾಗಿದೆ’ ಎಂದು ತಿಳಿಸಿದರು.
ಬಿಜೆಪಿ ಸಭೆ ಕುರಿತು ಕೇಳಿದ ಪ್ರಶ್ನೆಗೆ, ‘ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಹೆಚ್ಚಾಗಿದ್ದು, ಈ ಆಕ್ರೋಶ ಹೆಚ್ಚಾಗುವ ಮುನ್ನ ಚುನಾವಣೆ ಮಾಡಬೇಕು ಎಂದು ಬಿಜೆಪಿ ಪ್ರಯತ್ನಿಸುತ್ತಿದೆ ಎಂಬ ಸುದ್ದಿ ಇದೆ. ಪಕ್ಷದ ಸಂಘಟನೆ ಮಾಡುತ್ತಿದ್ದಾರೋ ಅಥವಾ ಸುದ್ದಿ ಹರಡಿಸುತ್ತಿದ್ದಾರೋ ಗೊತ್ತಿಲ್ಲ. ಯಾವುದೇ ಸಂದರ್ಭದಲ್ಲಿ ಚುನಾವಣೆ ಬಂದರೂ ಅದನ್ನು ಎದುರಿಸಲು ಕಾಂಗ್ರೆಸ್ ಸಿದ್ಧವಿದೆ’ ಎಂದು ಉತ್ತರಿಸಿದರು.

More News