ವಿಜಯಪುರ: ವಿಜಯಪುರದಲ್ಲಿ ನಾಲ್ಕು ವರ್ಷದ ಗಂಡು ಮಗುವನ್ನು ಕಳ್ಳತನ ಮಾಡಲು ಯತ್ನಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಿದ ಸಾರ್ವಜನಿಕರು ಆತನನ್ನು ಕಂಬಕ್ಕೆ ಕಟ್ಟಿಹಾಕಿ ನಂತರ ಪೊಲೀಸರಿಗೆ ಒಪ್ಪಿಸಿದ ಘಟನೆ ವಿಜಯಪುರದ ಬಸವನನಗರದಲ್ಲಿ ಇಂದು ನಡೆದಿದೆ.
ಮಗವನ್ನು ಎತ್ತಿಕೊಂಡ ಹೋಗುತ್ತಿದ್ದ ವ್ಯಕ್ತಿಯನ್ನು ನೋಡಿದ ಮಗುವಿನ ತಾಯಿ ರೇಣುಕಾ, ಕಳ್ಳನ ಬೆನ್ನಟ್ಟಿ ಕಳ್ಳನಿಂದ ಮಗು ರಕ್ಷಿಸಿದ್ದಾರೆ. ಬಳಿಕ ಕಳ್ಳನನ್ನು ಸಾರ್ವಜನಿಕರು ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ಜನ ಜಮಾಯಿಸಿದ್ದು ನೋಡಿ ಮಾನಸಿಕ ಅಸ್ವಸ್ಥನಂತೆ ಕಳ್ಳ ನಾಟಕವಾಡಿದ್ದ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಹೆಸರು ಕೇಳಿದ್ರೆ ಹಲವು ಹೆಸರು ಹೇಳಿ ಮಾನಸಿಕ ಅಸ್ವಸ್ಥನಂತೆ ವರ್ತನೆ ಮಾಡಿದ ಕಳ್ಳ, ಅಂಗಡಿಗೆ ಬಂದಿದ್ದ ಮಗುವನ್ನು ಕದ್ದುಕೊಂಡು ಹೋಗಲು ಯತ್ನಿಸಿದ್ದ ಎಂದು ಹೇಳಲಾಗಿದೆ. ಮಗು ಅಳುವ ದ್ವನಿ ಕೇಳಿ ತಾಯಿ ರೇಣುಕಾ ಕಳ್ಳನ ಬೆನ್ನಟ್ಟಿ ಹಿಡಿದು ಮಗುವಿನ ರಕ್ಷಣೆ ಮಾಡಿದ್ದಾರೆ.

ನಂತರ ಕಳ್ಳನನ್ನ ಸ್ಥಳೀಯರು ಪೋಲಿಸರಿಗೆ ಒಪ್ಪಿಸಿದ್ದಾರೆ. ವಿಜಯಪುರ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.




