ಶಿವಮೊಗ್ಗ : ಕುಟುಂಬ ರಾಜಕಾರಣಕ್ಕೆ ಬಿಜೆಪಿ ಹೈಕಮಾಂಡ್ ಟಿಕೇಟ್ ನಿರಾಕರಣೆ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೊಸ ದಾಳ ಉರುಳಿಸಿದ್ದಾರೆ. ತಮ್ಮ ಸ್ವಕ್ಷೇತ್ರ ಶಿಕಾರಿಪುರವನ್ನು ತಮ್ಮ ಪುತ್ರನಿಗೆ ಬಿಟ್ಟುಕೊಟ್ಟು ಚುನಾವಣಾ ರಾಜಕೀಯದಿಂದ ಯಡಿಯೂರಪ್ಪ ಹಿಂದೆ ಸರಿದಿದ್ದಾರೆ.
ಇದರಿಂದ ವರಿಷ್ಠರ ಮೇಲೆ ತಮ್ಮ ಇಬ್ಬರು ಪುತ್ರರಿಗೆ ಮಾತ್ರ ಟಿಕೇಟ್ ನೀಡಿ ತಮಗೆ ಬೇಡ ಎಂಬ ಸ್ಪಷ್ಟ ಸಂದೇಶ ರವಾನೆ ಮಾಡಿದ್ದು, ಮುಂಬರುವ ದಿನಗಳಲ್ಲಿ ಒಂದೇ ಕುಟುಂಬದ ಇಬ್ಬರು ಸಹೋದರರಿಗೆ ಟಿಕೇಟ್ ಅನ್ನು ಹೈಕಮಾಂಡ್ ನೀಡುತ್ತದಾ ಎನ್ನುವುದು ಇದೀಗ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಪುತ್ರ ಬಿ ವೈ ವಿಜಯೇಂದ್ರ ಅವರು ಕೆ ಆರ್ ಪೇಟೆ, ಮೈಸೂರು, ಮಂಡ್ಯ ಮುಂತಾದ ಕಡೆಗಳಲ್ಲಿ ವಿಧಾನಸಭೆಗೆ ಸ್ಪರ್ಧಿಸುತ್ತಾರೆ ಎಂಬಿತ್ಯಾದಿ ಉಹಾಪೋಹಗಳಿಗೆ ಇಂದು ಸ್ವತ ಬಿ ಎಸ್ ಯಡಿಯೂರಪ್ಪ ಅವರೇ ಫುಲ್ ಸ್ಟಾಪ್ ಹಾಕಿದ್ದಾರೆ.
ಶಿಕಾರಿಪುರ ಕ್ಷೇತ್ರವನ್ನು ನಾನು ಬಿಟ್ಟುಕೊಡುತ್ತಿರುವುದರಿಂದ ತಮ್ಮ ಪುತ್ರ ವಿಜಯೇಂದ್ರ ಇಲ್ಲಿಂದ ಸ್ಪರ್ಧೆ ಮಾಡಲಿದ್ದಾರೆ ಎಂದು ಘೋಷಣೆ ಮಾಡುವುದರ ಮೂಲಕ ತಾವು ಸಕ್ರೀಯ ಚುನಾವಣಾ ರಾಜಕೀಯದಿಂದ ಹಿಂದೆ ಸರಿದಿದ್ದಾರೆ. ಇಲ್ಲಿ ಅನೇಕ ಲೆಕ್ಕಚಾರಗಳು ಕೂಡಿವೆ. ಒಂದೇ ಕುಟಂಬಕ್ಕೆ ಮೂರು ಟಿಕೇಟ್ ಹಾಗೂ ವಯಸ್ಸು ಸೇರಿದಂತೆ ಎಲ್ಲವೂ ಮಾನದಂಡಗಳನ್ನು ಬಿಜೆಪಿ ಹೈಕಮಾಂಡ್ ಅನುಸರಿಸುತ್ತಿರುವುದರಿಂದ ಚುನಾವಣೆಗೂ ಮುನ್ನಾ ಯಡಿಯೂರಪ್ಪ ಸೇಫ್ ಬ್ಯಾಂಟಿಂಗ್ ಮಾಡಿದ್ದಾರೆ.

ಈ ಮೂಲಕ ವರಿಷ್ಠರಿಗೆ ಸ್ಪಷ್ಟ ಸಂದೇಶ ರವಾನೆ ಮಾಡಿರುವ ಬಿ ಎಸ್ ಯಡಿಯೂರಪ್ಪ ಅವರು, ತಮ್ಮ ಪುತ್ರರಿಗೆ ಟಿಕೇಟ್ ಗ್ಯಾರಂಟಿ ಮಾಡಿದರೆ ಮಾತ್ರ ತಾವು ಇನ್ನು ಮುಂದೆ ಪಕ್ಷದ ಕೆಲಸ ಮಾಡಬೇಕಾಗುತ್ತದೆ, ಹೆಚ್ಚಿನ ಸೀಟು ಗೆಲ್ಲಿಸಿಕೊಡುವಲ್ಲಿ ಕೆಲಸ ಮಾಡುವ ಸಂದೇಶ ರವಾನೆ ಮಾಡಿದ್ದಾರೆ.
ಶಿವಮೊಗ್ಗದಲ್ಲಿ ಇಂದು ಅಂಜನಾಪುರ ಜಲಾಶಯಕ್ಕೆ ಬಾಗಿನ ಸಲ್ಲಿಸಿದ ನಂತರ ಈ ವಿಷಯ ತಿಳಿಸಿದ ಅವರು, ಮೈಸೂರು ಭಾಗದಲ್ಲಿ ವಿಜಯೇಂದ್ರ ಸ್ಪರ್ಧೆಗೆ ತುಂಬಾ ಒತ್ತಡವಿದೆ, ಆದರೆ, ಇಲ್ಲಿ ಸ್ಥಾನ ತೆರವಾಗುವುದರಿಂದ ಅವರು ಸ್ಪರ್ಧಿಸುತ್ತಾರೆ ಎಂದು ಹೇಳುವುದರ ಮೂಲಕ ತಮ್ಮ ಶಿಕಾರಿಪುರ ಕ್ಷೇತ್ರವನ್ನು ಯಡಿಯೂರಪ್ಪ ಅವರು ಬಿಟ್ಟುಕೊಟ್ಟರು.

ಬಹಳ ದೊಡ್ಡ ಅಂತರದಿಂದ, ನನಗಿಂತ ದೊಡ್ಡ ಅಂತರದಿಂದ ಶಿಕಾರಿಪುರ ಜನರು ಗೆಲ್ಲಿಸಬೇಕೆಂದು ಯಡಿಯೂರಪ್ಪ ಅವರು ತಮ್ಮ ಕ್ಷೇತ್ರದ ಮತದಾರರಲ್ಲಿ ಮನವಿ ಮಾಡಿಕೊಂಡರು.
ಒತ್ತಡದ ನಿರ್ಧಾರವಲ್ಲ ವಿಜಯೇಂದ್ರ
ಇದೇ ಸಂದರ್ಭದಲ್ಲಿ ಸ್ಥಳದಲ್ಲಿ ಉಪಸ್ಥಿತರಿದ್ದ ಪುತ್ರ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ, ತಂದೆಯವರ ಮಾರ್ಗದರ್ಶನ ಹಾಗೂ ಪಕ್ಷದ ನಿರ್ಧಾರದಂತೆ ನಡೆದುಕೊಳ್ಳುತ್ತೇನೆ, ರಾಜ್ಯ ಉಪಾಧ್ಯಕ್ಷನಾಗಿ ರಾಜ್ಯಾದ್ಯಂತ ಪ್ರವಾಸ ಮಾಡೋದು ನನ್ನ ಆದ್ಯ ಕರ್ತವ್ಯ, ಹಿಂದಿನಿಂದಲೂ ಅದನ್ನೇ ಮಾಡಿದ್ದೇನೆ. ಮುಂದೆನೂ ಮಾಡುತ್ತೇನೆ ಎಂದು ತಿಳಿಸಿದರು.
ಶಿಕಾರಿಪುರದ ಮುಖಂಡರು, ಕಾರ್ಯಕರ್ತರು ತಂದೆಯ ಮೇಲೆ ಒತ್ತಡ ಹೇರಿದ್ದರು, ತಿಂಗಳ ಹಿಂದೆ ಬೆಂಗಳೂರಿಗೂ ಬಂದು, ಒತ್ತಡ ಕೂಡ ಹಾಕಿದ್ದರು, ಅದರಂತೆ ತಂದೆಯವರು ಇಂದು ತೀರ್ಮಾನ ಪ್ರಕಟಿಸಿದ್ದಾರೆ, ಇದರ ಜೊತೆ ಪಕ್ಷ ಏನು ತೀರ್ಮಾನ ಮಾಡುತ್ತೇ. ಅದನ್ನು ಅಧರಿಸಿ, ನಾನು ನಿರ್ಧಾರ ಮಾಡುತ್ತೇನೆ ಎಂದು ಅಭಿಪ್ರಾಯಪಟ್ಟರು.

ಈ ವಿಚಾರದಲ್ಲಿ ನಾನು ತಂದೆ ಮೇಲೆ ಒತ್ತಡ ಹಾಕುವ ಪ್ರಶ್ನೆಯೇ ಉದ್ಭವಿಸಲ್ಲ, ಯಡಿಯೂರಪ್ಪನವರಿಗೆ ನಿವೃತ್ತಿ ಅನ್ನೋದೇ ಇಲ್ಲ, ಅವರ ಡಿಕ್ಷನರಿಯಲ್ಲಿ ನಿವೃತ್ತಿ ಎನ್ನುವ ಪದ ಇಲ್ಲ. ಹಿಂದೆ ಕೂಡ ಬಿಜೆಪಿ ಸಂಘಟನೆ ಕೆಲಸ ಮಾಡಿದ್ರು, ಮುಂದೆನೂ ಮಾಡುತ್ತಾರೆ, ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುವ ವೇಳೆ ಹೇಳಿದ್ದರು. ಬಿಜೆಪಿಯನ್ನು ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ತರುತ್ತೇನೆ. ಈ ಬಗ್ಗೆ ವಿಪಕ್ಷಗಳಿಗೆ ಸವಾಲು ಕೂಡ ಹಾಕಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಪ್ರವಾಸ ಕೂಡ ಮಾಡುತ್ತಾರೆ ಎಂದು ವಿಜಯೇಂದ್ರ ತಿಳಿಸಿದರು. ತಂದೆ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದಾರೆ. ಆದರೆ, ಪಾರ್ಟಿ ಹೈಕಮಾಂಡ್ ಇದಕ್ಕೆ ಒಪ್ಪಿಗೆ ನೀಡಬೇಕು.
#BYVIJAYENDRA #BSYEDIYURAPPA #SHIKARIPURA #ACTIVE POLITICS #FAMILY DYNESTY #BJP #PARTY HIGHCOMMAND




