ನವದೆಹಲಿ : ಪಶ್ಚಿಮ ಬಂಗಾಳದ ಹೌರಾದಲ್ಲಿ ಭಾರೀ ಮೊತ್ತದ ಹಣದೊಂದಿಗೆ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಜಾರ್ಖಂಡ್ ಮೂಲದ ಮೂವರು ಶಾಸಕರನ್ನು ಕಾಂಗ್ರೆಸ್ ಅಮಾನತು ಮಾಡಿದೆ.
ಜಾರ್ಖಂಡ್ ನಲ್ಲಿ ಬಿಜೆಪಿಯ ಸಮ್ಮಿಶ್ರ ಸರ್ಕಾರ ಅಸ್ಥಿತ್ವದಲ್ಲಿದ್ದು ಅದನ್ನು ಉರುಳಿಸಲು ಈ ಮೂವರು ಶಾಸಕರು ಹಣ ಕೊಂಡೊಯ್ಯುತ್ತಿದ್ದರು ಎಂದು ಬಿಜೆಪಿ ಆರೋಪ ಮಾಡಿದ್ದತ್ತು. ತಕ್ಷಣವೇ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಜಾರ್ಖಂಡ್ ಉಸ್ತುವಾರಿ ಅವಿನಾಶ್ ಪಾಂಡೆ, ತಕ್ಷಣದಿಂದ ಜಾರಿಗೆ ಬರುವಂತೆ ಮೂವರು ಶಾಸಕರನ್ನು ಪಕ್ಷದಿಂದ ಅಮಾನತ್ತು ಮಾಡಲಾಗಿದೆ ಎಂದು ತಿಳಿಸಿದರು.
ಜಾರ್ಖಂಡ್ ನ ಮೂವರು ಶಾಸಕರು ತೆರಳುತ್ತಿದ್ದ ವಾಹನವನ್ನು ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿ ಪೊಲೀಸರು ಶನಿವಾರ ರಾತ್ರಿ ತಪಾಸಣೆ ನಡೆಸಿದಾಗ 48 ಲಕ್ಷ ರೂಪಾಯಿ ಹಣ ಪ್ತತೆಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಶಾಸಕರಾದ ಇರ್ಫಾನ್ ಅನ್ಸಾರಿ, ರಾಜೇಶ್ ಕಚ್ಚಪ್ ಮತ್ತು ನಮನ್ ಬಿಕ್ಸಲ್ ಕೊಂಗಲಿ ಅವರು ಸಂಚರಿಸುತ್ತದ್ದ ವಾಹನದಲ್ಲಿ ಹಣ ಸಾಗಿಸಲಾಗುತ್ತಿದೆ ಎಂಬ ಮಾಹಿತಿಯ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಿದ್ದಾರೆ. ಆವಾಗ ಈ ಹಣ ಪತ್ತೆಯಾಗಿದೆ. ಪೊಲೀಸರು ಶಾಸಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಇಡಿ ಮೂಲಕ ಕಾರ್ಯಗತಗೊಳಿಸಿದ ಯೋಜನೆಯನ್ನೇ ಜಾರ್ಖಂಡ್ ನಲ್ಲಿ ಮಾಡಲು ಯತ್ನಿಸಲಾಗುತ್ತಿದೆ ಎಂದು ಕಾಂಗ್ರೆಸ್ ರಾಜ್ಯ ಸಭಾ ಸಂಸದ ಜೈರಾಮ್ ರಮೇಶ್ ಮಾರ್ಮಿಕವಾಗಿ ಪೋಸ್ಟ್ ಮಾಡಿ, ಬಿಜೆಪಿ ಕಾಲೆಳೆದಿದ್ದಾರೆ.




