FUNDS RELEASING FOR PENDING WORKS: ಬಿಬಿಎಂಪಿ ಚುನಾವಣೆ: ಬಾಕಿ ಉಳಿದಿರುವ ಕಾಮಗಾರಿಗೆ ಕೂಡಲೇ ಹಣ ಬಿಡುಗಡೆ: ಸಚಿವ ಆರ್ ಅಶೋಕ್

ಬೆಂಗಳೂರು : ಬೆಂಗಳೂರು ನಗರದಲ್ಲಿ ಬಾಕಿ ಉಳಿದಿರುವ ಕಾಮಗಾರಿಗೆ ಕೂಡಲೇ ಹಣ ಬಿಡುಗಡೆ ಮಾಡಲಾಗುವುದು ಎಂದು ಸಚಿವ ಆರ್ ಅಶೋಕ್ ತಿಳಿಸಿದ್ದಾರೆ. ಇದರಿಂದ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಅಧಿಕಾರ ಬಳಸಿ ಚುನಾವಣೆ ನಡೆಸಲು ಆಡಳಿತರೂಢ ಬಿಜೆಪಿ ಸಿದ್ದವಾಗಿದೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬಿಬಿಎಂಪಿ ಗೆಲುವಿನ ಕಾರ್ಯತಂತ್ರ ಕುರಿತು ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರು ಸೂಚನೆಗಳನ್ನು ಕೊಟ್ಟಿದ್ದಾರೆ. ನಾವೆಲ್ಲರೂ ಸಾಮೂಹಿಕವಾಗಿ ಪಕ್ಷದ ಗೆಲುವಿಗಾಗಿ ಶ್ರಮಿಸಲಿದ್ದೇವೆ ಎಂದರು.
ಬೆಂಗಳೂರಿನ ನಮ್ಮೆಲ್ಲ ಶಾಸಕರು, ಎಲ್ಲ ಪದಾಧಿಕಾರಿಗಳು ಎರಡು ಗಂಟೆಗಳ ಕಾಲ ಬಿಬಿಎಂಪಿ ಚುನಾವಣೆ ಬಗ್ಗೆ ಚರ್ಚೆ ಮಾಡಿದ್ದೇವೆ. ಈಗಾಗಲೇ ಕೋರ್ಟ್ ನಿರ್ದೇಶನವೂ ಬಂದಿದೆ. ಮೀಸಲಾತಿ ಪ್ರಕಟಿಸಿ, ಮತದಾರರ ಪಟ್ಟಿ ಅಂತಿಮಗೊಳಿಸುವುದು ಇತ್ಯಾದಿ ಪ್ರಕ್ರಿಯೆ ನಡೆಸಲು ತಿಳಿಸಲಾಗಿದೆ.

ಮುಖ್ಯಮಂತ್ರಿಗಳು ನೀಡಿದ ಅನುದಾನದ ಕೆಲಸಗಳು ಕೂಡಲೇ ಆರಂಭಗೊಳ್ಳುವಂತೆ ನೋಡಿಕೊಳ್ಳಲಾಗುವುದು. ಪ್ರತಿ ಶಾಸಕರು ಹಾಗೂ ನಮ್ಮ ಶಾಸಕರು ಇಲ್ಲದ ಪ್ರದೇಶದಲ್ಲಿ ಸಂಸದರು- ಎಂಎಲ್‍ಸಿಗಳಿಗೆ ಜವಾಬ್ದಾರಿ ಕೊಡಲಾಗುವುದು ಎಂದು ವಿವರಿಸಿದರು.
ಆಪ್, ಎಸ್‍ಡಿಪಿಐ, ಕೆಎಫ್‍ಡಿ, ಕೆಆರ್‍ಎಸ್ ಪಕ್ಷಗಳನ್ನು ಎದುರಿಸುವ ಬಗ್ಗೆ ಹಾಗೂ ಬಿಜೆಪಿ ಗೆದ್ದು ಅಧಿಕಾರ ಪಡೆಯುವ ಕುರಿತಂತೆ ಚರ್ಚೆ ನಡೆದಿದೆ. ಅಧಿಕಾರಿಗಳು ಮೀಸಲಾತಿ ಪ್ರಕ್ರಿಯೆಯನ್ನು ಈಗಾಗಲೇ ಆರಂಭಿಸಿದ್ದಾರೆ. ಮುಖ್ಯಮಂತ್ರಿಗಳು ಈ ಕುರಿತು ನಿರ್ಧರಿಸಲಿದ್ದಾರೆ ಎಂದು ಅವರು ಪ್ರಶ್ನೆಗೆ ಉತ್ತರಿಸಿದರು.
ಆಮ್ ಆದ್ಮಿ ಪಕ್ಷ ಉತ್ತರ ಭಾರತದಲ್ಲಿ ಪ್ರಭಾವ ಬೀರಬಹುದು. ದಕ್ಷಿಣ ಭಾರತದಲ್ಲಿ ಒಂದೇ ಒಂದು ಪಾಲಿಕೆ ಸೀಟನ್ನೂ ಗೆಲ್ಲಲಾಗದು ಎಂದು ತಿಳಿಸಿದರು. ಎಸ್‍ಡಿಪಿಐ, ಪಿಎಫ್‍ಐ ನಿಷೇಧಿಸುವ ಕುರಿತು ಕೇಂದ್ರ ಸರಕಾರವು ತೀರ್ಮಾನ ಕೈಗೊಳ್ಳಲಿದೆ ಎಂದರು.

More News