AMIT SHAH STATE VISIT: ರಾಜ್ಯಕ್ಕೆ ಬಿಜೆಪಿ ವರಿಷ್ಠ, ಕೇಂದ್ರ ಗೃಹ ಸಚಿವ ಅಮಿತ್ ಷಾ ದಿಢೀರ್ ಭೇಟಿ: ಬಿಜೆಪಿ ಮುಖಂಡರಲ್ಲಿ ತಲ್ಲಣ

ಬೆಂಗಳೂರು : ಮಂಗಳೂರು ಪ್ರವೀಣ್ ನೆಟ್ಯಾರು ಹತ್ಯೆ ಪ್ರಕರಣದಿಂದ ಬಿಜೆಪಿ ನೇತೃತ್ವದ ಸರ್ಕಾರ ಆಂತರಿಕವಾಗಿ ಪದಾಧಿಕಾರಿಗಳ ಆಕ್ರೋಶಕ್ಕೆ ತುತ್ತಾಗಿರುವ ಹಿನ್ನಲೆ ಪಕ್ಷದ ರಾಷ್ಟ್ರೀಯ ನಾಯಕ ಹಾಗೂ ಕೇಂದ್ರದ ಗೃಹ ಸಚಿವ ಅಮಿತ್ ಷಾ ದಿಢೀರ್ ಆಗಿ ರಾಜ್ಯ ಭೇಟಿಗೆ ಮುಂದಾಗಿದ್ದಾರೆ.
ರಾಜ್ಯದಲ್ಲಿ ಪಕ್ಷಕ್ಕೆ ಆಗಿರುವ ಡ್ಯಾಮೇಜ್ ಕಂಟ್ರೋಲ್ ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮುಂದಾಗಿದ್ದು, ಇದರಿಂದ ರಾಜ್ಯ ಬಿಜೆಪಿಯಲ್ಲಿ ತಲ್ಲಣ ಮೂಡಿಸಿದೆ. ಅಮಿತ್ ಷಾ ಅವರ ಅನಿರೀಕ್ಷಿತ ರಾಜ್ಯ ಭೇಟಿ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರಲ್ಲಿ ನಡುಕ ಶುರುವಾಗಿದೆ.
ರಾಜ್ಯ‌ ನಾಯಕರಿಗೆ ಅಮಿತ್ ಶಾ ಆಗಮನದ ಬಗ್ಗೆ ಮಾಹಿತಿಯನ್ನು ನೀಡದೆ ಏಕಾಏಕಿ ಆಗಮಿಸುತ್ತಿರುವ ಅವರು, ಪಕ್ಷದ ಆಂತರಿಕ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಮುಂದಾಗಿದ್ದಾರೆ. ಅಮಿತ್ ಶಾ ಆಗಮನದ ಬಳಿಕ ರಾಜ್ಯ ರಾಜಕೀಯ ಚಿತ್ರಣ ಬದಲಾಗುವ ಸಾಧ್ಯತೆಗಳು ನಿಶ್ಚಲವಾಗಿವೆ.
ಕಾರ್ಯಕರ್ತರ ಅಸಮಾಧಾನ
ಪ್ರವೀಣ್ ನೆಟ್ಟಾರ್ ಹತ್ಯೆ ಬೆನ್ನಲ್ಲೇ ರಾಜ್ಯದಲ್ಲಿ ಹಿಂದೂ ಸಂಘಟನೆಗಳ ಹಾಗೂ ಬಿಜೆಪಿ ಪಕ್ಷದ ಕಾರ್ಯಕರ್ತರು ಸರ್ಕಾರದ ವಿರುದ್ಧ ಬಹಿರಂಗ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ನಿರುಪಯುಕ್ತ ಸಿಎಂ, ಕೈಲಾಗದ ಗೃಹ ಸಚಿವ ಎಂಬ ಮಾತುಗಳು ಬಿಜೆಪಿ ಕಾರ್ಯಕರ್ತರಿಂದಲೇ ಕೇಳಿಬಂದಿತ್ತು. ಈ ರೀತಿಯಲ್ಲಿ ತಮ್ಮಲ್ಲಿರುವ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು.
ಇದರಿಂದ ಬಿಜೆಪಿ ಸರ್ಕಾರದ ಕಾರ್ಯವೈಖರಿಗೆ ಸ್ವಪಕ್ಷದ ನಾಯಕರು ಹಾಗೂ ಹಿಂದೂ ಸಂಘಟನೆ ಮುಖಂಡರುಗಳು ಆಕ್ರೋಶಗೊಂಡಿದ್ದಾರೆ. ಇದರಿಂದ ಬಿಜೆಪಿಗೆ ಮುಖಭಂಗವಾಗಿದೆ. ಅಲ್ಲದೇ ಇದು ಮುಂದಿನ ಚುನಾವಣೆ ಮೇಲೆ ಭಾರೀ ಹೊಡೆತ ಬೀಳುವ ಸಾಧ್ಯತೆಗಳಿವೆ ಎಂದು ವಿಶ್ಲೇಷಿಸಲಾಗಿದೆ.

ಇದರ ಮಧ್ಯೆ ಶಾ, ಕರ್ನಾಟಕಕ್ಕೆ ಬರುತ್ತಿರುವುದು ಸಾಕಷ್ಟು ಚರ್ಚೆಗಳಿಗೆ ಕಾರಣವಾಗಿದೆ. ಆಗಸ್ಟ್ 3 ಮತ್ತು 4 ಕರ್ನಾಟಕದಲ್ಲಿ ಇರುವ ಅಮಿತ್ ಶಾ ಅವರು ಸರ್ಕಾರದ ನಡೆ ಹಾಗೂ ನಾಯಕರ ಕಾರ್ಯಚಟುವಟಿಕೆಗಳ ಬಗ್ಗೆ ಸಮಲೋಚನೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಪ್ರವೀಣ್ ಹತ್ಯೆಯಿಂದ ಪಕ್ಷಕ್ಕೆ ಡ್ಯಾಮೇಜ್ ಆಗಿದ್ದು, ಅದನ್ನು ಕಂಟ್ರೋಲ್ ಮಾಡಲು ರಾಜ್ಯ ಪ್ರವಾಸ ಕೈಗೊಂಡಿದ್ದಾರೆ ಎಂದು ಎನ್ನಲಾಗುತ್ತಿದೆ.

ಅಲ್ಲದೇ ಮಂಗಳೂರಿನ ಬೆಳ್ಳಾರೆಯಲ್ಲಿ ಹತ್ಯೆಯಾದ ಬಿಜೆಪಿ ಯುವ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ನಿವಾಸಕ್ಕೂ ಭೇಟಿ ನೀಡುವ ಸಾಧ್ಯತೆಗಳಿವೆ. ಒಟ್ಟಿನಲ್ಲಿ ಅಮಿತ್ ಶಾ ದಿಢೀರ್ ಕರ್ನಾಟಕ ಪ್ರವಾಸ ಒಂದು ಕಡೆ ಕುತೂಹಲ ಮೂಡಿಸಿದ್ರೆ, ಮತ್ತೊಂದೆಡೆ ಬಿಜೆಪಿ ನಾಯಕರಲ್ಲಿ ಸಂಚಲನ ಮೂಡಿಸಿದೆ.

More News