AMIT SHAH IN BENGALURU: ಬೆಂಗಳೂರಿನಲ್ಲಿ ಅಮಿತ್ ಶಾ: ಪಕ್ಷದ ಮುಖಂಡರ ಜತೆ ಗಂಭೀರ ಚರ್ಚೆ: DGP ಮತ್ತು ನಗರ ಪೊಲೀಸ್ ಆಯುಕ್ತರ ಭೇಟಿ

ಬೆಂಗಳೂರು : ರಾಜ್ಯದಲ್ಲಿ ಆಡಳಿತರೂಢ ಬಿಜೆಪಿ ಪಕ್ಷದಲ್ಲಿನ ಗೊಂದಲಗಳನ್ನು ಬಗೆಹರಿಸುವ ಉದ್ದೇಶದಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾತ್ರಿ ಹನ್ನೊಂದು ಗಂಟೆಗೆ ಬೆಂಗಳೂರು ನಗರಕ್ಕೆ ಆಗಮಿಸಿದರು.
ಹೆಚ್ ಎ ಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರನ್ನು ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸಚಿವರಾದ ಗೋವಿಂದ ಕಾರಜೋಳ್, ಸಿಸಿ ಪಟೇಲ್, ಆರಗ ಜ್ಞಾನೇಂದ್ರ, ವಿ ಸೋಮಣ್ಣ ಅವರು ಹೂಗುಚ್ಚ ನೀಡಿ ಸ್ವಾಗತಿಸಿದರು.
ಅವರು ಇಂದು ಪಕ್ಷದ ಮುಖಂಡರ ಸಭೆ ನಡೆಸಲಿದ್ದು, ಮಂಗಳೂರಿನಲ್ಲಿ ನಡೆದ ಸರಣಿ ಹತ್ಯೆ, ಇದಾದ ಬಳಿಕ ಪಕ್ಷದ ಪದಾಧಿಕಾರಿಗಳ ನಿರಂತರ ರಾಜೀನಾಮೆ, ಸಂಸದ ತೇಜಸ್ವಿ ಸೂರ್ಯ ಮತ್ತು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಅವರ ಪಕ್ಷದ ವಿರುದ್ದವಾದ ಹೇಳಿಕೆಗಳಿಂದ ಪಕ್ಷಕ್ಕೆ ಆದ ಮುಜುಗರ ಮುಂತಾದ ವಿಷಯಗಳನ್ನು ಅವರು ಚರ್ಚಿಸಿ ಮುಖಂಡರುಗಳಿಗೆ ಕೆಲವು ನಿರ್ದೇಶನಗಳನ್ನು ನೀಡುವ ಸಾಧ್ಯತೆಗಳಿವೆ.

ಇನ್ನೊಂದೆಡೆ ಪಕ್ಷದ ಅಧ್ಯಕ್ಷರ ಬದಲಾವಣೆಗೆ ಸಾಕಷ್ಟು ಕೂಗು ಎದ್ದಿರುವ ಹಿನ್ನೆಲೆಯಲ್ಲಿ ಕಟೀಲ್ ಬದಲಾವಣೆ, ಸಚಿವ ಸಂಪುಟ ವಿಸ್ತರಣೆ, ಸೇರಿದಂತೆ ಶಿಕ್ಷಣ ಇಲಾಖೆಯಿಂದ ಪಕ್ಷಕ್ಕಾದ ಮುಜುಗರವನ್ನು ಸರಿಪಡಿಸುವ ಉದ್ದೇಶದಿಂದ ಮುಖಂಡರುಗಳ ಜತೆ ಚರ್ಚೆ ನಡೆಸಲಿದ್ದಾರೆ.
ಸಂಕಲ್ಪ ಸಿದ್ದಿ ಕಾರ್ಯಕ್ರಮ ಹಾಗೂ ಯಲಹಂಕದಲ್ಲಿನ ಮೆಗಾ ಕೆಎಂಎಫ್ ಡೈರಿ ವೀಕ್ಷಣೆ ಮಾಡಲಿರುವ ಅಮಿತ್ ಶಾ ಅವರು ಇಂದು ಬೆಳಗ್ಗೆ ಖಾಸಗಿ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಅವರನ್ನು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಇಂದು ಭೇಟಿ ಮಾಡಿ, ಚರ್ಚೆ ನಡೆಸಿದರು.

ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಇನ್ನಿತರ ಪಕ್ಷದ ಮುಖಂಡರು ಭೇಟಿ ಮಾಡಿ ಚರ್ಚೆ ನಡೆಸಿದರು. ಅದೇ ರೀತಿಯಲ್ಲಿ ಅಮಿತ್ ಷಾ ಅವರು ಡಿಜಿಪಿ ಪ್ರವೀಣ್ ಸೂದ್ ಹಾಗೂ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಅವರನ್ನು ಭೇಟಿ ಮಾತುಕತೆ ನಡೆಸಿದರು.

More News