ANOTHER SCAM: PSI ನೇಮಕಾತಿ ಹಗರಣದ ಬಳಿಕ ಇದೀಗ ಮತ್ತೊಂದು ಹಗರಣ ಬೆಳಕಿಗೆ: ಕೆಪಿಟಿಸಿಎಲ್ ಕಿರಿಯ ಸಹಾಯಕ ಎಕ್ಸಾಂನಲ್ಲೂ ಅಕ್ರಮ: ಓರ್ವ ಪರೀಕ್ಷಾರ್ಥಿ ಬಂಧನ

ಬೆಳಗಾವಿ: ರಾಜ್ಯದಲ್ಲಿ ಪಿಎಸ್ ಐ ನೇಮಕಾತಿ ಹಗರಣ ನಡೆದಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಸಂಬಂಧ ಈಗಾಗಲೇ ಇದರಲ್ಲಿ ಭಾಗಿಯಾದ ರಾಜಕಾರಣಿಗಳನ್ನು ಬಿಟ್ಟು ಪೊಲೀಸ್ ಅಧಿಕಾರಿ ಸೇರಿದಂತೆ ಇನ್ನಿತರರನ್ನು ಬಂಧಿಸಲಾಗಿದೆ. ಈ ಪ್ರಕರಣ ಮಾಸುವ ಮುನ್ನವೇ ಭಾನುವಾರ ನಡೆದ ಕೆಪಿಟಿಸಿಎಲ್ ಕಿರಿಯ ಸಹಾಯಕ ಪರೀಕ್ಷೆಯಲ್ಲಿ ಅಕ್ರಮ ನಡೆದಿರೋದು ಬಯಲಿಗೆ ಬಂದಿದೆ.
ಪರೀಕ್ಷೆ ವೇಳೆ ಪರೀಕ್ಷಾರ್ಥಿ ಸ್ಮಾರ್ಟ್ ಫೋನ್ ಬಳಸಿ ಅಕ್ರಮ ಎಸಗಿದ್ದಾನೆ. ಈ ಸಂಬಂಧ ಬೆಳಗಾವಿ ಜಿಲ್ಲಾ ಪೊಲೀಸರು ಮೂಡಲಗಿ ತಾಲೂಕಿನ ನಾಗನೂರು ಗ್ರಾಮದ ಸಿದ್ದಪ್ಪ ಮಹಿಹಳ್ಳಿ ಎಂಬ ಪರೀಕ್ಷಾರ್ಥಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ದಿಂದ ಕೆಪಿಟಿಸಿಎಲ್‌ನಲ್ಲಿ ಖಾಲಿಯಿರುವ ಕಿರಿಯ ಸಹಾಯಕರ ಹುದ್ದೆಗಳಿಗೆ ಭಾನುವಾರ ಪರೀಕ್ಷೆ ನಡೆದಿತ್ತು. ಬೆಳಗಾವಿ ಜಿಲ್ಲೆಯ ಗೋಕಾಕ ನಗರದ ಜೆಎಸ್‌ಎಸ್ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ನಡೆದ ಕೆಪಿಟಿಸಿಎಲ್ ಪರೀಕ್ಷೆಯಲ್ಲಿ ಅಕ್ರಮ ನಡೆದಿರೋದು ಬೆಳಕಿಗೆ ಬಂದಿದೆ.
ಬಂಧಿತ ಅಭ್ಯರ್ಥಿ ಸಿದ್ದಪ್ಪ ಸ್ಮಾರ್ಟ್ ವಾಚ್ ಮೂಲಕ ಪ್ರಶ್ನೆಪತ್ರಿಕೆಯಲ್ಲಿ ಪ್ರಶ್ನೆಗಳನ್ನು ಪೋಟೋ ತೆಗೆದು ಕಳುಹಿಸುತ್ತಿದ್ದನು. ಬಳಿಕ ಅದೇ ಸ್ಮಾರ್ಟ್ ವಾಚ್ ಮೂಲಕ ಉತ್ತರ ಬಂದಿರುವುದನ್ನು ನೋಡಿಕೊಂಡು ಪರೀಕ್ಷೆ ಬರೆಯುತ್ತಿದ್ದನು. ಪರೀಕ್ಷಾ ಕೇಂದ್ರದಲ್ಲಿ ಅಳವಡಿಸಿರುವ ಸಿಸಿಟಿವಿಯಿಂದ ಅಭ್ಯರ್ಥಿಯ ಅಕ್ರಮ ಬೆಳಕಿಗೆ ಬಂದಿದೆ.

ಸಿಸಿಟಿವಿ ಪರಿಶೀಲನೆ ನಡೆಸಿದ ಸಿಬ್ಬಂದಿ ಅನುಮಾನ ಗೊಂಡು ವಿಚಾರಣೆ ನಡೆಸಿದಾಗ ಅಕ್ರಮ ಎಸಗಿರೋದು ತಿಳಿದು ಬಂದಿದೆ. ಪರೀಕ್ಷಾ ಕೇಂದ್ರದ ಅಧಿಕಾರಿಗಳು ಗೋಕಾಕ ನಗರದ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

More News