ಮೈಸೂರು : ಮಾಜಿ ಸಿಎಂ ಸಿದ್ದರಾಮಯ್ಯ ಅವರು ದೇಶದ ರಾಜಕಾರಣದ ಬಗ್ಗೆ ಯೋಚನೆ ಮಾಡಲಿ. ರಾಜ್ಯಕ್ಕಿಂತಾ ದೇಶಕ್ಕೆ ಸಿದ್ದರಾಮಯ್ಯನವರ ಅವಶ್ಯಕತೆ ತುಂಬಾ ಕಾಣುತ್ತಿದೆ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ವ್ಯಂಗ್ಯವಾಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ಬಾರಿ ಸಿದ್ದರಾಮಯ್ಯ ಸಿಎಂ ಆಗಿರೋದು ಸಾಕು. ಮತ್ತೆ ಆಗುವುದು ಬೇಡ, ಜ್ಯೂನಿಯರ್ ಗಳಿಗೆ ಬಿಟ್ಟು ಕೊಡಲಿ ಎಂದು ಅಭಿಪ್ರಾಯಪಟ್ಟರಲ್ಲದೆ, ದೇಶದಲ್ಲಿ ಅವರು ಪಾರ್ಟಿ ಕಟ್ಟಲಿ ಎಂದರು.
ಕಳೆದ ಚುನಾವಣೆಯಲ್ಲೇ ಸಿದ್ದರಾಮಯ್ಯ ಕೊನೆಯ ಚುನಾವಣೆ ಅಂದಿದ್ದರು. ಈಗ ಮತ್ತೆ ಇದೇ ಕೊನೆ ಚುನಾವಣೆ ಅಂತಿದ್ದಾರೆ. ಸಿದ್ದರಾಮಯ್ಯ ಅವರಂಥವರು ಸಕ್ರೀಯ ರಾಜಕಾರಣದಲ್ಲಿ ಇರಬೇಕು. ರಾಜ್ಯಕ್ಕಿಂತಾ ದೇಶಕ್ಕೆ ಸಿದ್ದರಾಮಯ್ಯ ಅವಶ್ಯಕತೆ ಇದೆ ಎಂದರು.
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಸಸ್ಪೆಂಡ್ ಆಗಬೇಕಿತ್ತು
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಮತ್ತೆ ಶಾಸಕ ಸಾ.ರಾ.ಮಹೇಶ್ ಆಕ್ರೋಶ ಹೊರಹಾಕಿದ್ದು, ಇಷ್ಟೋತ್ತಿಗೆ ರೋಹಿಣಿ ಸಿಂಧೂರಿ ಸಸ್ಪೆಂಡ್ ಆಗಬೇಕಿತ್ತು ಎಂದು ಕಿಡಿಕಾರಿದ್ದಾರೆ.

ಸತ್ಯ ಮೇವಾ ಜಯತೆ ಅನ್ನೋ ಮಾತು ಈಗ ನಿಜವಾಗಿದೆ. ಈಗಲಾದರೂ ತನಿಖೆ ಚುರುಕುಗೊಂಡಿರೋದು ಸಂತೋಷ ತಂದಿದೆ ಎಂದು ತಿಳಿಸಿದ ಅವರು, ಆಗಸ್ಟ್ 19 ರಂದು ಬೆಳಗ್ಗೆ 11.30ಕ್ಕೆ ಮೈಸೂರು ಜಿಲ್ಲಾಧಿಕಾರಿ ಕಚೇರಿಗೆ ನನ್ನ ಬಳಿ ಇರುವ ಎಲ್ಲಾ ದಾಖಲೆ ಸಲ್ಲಿಸುತ್ತೇನೆ ಎಂದು ಸಾ.ರಾ.ಮಹೇಶ್ ಹೇಳಿದರು.
ತಾವೇ ತಪ್ಪು ಮಾಡಿ ಮೈಸೂರಿನ ಜನರನ್ನು ಅನಗತ್ಯವಾಗಿ ಕೆಣಕಿದರೆ ಏನಾಗುತ್ತದೆ ಎಂಬುದಕ್ಕೆ ಈ ಪ್ರಕರಣ ತಾಜಾ ಉದಾಹರಣೆ ಎಂದು ಅಭಿಪ್ರಾಯಪಟ್ಟರು.




