ಬೆಂಗಳೂರು : ರಾಜ್ಯ ಹೈಕೋರ್ಟ್ ಎಸಿಬಿ ರದ್ದುಪಡಿಸಿ ಲೋಕಾಯುಕ್ತಕ್ಕೆ ಹೆಚ್ಚಿನ ಅಧಿಕಾರ ನೀಡಿ ಆದೇಶಿಸಿರುವುದು ಬಿಜೆಪಿ ನೇತ್ವದ ರಾಜ್ಯ ಸರ್ಕಾರಕ್ಕೆ ಇದೀಗ ನುಂಗಲಾರದ ಬಿಸಿ ತುಪ್ಪವಾಗಿದೆ.
ಬಿಸಿ ತುಪ್ಪು ನುಂಗಲು ಆಗದೆ ಉಗುಳಲು ಸಾಧ್ಯವಾಗದೆ ಇಕ್ಕಟ್ಟಿಗೆ ರಾಜ್ಯ ಸರ್ಕಾರ ಸಿಲುಕಿದೆ. ಹೈಕೋರ್ಟ್ ಆದೇಶ ಒಪ್ಪಿಕೊಂಡರೆ ಲೋಕಾಯುಕ್ತಕ್ಕೆ ಹೆಚ್ಚಿನ ಅಧಿಕಾರ ನೀಡಬೇಕು, ಇಲ್ಲ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋದರೆ ಪಕ್ಷ ಮತ್ತು ಸರ್ಕಾರದ ವರ್ಚಸ್ಸಿಗೆ ಧಕ್ಕೆಯಾಗಲಿದೆ ಎಂಬ ಆತಂಕದಲ್ಲಿದೆ.
ಕಾಯ್ದೆಗೆ ತಿದ್ದುಪಡಿ ತರಬೇಕು. ತಿದ್ದುಪಡಿ ಮೂಲಕ ಕಾಯ್ದೆ ಬಲಪಡಿಸಿದರೆ ತಮ್ಮದೇ ಪಕ್ಷದ ನಾಯಕರ ವಿರುದ್ಧ ನೂರಾರು ದೂರುಗಳು ದಾಖಲಾಗಬಹುದು ಎಂಬ ಆತಂಕ ರಾಜ್ಯ ಸರ್ಕಾರಕ್ಕಿದೆ. ಹೈಕೋರ್ಟ್ ನಲ್ಲಿ ಎಸಿಬಿ ಪರ ವಕಾಲತ್ತು ಮಂಡಿಸಿದ ಸರ್ಕಾರ ಮತ್ತೊಂದು ಕಡೆ ಲೋಕಾಯುಕ್ತಕ್ಕೂ ಹೆಚ್ಚಿನ ಶಕ್ತಿ ತುಂಬುವ ಮಾತನಾಡುತ್ತಿದೆ. ಇದೊಂಥರಾ ಇಬ್ಬಗೆಯ ನೀತಿ ಹಾವು ಸಾಯಬಾರದು ಕೋಲು ಮುರಿಯಬಾರದು ಎಂಬ ನೀತಿಯನ್ನು ಅನುಸರಿಸಿತ್ತು.

ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವ ತನಕ ಲೋಕಾಯುಕ್ತಕ್ಕೆ ಅಧಿಕಾರ ಬೇಡ ಎಂದು ಅನೇಕ ಬಿಜೆಪಿಯ ಶಾಸಕರು ಮತ್ತು ಸಚಿವರು, ಹೈಕೋರ್ಟ್ ಆದೇಶ ಪಾಲಿಸದೆ ಪರಿಶೀಲನೆ ನೆಪದಲ್ಲಿ ದಿನ ಮುಂದೂಡುವ ಚಿಂತನೆಯಲ್ಲಿದೆ ಬಿಜೆಪಿ ಸರ್ಕಾರ ಎಂದು ತಿಳಿದುಬಂದಿದೆ.
ಆಡಳಿತ ವಿರೋಧಿ ಅಲೆ ನಡುವೆ ಲೋಕಾಯುಕ್ತಕ್ಕೆ ಪರಮಾಧಿಕಾರ ನೀಡಿದರೆ ಬಿಜೆಪಿಗೆ ಮುಳುವಾಗುವ ಭೀತಿ ಇರುವುದರಿಂದ ಇದೀಗ ಗಂಭೀರ ಚರ್ಚೆಯಲ್ಲಿ ರಾಜ್ಯ ಸರ್ಕಾರ ತಲ್ಲೀನವಾಗಿದೆ. ಎಸಿಬಿ ರದ್ದು ಆದೇಶ ಪೂರ್ಣ ವರದಿಯಲ್ಲಿನ ತಾಂತ್ರಿಕ ಮತ್ತು ಕಾನೂನಾತ್ಮಕ ಅಂಶಗಳನ್ನು ಪರಿಶೀಲಿಸಲು ಸರ್ಕಾರದ ತೀರ್ಮಾನ ಮಾಡಿದ್ದು, ಇದರಲ್ಲಿನ ಲೋಪದೋಷಗಳನ್ನು ಬಳಸಿಕೊಳ್ಳಲು ಸಜ್ಜಾಗಿದೆ.

ಒಟ್ಟಾರೆ ಎಸಿಬಿ ರದ್ದು, ಲೋಕಾಯುಕ್ತಕ್ಕೆ ಅಧಿಕಾರ ನೀಡಲು ಬಿಜೆಪಿ ಪಕ್ಷ ಮತ್ತು ಸರ್ಕಾರಕ್ಕೆ ಇಷ್ಟವಿಲ್ಲ ಎಂಬ ಮಾತುಗಳು ಇದೀಗ ಕೇಳಿಬರುತ್ತಿದೆ. ಈಗಾಗಲೇ ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿ, ಸಚಿವರು ಮತ್ತು ಶಾಸಕರ ವಿರುದ್ಧ ಸಾಕಷ್ಟು ಆರೋಪಗಳು ಕೇಳಿಬಂದಿವೆ. ಒಂದು ವೇಳೆ ಲೋಕಾಯುಕ್ತಕ್ಕೆ ಪರಮಾಧಿಕಾರ ನೀಡಿದರೆ ಇವರ ಮೇಲೆ ಸಾಕಷ್ಟು ದೂರುಗಳು ದಾಖಲಾಗುವ ಭೀತಿಯಲ್ಲಿ ರಾಜ್ಯ ಸರ್ಕಾರವಿದ್ದು, ಮುಂದೆ ಏನು ಮಾಡಬೇಕು ಎನ್ನುವುದರ ಕುರಿತು ಕಾನೂನು ತಜ್ಞರ ಮೊರೆ ಹೋಗಿದೆ.




