MOST INCOMPETENT CHIEF MINISTER: ದೇಶದಲ್ಲಿ ಅತ್ಯಂತ ಅಸಮರ್ಥ ಮುಖ್ಯಮಂತ್ರಿ ಎಂದರೆ ಕರ್ನಾಟಕದಲ್ಲಿರುವ ಬೊಮ್ಮಾಯಿ: ರಣದೀಪ್ ಸಿಂಗ್ ಸುರ್ಜೆವಾಲ ಆರೋಪ

ಬೆಂಗಳೂರು : ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ನೇತೃತ್ವದ ಬೊಮ್ಮಾಯಿ ಸರ್ಕಾರ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಇದರಿಂದ ರಾಜ್ಯದಲ್ಲಿ ಕಾನೂನು ಉಲ್ಲಂಘನೆ ಹೆಚ್ಚಾಗುತ್ತಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಇಂದು ‘ಕೆಪಿಸಿಸಿ ಅಧ್ಯಕ್ಷರು, ಶಾಸಕಾಂಗ ಪಕ್ಷದ ನಾಯಕರು, ಪ್ರಚಾರ ಸಮಿತಿ ಅಧ್ಯಕ್ಷರು, ಪರಿಷತ್ ವಿರೋಧ ಪಕ್ಷದ ನಾಯಕರು ಹಾಗೂ ಹಿರಿಯ ನಾಯಕರು ರಾಜ್ಯದಲ್ಲಿನ ರಾಜಕೀಯ ವಿದ್ಯಮಾನಗಳ ವಿಚಾರವಾಗಿ ಚರ್ಚಿಸಿದ ನಂಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ದೇಶದಲ್ಲಿ ಅತ್ಯಂತ ಅಸಮರ್ಥ ಮುಖ್ಯಮಂತ್ರಿ ಎಂದರೆ ಅದು ಕರ್ನಾಟಕ ರಾಜ್ಯದಲ್ಲಿರುವ ಬೊಮ್ಮಾಯಿ ಅವರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೊಮ್ಮಾಯಿ ಅವರು 40% ಕಮಿಷನ್ ಸರ್ಕಾರದ ಮುಖಂಡರಾಗಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲರಾಗಿದ್ದಾರೆ. ಕಿಡಿಗೇಡಿಗಳು, ಸಮಾಜಘಾತುಕ ಸಂಘಟನೆಗಳು ಜನರನ್ನು ಹಾಡಹಗಲೇ ಹತ್ಯೆ ಮಾಡುತ್ತಿದ್ದಾರೆ. ಬಿಜೆಪಿಯ ಕಾರ್ಯಕರ್ತರೇ ಹತ್ಯೆಯಾಗುತ್ತಿದ್ದರೂ ಈ ಸರ್ಕಾರ ವೈಮರೆತು ಕೂತಿದೆ. ಆ ಮೂಲಕ ಜನರಿಗೆ ದ್ರೋಹ ಬಗೆಯುತ್ತಿದೆ. ಸಮಾಜವನ್ನು ಒಡೆಯಲು ಬಿಜೆಪಿ ಪ್ರಾಯೋಜಿತ ಷಡ್ಯಂತ್ರಗಳ ವಿರುದ್ಧ ಹೋರಾಡಲು ನಮ್ಮ ಪಕ್ಷದ ಎಲ್ಲ ನಾಯಕರು ಪಣ ತೊಟ್ಟಿದ್ದೇವೆ. ಜನರ ಸಹಕಾರದೊಂದಿಗೆ ಈ ಸರ್ಕಾರವನ್ನು ನಾವು ಕಿತ್ತೊಗೆಯುವವರೆಗೂ ನಾವು ವಿರಮಿಸುವುದಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದೇವೆ ಎಂದರು.

ಮಂಗಳೂರಿನಲ್ಲಿನ ಪ್ರಕರಣ, ಶಿವಮೊಗ್ಗದ ಬೆಳವಣಿಗೆಗೆಳು ಮುಖ್ಯಮಂತ್ರಿಗಳ ವೈಫಲ್ಯ ಹಾಗೂ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಸಾಕ್ಷಿ. ಇದಕ್ಕೆಲ್ಲ ಕಾರಣವಾಗಿರುವ ಸಮಾಜ ಘಾತುಕ ಶಕ್ತಿಗಳಿಗೆ ಬಿಜೆಪಿಯೇ ಪ್ರೋತ್ಸಾಹ ನೀಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರದ ಸಚಿವರೇ ಸರ್ಕಾರ ನಡೆಯುತ್ತಿಲ್ಲ ಎಂದಿದ್ದಾರೆ
ಸರ್ಕಾರದ ಕಾನೂನು ಸಚಿವರೇ ಈ ಸರ್ಕಾರ ನಡೆಯುತ್ತಿಲ್ಲ ಎಂದು ಹೇಳಿದ್ದಾರೆ. ಒಬ್ಬ ಸಚಿವರು ಮತ್ತೊಬ್ಬ ಸಚಿವರ ವಿರುದ್ಧ ಟೀಕಾ ಪ್ರಹಾರ ನಡೆಸುತ್ತಿದ್ದಾರೆ. ಸಚಿವರುಗಳೇ ಸಂಪುಟ ಸದಸ್ಯರ ವಿರುದ್ಧ ಆರೋಪ ಮಾಡುತ್ತಿರುವಾಗ ಈ ಸರ್ಕಾರದ ಸ್ಥಿತಿ ಏನು? ಇಂತಹ ಸರ್ಕಾರ ಯಾವ ಪುರುಷಾರ್ಥಕ್ಕೆ ಮುಂದುವರಿಯಬೇಕು? ಹೀಗಾಗಿ ರಾಜ್ಯದ ಜನರ ಸಹಕಾರದೊಂದಿಗೆ ಈ ಸರ್ಕಾರವನ್ನು ಕಿತ್ತುಹಾಕಬೇಕಿದೆ. ಸರ್ಕಾರ ಭ್ರಷ್ಟಾಚಾರ, ಕಾನೂನು ಸುವ್ಯವಸ್ಥೆ ಕುಸಿತ ಹಾಗೂ ದುರಾಡಳಿತದ ವಿಚಾರವಾಗಿ ಸರ್ಕಾರ ಉತ್ತರಿಸಬೇಕು ಎಂದರು.
ಸಚಿವರ ರಾಜೀನಾಮೆಗೆ ಮತ್ತೊಬ್ಬ ಸಚಿವರ ಆಗ್ರಹ: ಇದೊಂದು ಸರ್ಕಾರ
ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಾತನಾಡಿ, ಮಾಧುಸ್ವಾಮಿ ಅವರು ಬೊಮ್ಮಾಯಿ ಅವರ ಸರ್ಕಾರದಲ್ಲಿ ಹಿರಿಯ ಸಚಿವರು. ಈ ಸರ್ಕಾರದಲ್ಲಿ ಆಡಳಿತ ನಡೆಯುತ್ತಿಲ್ಲ. ಈ ಸರ್ಕಾರವನ್ನು ತಳ್ಳಿಕೊಂಡು ಹೋಗುತ್ತಿದ್ದೇವೆ ಎಂದು ಹೇಳಿದ್ದಾರೆ. ಬೊಮ್ಮಾಯಿ ಅವರು ಈ ಸತ್ಯ ಮುಚ್ಚಿಹಾಕಲು ಕೆಲವು ಸಚಿವರನ್ನು ಎತ್ತಿಕಟ್ಟಿದ್ದಾರೆ. ಮುನಿರತ್ನ, ಸೋಮಶೇಖರ್ ಅವರನ್ನು ಎತ್ತಿಕಟ್ಟಿದ್ದಾರೆ ಎಂದು ಆರೋಪಿಸಿದರು.
ಮಾಧುಸ್ವಾಮಿ ರಾಜೀನಾಮೆ ನೀಡಬೇಕು ಎಂದು ಮುನಿರತ್ನ ಆಗ್ರಹಿಸುತ್ತಾರೆ. ಇನ್ನು ಮಾಧು ಸ್ವಾಮಿ ಅವರ ಸಚಿವಾಲಯದ ಪರಿಸ್ಥಿತಿ ಆ ರೀತಿ ಆಗಿರಬಹುದು ಎಂದು ಸೋಮಶೇಖರ್ ಟೀಕೆ ಮಾಡಿದ್ದಾರೆ. ಇದೆಲ್ಲವನ್ನು ಬೊಮ್ಮಾಯಿ ಅವರು ನೋಡಿಕೊಂಡು ಕೂತಿದ್ದಾರೆ. ಈ ಸರ್ಕಾರ ಜೀವಂತವಾಗಿ ಇದೆ ಎಂದು ಕೇಳಬೇಕಾ? ಬೊಮ್ಮಾಯಿ ಅವರು ಈ ಸರ್ಕಾರದ ನೇತೃತ್ವ ವಹಿಸುತ್ತಿದ್ದಾರೆ ಎಂದು ಭಾವಿಸಲು ಸಾಧ್ಯವೇ? ಎಂದು ಕಿಡಿಕಾರಿದರು.

ಈ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ನಾಶವಾಗಿದ್ದು, ಪ್ರವೀಣ್ ಹತ್ಯೆ ಖಂಡಿಸಿ ಅವರ ಪಕ್ಷದವರೇ ಟೀಕೆ ಮಾಡುತ್ತಿದ್ದಾರೆ. ಹೀಗಾಗಿ ಜನ ಚುನಾವಣೆ ಯಾವಾಗ ನಡೆಯಲಿದೆ ಎಂದು ಕಾಯುತ್ತಿದ್ದಾರೆ. ಇದರ ಅರ್ಥ ಈ ಸರ್ಕಾರದಲ್ಲಿ ಯಾರಿಗೂ ರಕ್ಷಣೆ ಇಲ್ಲ ಎಂದು ಅರ್ಥವಾಗುತ್ತದೆ. ರಾಜ್ಯದಲ್ಲಿ ಇಷ್ಟೋಂದು ಭ್ರಷ್ಟಾಚಾರ, ಕಾನೂನು ಸುವ್ಯವಸ್ಥೆ ಹದಗೆಟ್ಟಿತ್ತಾ? ಈ ಸರ್ಕಾರದಲ್ಲಿ ಯಾರಿಗೂ ರಕ್ಷಣೆ ಇಲ್ಲ, ಬಡವರಿಗೆ ನ್ಯಾಯ ಸಿಗುವುದಿಲ್ಲ. ರೈತರಿಗೆ, ಮಹಿಳೆ ಯುವಕರಿಗೆ ನ್ಯಾಯ ಸಿಗುವುದಿಲ್ಲ. ಹೀಗಾಗಿ ಈ ಸರ್ಕಾರ ಕಿತ್ತು ಹಾಕಲು ಜನಾಭಿಪ್ರಾಯ ರೂಪಿಸಬೇಕು ಎಂಬ ವಿಚಾರವಾಗಿ ನಮ್ಮ ನಾಯಕರೆಲ್ಲರೂ ಚರ್ಚೆ ಮಾಡಿದ್ದೇವೆ ಎಂದರು.

More News