ಬೆಂಗಳೂರು : ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಖಾಲಿ ಕುಳಿತಿದ್ದ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರಿಗೆ ಬರೋಬ್ಬರಿ ಒಂದು ವರ್ಷದ ಬಳಿಕ ಸಂಸದೀಯ ಮಂಡಳಿ ಸದಸ್ಯ ಮತ್ತು ಚುನಾವಣಾ ಸಮಿತಿ ಸದಸ್ಯ ಸ್ಥಾನವನ್ನು ನೀಡುವುದರ ಹಿಂದೆ ಬಿಜೆಪಿ ಪಕ್ಷದ ಹೈಕಮಾಂಡ್ ಅನೇಕ ಲೆಕ್ಕಾಚಾರಗಳನ್ನು ಹಾಕಿಕೊಂಡಿದೆ.
ಸಂಸದೀಯ ಮಂಡಳಿಯು ಬಿಜೆಪಿ ಪಕ್ಷದ ನೀತಿ ನಿರೂಪಣೆಯ ಉನ್ನತ ಸಮಿತಿಯಾಗಿದ್ದು, ಸಮಿತಿಯ ಕಾರ್ಯಕಲಾಪಗಳು ಮೂರು ತಿಂಗಳಿಗೆ ಅಥವಾ ಅಗತ್ಯತೆ ಮತ್ತು ತುರ್ತು ಸಂದರ್ಭದಲ್ಲಿ ಸಭೆ ನಡೆಯಲಿದೆ. ಚುನಾವಣಾ ಸಮಿತಿ ಸಭೆ ಚುನಾವಣೆ ಸಮಯದಲ್ಲಿ ಮಾತ್ರ ಸಭೆ ಜರುಗಲಿದೆ.
ಎರಡೂ ಸಮಿತಿಗಳಿಗೆ ಯಡಿಯೂರಪ್ಪಗೆ ಸ್ಥಾನ ನೀಡಿರುವುದು ನೆಪ ಮಾತ್ರಕ್ಕೆ, ಏಕೆಂದರೆ 75 ವರ್ಷ ತುಂಬಿದವರಿಗೆ ಪಕ್ಷದಲ್ಲಿ ಅಧಿಕಾರ ಸ್ಥಾನವಿಲ್ಲ, ಏನಿದ್ದರೂ ಅವರು ಪಕ್ಷದ ಹಿತೈಷಿಗಳು ಮಾತ್ರ ಎಂಬ ನಿಯಮವನ್ನು ಖುದ್ದು ಹೈಕಮಾಂಡ್ ಮುರಿದಿದೆ.
ಅದಕ್ಕಾಗಿಯೇ ಲಾಲ್ ಕೃಷ್ಣ ಅಡ್ವಾಣಿ ಮತ್ತು ಮುರಳಿ ಮನೋಹರ ಜೋಷಿ ಅವರಿಗೆ ವಯಸ್ಸಿನ ಕಾರಣ ನೀಡಿ ಮಾರ್ಗದರ್ಶಕರ ಹುದ್ದೆ ನೀಡಲಾಗಿತ್ತು. ಆದರೆ, ಈ ನಿಯಮ ಬಿ ಎಸ್ ಯಡಿಯೂರಪ್ಪ ಅವರಿಗೆ ಅನ್ವಯವಾಗುವುದಿಲ್ಲವಾ ಎನ್ನುವುದು ಅನೇಕ ಮುಖಂಡರ ವಾದವಾಗಿದೆ.
ಮುಂಬರುವ ವಿಧಾನ ಸಭೆ, ಲೋಕಸಭೆ ಚುನಾವಣೆ ಗಮನದಲ್ಲಿಟ್ಟು ಬಿ ಎಸ್ ಯಡಿಯೂರಪ್ಪ ಅವರಿಗೆ ಈ ಸ್ಥಾನ ನೀಡಿದೆ. ಆದರೆ, ಸಂಸದೀಯ ಮಂಡಳಿಯಲ್ಲಿ ಯಡಿಯೂರಪ್ಪ ಅವರ ಆಟ ಏನೂ ನಡೆಯದು, ಏಕೆಂದರೆ ಅಲ್ಲಿ ನಡೆಯುವುದು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರದ್ದು ಮಾತ್ರ.
ಇನ್ನು ಯಡಿಯೂರಪ್ಪ ಅವರಿಗೆ ಹಿಂದಿ ಭಾಷೆಯ ಅರಿವಿಲ್ಲ, ಪ್ರಧಾನಿ, ಗೃಹ ಸಚಿವರು, ರಾಷ್ಟ್ರೀಯ ಅಧ್ಯಕ್ಷರ ನೇತೃತ್ವದ ಸಭೆಯಲ್ಲಿ ಬಿಎಸ್ ವೈ ಅವರು ಯಾವುದೇ ರೀತಿಯ ತರ್ಕ ಮಾಡಲು ಸಾಧ್ಯವಿಲ್ಲ. ಉನ್ನತ ಮಟ್ಟದ ಸಮಿತಿಗೆ ಸಲಹೆ ನೀಡಬಹುದಷ್ಟೇ. ಅಂತಿಮ ತೀರ್ಮಾನ ಪ್ರಧಾನಿ, ಅಮಿತ್ ಷಾ ಅವರದ್ದೇ.
ರಾಜಾಹುಲಿಗೆ ಖೆಡ್ಡ ತೋಡಿದ ಹೈಕಮಾಂಡ್…!!
ಪುತ್ರನ ಅಧಿಕಾರಕ್ಕಾಗಿ ಹೋರಾಟಕ್ಕಿಳಿದ ಬಿಎಸ್ ವೈಗೆ ಪಕ್ಷದ ವರಿಷ್ಠರು ಅಧಿಕಾರ ಕೊಟ್ಟು ಕೈ ಕಟ್ಟಿ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪಕ್ಷ, ನಾಯಕತ್ವ, ಸಂಘಟನೆ ವಿರುದ್ದದ ಬಂಡಾಯಕ್ಕೆ ಬ್ರೇಕ್ ಹಾಕಿದ್ದಾರೆ. ಈ ಮೂಲಕ ತಕ್ಷಣಕ್ಕೆ ಯಡಿಯೂರಪ್ಪ ಅವರ ಪುತ್ರರಿಗೆ ಉನ್ನತ ಹುದ್ದೆ ನೀಡಲು ಸಾಧ್ಯವಿಲ್ಲವೆಂಬ ಸ್ಪಷ್ಟ ಸಂದೇಶ ನೀಡಿ, ರಾಜಾ ಹುಲಿಗೆ ಖೆಡ್ಡಾ ತೋಡಿದೆ.
ಯಡಿಯೂರಪ್ಪಗೆ ಪಕ್ಷದ ಟಾಸ್ಕ್
ಆದರೆ, ಮೊದಲು ಪಕ್ಷ ಸಂಘಟನೆ, ಸರ್ಕಾರ ಮತ್ತು ಪಕ್ಷದ ವರ್ಚಸ್ಸು ವೃದ್ಧಿ, ಕಾಂಗ್ರೆಸ್ ನಾಯಕರನ್ನು ಎದುರಿಸಲು ತಂತ್ರಗಾರಿಕೆ ರೂಪಿಸುವುದು ಪ್ರಥಮ ಆದ್ಯತೆ ಯಡಿಯೂರಪ್ಪ ಅವರದ್ದಾಗಿದೆ. ನಂತರ ಅವರ ಪುತ್ರನಿಗೆ ಸ್ಥಾನಮಾನ ಎಂಬ ಸಂದೇಶವನ್ನ ವರಿಷ್ಠರು ನೀಡಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವುದು ಅಷ್ಟು ಸುಲಭದ ಮಾತಲ್ಲ, ಕಾಂಗ್ರೆಸ್- ಜೆಡಿಎಸ್ ಕಟ್ಟಿಹಾಕಲು ಯಡಿಯೂರಪ್ಪ ಬೇಕೆ ಬೇಕು ಎಂಬುದನ್ನ ಅರಿತ ಹೈಕಮಾಂಡ್ ಯಡಿಯೂರಪ್ಪ ಅವರಿಗೆ ಇಷ್ಟವಿಲ್ಲದಿದ್ದರೂ ಸದಸ್ಯ ಸ್ಥಾನವನ್ನು ನೀಡಿ ತುಪ್ಪ ಸವರುವ ಕೆಲಸ ಮಾಡಿದೆ.
ಅದಲ್ಲದೆ,. ಪಕ್ಷದ ಹೈಕಮಾಂಡ್ ಲಿಂಗಾಯತ ಮತ ಬ್ಯಾಂಕ್ ಮೇಲೆ ಕಣ್ಣಿಟ್ಟಿದ್ದು, ಕಾರ್ಯಕರ್ತರ ವಿಶ್ವಾಸ ಉಳಿಸಿಕೊಳ್ಳಲು ಯಡಿಯೂರಪ್ಪ ಅವರಿಗೆ ಸ್ಥಾನ ನೀಡುವುದು ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ತಮ್ಮ ಸ್ವಹಿತಾಸಕ್ತಿಗಾಗಿ ಯಡಿಯೂರಪ್ಪ ಅವರಿಗೆ 78 ವರ್ಷದ ಬಳಿಕವೂ ಸ್ಥಾನಮಾನ ನೀಡಲಾಗಿದೆ.

ಮುಂದಿನ ಚುನಾವಣೆ ಸೋಲು-ಗೆಲುವು ಯಡಿಯೂರಪ್ಪ ಅವರ ಮೇಲೆ ಅವಲಂಬಿತವಾಗಿದೆ. ಮೀಸಲಾತಿ ಹೋರಾಟಗಳು, ಧಾರ್ಮಿಕ, ಕೋಮು ಸಂಘರ್ಷಗಳ ಪ್ರತಿಕೂಲ ಪರಿಣಾಮ ಸುಧಾರಿಸುವುದು ಅಷ್ಟು ಸುಲಭದ ಮಾತಲ್ಲ.
ಪಕ್ಷವನ್ನು ಅಧಿಕಾರ ತರದಿದ್ದರೂ ಅಡ್ಡಿಯಿಲ್ಲ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಸಿಗಬಾರದು ಎಂಬ ಉದ್ದೇಶದಿಂದ ಕೆಲಸ ಮಾಡಲು ಈಗಾಗಲೇ ಯಡಿಯೂರಪ್ಪ ಅವರಿಗೆ ವರಿಷ್ಠರು ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಇವೆಲ್ಲದರ ನಡುವೆ ಕರ್ನಾಟಕದಲ್ಲಿ ಬಿಜೆಪಿಗೆ ಯಡಿಯೂರಪ್ಪ ಅನಿವಾರ್ಯ ಎಂಬ ಸ್ಪಷ್ಟ ಸಂದೇಶ ರವಾನೆ ಪಕ್ಷದ ಹೈಕಮಾಂಡ್ ನೀಡಿದೆ.




