ಬೆಂಗಳೂರು : ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಬಿಜೆಪಿಯಲ್ಲಿ ಉನ್ನತ ಸ್ಥಾನಮಾನ ನೀಡುವುದಲ್ಲ ಬದಲಿಗೆ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಲಿ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್ ಆಗ್ರಹಿಸಿದ್ದಾರೆ.
ಬೆಂಗಳೂರಿನ ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಎಲ್ಲ ಜನರು ರಾಜ್ಯ ಸರ್ಕಾರದ ವಿರೋಧಿಸುತ್ತಿದ್ದಾರೆ, ಈಗ ಯಡಿಯೂರಪ್ಪ ಅವರನ್ನು ಬಿಜೆಪಿ ಉಪಯೋಗಿಸುತ್ತಿದೆ ಎಂದು ಟೀಕಿಸಿದರು.
ಬಿ ಎಸ್ ವೈ ಮೇಲೆ ಇಷ್ಟೊಂದು ಪ್ರೀತಿ ಇದ್ದಿದ್ದರೆ ಯಾಕೆ ಅವರನ್ನು ಸಿಎಂ ಸ್ಥಾನದಿಂದ ಇಳಿಸಿದ್ದರು ಎಂಬುದನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದ ಎಂ ಬಿ ಪಾಟೀಲ್, ಬಿಜೆಪಿ ಸಂಪೂರ್ಣವಾಗಿ ಕುಸಿದು ಹೋಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯಡಿಯೂರಪ್ಪನವರು ಹಿರಿಯರು, ಅವರಿಗೆ ಒಳ್ಳೆಯದಾಗಲಿ ಅಂತಾ ಆಶಿಸುತ್ತೇನೆ ಎಂದು ಹೇಳಿದ ಎಂ ಬಿ ಪಾಟೀಲ್, ೭೫ ವರ್ಷ ಕಾರಣ ಕೊಟ್ಟು ಸಿಎಂ ಸ್ಥಾನದಿಂದ ಅವರನ್ನು ಇಳಿಸಿದ್ದರು, ಈಗ ಸಂಸದೀಯ ಮಂಡಳಿಯಲ್ಲಿ ಸ್ಥಾನಮಾನ ಕೊಟ್ಟಿದ್ದಾರೆ, ಇದು ಇಬ್ಬಗೆಯ ನೀತಿಯಲ್ಲವೆ ಎಂದು ಪ್ರಶ್ನಿಸಿದ್ದಾರೆ.

ಸಿದ್ದರಾಮೋತ್ಸವದಿಂದ ಬಿಜೆಪಿ ನೆಲ ಕಚ್ಚಿದೆ, ಬಿಜೆಪಿ ಐಸಿಯುನಲ್ಲಿದೆ, ಅದಕ್ಕೆ ಪ್ರೀತಿ ತೋರಿಸಿದ್ದಾರೆ ಅಷ್ಟೇ ಎಂದು ಆರೋಪಿಸಿದರು.
ನಾನು ಲಿಂಗಾಯತ ಮತ ಸೆಳೆಯಲು ಪ್ರವಾಸ ಮಾಡುತ್ತಿಲ್ಲ, ನಮಗೆ ಎಲ್ಲಾ ಜಾತಿಗಳೂ ಬಹಳ ಮುಖ್ಯ, ಎಲ್ಲಾ ಸಮುದಾಯದ ಮಠಗಳಿಗೂ ಭೇಟಿ ನೀಡುತ್ತಿದ್ದೇನೆ, ಸಮುದಾಯದ ಜನರು ಅಷ್ಟೇನೂ ಮೂರ್ಖರಲ್ಲ, ಪ್ರೀತಿ ಇದ್ರೆ ಅವರನ್ನ ಸಿಎಂ ಅಂತಾ ಘೋಷಿಸಲಿ ಬಿಜೆಪಿಗೆ ಸವಾಲು ಹಾಕಿದರು.
ರಾಯಚೂರು ತೆಲಂಗಾಣದ ಭಾಗ ಎಂಬ ಕೆಸಿಆರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ರಾಯಚೂರಿನ ಒಂದಿಂಚೂ ಜಾಗವನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು. ಜಹೀರಾಬಾದ್ ನಮಗೆ ಹತ್ತಿರವಿದೆ, ಸೊಲ್ಲಾಪುರ, ಜತ್ತಾ ಎಲ್ಲವೂ ನಮ್ಮ ಭಾಗದಲ್ಲಿವೆ, ನಾವು ಅವುಗಳನ್ನ ಕೊಡಿ ಅಂತ ಕೇಳಿದ್ದೇವಾ ಎಂದು ಪ್ರಶ್ನಿಸಿದರು.