ಮಡಿಕೇರಿ : ಪ್ರವಾಹ ಸಂತ್ರಸ್ತರ ಕಷ್ಟ ಆಲಿಸಲು ಇಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಡಿಕೇರಿಗೆ ಪ್ರವಾಸ ಹಮ್ಮಿಕೊಂಡಿದ್ದರು. ಈ ಸಂದರ್ಭದಲ್ಲಿ ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸೋ ಮೂಲಕ ಪ್ರತಿಭಟನೆ ನಡೆಸಿದರು.
ಅಷ್ಟೇ ಅಲ್ಲದೇ ವಿಪಕ್ಷ ನಾಯಕರ ಕಾರಿಗೆ ಮೊಟ್ಟೆ ಎಸೆದು ಆಕ್ರೋಶ ಹೊರಹಾಕಿದ್ರು. ಬಿಜೆಪಿ ಕಾರ್ಯಕರ್ತನೋರ್ವ ಸಿದ್ದರಾಮಯ್ಯರ ಕಾರಿನೊಳಗೆ ವೀರ ಸಾವರ್ಕರ್ ಫೋಟೋ ಎಸೆದು ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗವೂ ನಡೆದಿದೆ. ಇನ್ನೊಂದೆಡೆ ಸಿದ್ದರಾಮಯ್ಯ ಅವರಿಗೆ ಜೈಕಾರದ ಘೋಷಣೆಗಳು ಮೊಳಗಿದವು.


ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ತಳ್ಳಾಟ ನೂಕಾಟ ಏರ್ಪಟ್ಟಿತ್ತು. ಕೆಲಕಾಲ ಜ.ತಿಮ್ಮಯ್ಯ ವೃತ್ತದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪರಿಸ್ಥಿತಿ ನಿಭಾಯಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

ಸಿದ್ದರಾಮಯ್ಯರಿಗೆ ಕಪ್ಪು ಪಟ್ಟಿ ಪ್ರದರ್ಶನ ಖಂಡನೀಯ- ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಕಿಡಿ
ಇನ್ನು ಘಟನೆಯ ಬಗ್ಗೆ ಬೆಂಗಳೂರಿನಲ್ಲಿ ಕೆಪಿಸಿಸಿ ಕಾರ್ಯಧ್ಯಕ್ಷ ಸಲೀಂ ಅಹ್ಮದ್ ಪ್ರತಿಕ್ರಿಯೆ ನೀಡಿದ್ದು, ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಗೆ ಅವಕಾಶ ಇದೆ, ಆದ್ರೆ ಕಪ್ಪು ಪಟ್ಟಿ ಪ್ರದರ್ಶನ ಖಂಡನೀಯ. ಯಾರು ಈ ಕೃತ್ಯ ಮಾಡಿದ್ದಾರೋ ಅವರ ವಿರುದ್ಧ ಕೂಡಲೇ ರಾಜ್ಯ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲು ಸೂಚಿಸಬೇಕೆಂದು ಆಗ್ರಹಿಸಿದರು.