PSI ಪರೀಕ್ಷೆ ಅಕ್ರಮ ನಂತರ ಇದೀಗ ಕೆಪಿಟಿಸಿಎಲ್ ಕಿರಿಯ ಸಹಾಯಕ ಹುದ್ದೆ ಪರೀಕ್ಷಾ ಅಕ್ರಮ: ಗದಗ್ ನಲ್ಲಿ ಸೈಬರ್ ಕೈಂ ಪೊಲೀಸರ ಶೋಧ

ಗದಗ್ : ರಾಜ್ಯದಲ್ಲಿ ಇತ್ತೀಚೆಗಷ್ಟೇ PSI ಪರೀಕ್ಷೆಯ ಅಕ್ರಮದ ಕಮಟು ವಾಸನೆ ಮಾಸುವ ಮುನ್ನವೇ ಇಂಥಹದ್ದೇ ಮತ್ತೊಂದು ಪರೀಕ್ಷಾ ಅಕ್ರಮ ನಡೆದಿರುವ ಬಗ್ಗೆ ವರದಿಯಾಗಿದೆ.
ಇತ್ತೀಚೆಗಷ್ಟೇ ಕೆಪಿಟಿಸಿಎಲ್ ನ ಕಿರಿಯ ಸಹಾಯಕ ಹುದ್ದೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನೇತೃತ್ವದಲ್ಲಿ ರಾಜ್ಯದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಸಾಂಗವಾಗಿ ನಡೆದಿತ್ತು. ಆದರೆ, ಸದರಿ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಬಹಿರಂಗವಾದ ವಿಷಯದ ಜಾಡು ಹಿಡಿದು ಹೊರಟ ಬೆಳಗಾವಿ ಸೈಬರ್ ಕ್ರೈಂ ಪೊಲೀಸರು ನೇರ ಬಂದು ತಲುಪಿದ್ದು ಗದಗಕ್ಕೆ!.
2022ರ ಆಗಸ್ಟ್ 7ರಂದು ಕೆಪಿಟಿಸಿಎಲ್ ಕಿರಿಯ ಸಹಾಯಕ ಹುದ್ದೆಯ ಪರೀಕ್ಷೆ ನಡೆದಿದ್ದು, ಗದಗ-ಬೆಟಗೇರಿ ಅವಳಿ ನಗರದ 21 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. ಇದೀಗ ಪ್ರಶ್ನೆ ಪತ್ರಿಕೆ ಲೀಕ್ ಆಗಿರುವ ಜಾಡು ಹಿಡಿದು ಬಂದ ಬೆಳಗಾವಿ ಸೈಬರ್ ಕ್ರೈಮ್ ಪೊಲೀಸ್ ಇನ್ಸ್‌ಪೆಕ್ಟರ್ ವಿರೇಶ್ ದೊಡ್ಡಮನಿ ನೇತೃತ್ವದಲ್ಲಿ ಶೋಧ ಕಾರ್ಯ ನಡೆಯುತ್ತಿದೆ.
ಗದಗನಲ್ಲಿಯೇ ಪರೀಕ್ಷಾ ಪತ್ರಿಕೆ ಲೀಕ್ ಆಗಿದೆಯೆಂಬ ವಿಷಯ ತಿಳಿದ ಬೆಳಗಾವಿಯ ಸೈಬರ್ ಕ್ರೈಂ ಪೊಲೀಸರಿಗೆ ಆಘಾತಕಾರಿ ವಿಷಯ ಕಾದಿತ್ತು. ಗದಗನ ಮುನ್ಸಿಪಲ್ ಕಾಲೇಜ್ ನಲ್ಲಿ ನಡೆದ ಪರೀಕ್ಷೆಯಲ್ಲಿ ತಂದೆ-ಮಗ ಸೇರಿಕೊಂಡು ಪಶ್ನೆಪತ್ರಿಕೆ ಸೋರಿಕೆಗೆ ಕೈಜೋಡಿಸಿರುವ ವಿಷಯ ಬಹಿರಂಗವಾಗಿದೆ ಎನ್ನಲಾಗಿದೆ.

ಮುನ್ಸಿಪಲ್ ಕಾಲೇಜಿನ ಉಪ ಪ್ರಾಚಾರ್ಯ ಮಾರುತಿ ಸೋನಾವನೆ ಹಾಗೂ ಅವರ ಮಗ ಸಮೀತಕುಮಾರ್ ಕೈ ಚಳಕ ತೋರಿರುವ ಅಂಶ ಬೆಳಕಿಗೆ ಬಂದಿದ್ದು, ಇದೀಗ ಇಬ್ಬರನ್ನೂ ಬಂಧಿಸಿರುವ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಪ್ರಶ್ನೆ ಪತ್ರಿಕೆ ಲೀಕ್ ಮಾಡಿದ್ದು ಹೇಗೆ?
ಪತ್ರಕರ್ತನ ಸೋಗಿನಲ್ಲಿ ಪರೀಕ್ಷಾ ಕೇಂದ್ರಕ್ಕೆ ಎಂಟ್ರಿ ಪಡೆದ ಉಪ ಪ್ರಾಚಾರ್ಯ ಮಾರುತಿ ಸೋನಾವನೆ ಮತ್ತು ಆತನ ಪುತ್ರ ಸಮೀತಕುಮಾರ್, ತನ್ನ ಮೊಬೈಲ್ ಮೂಲಕ ಪ್ರಶ್ನೆ ಪತ್ರಿಕೆಯ ಫೋಟೋಗಳನ್ನು ಸೆರೆ ಹಿಡಿದು ಅಕ್ರಮ ವೆಸಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

More News