TENSE SITUATION: ವೀರ ಸಾವರ್ಕರ್‌ ಪೋಸ್ಟರ್ ಕಾಂಗ್ರೆಸ್‌ ಕಚೇರಿಗೆ ಅಂಟಿಸಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ: ವಿಜಯಪುರದಲ್ಲಿ ಪರಿಸ್ಥಿತಿ ಉದ್ವಿಗ್ನ

ವಿಜಯಪುರ: ವಿಜಯಪುರ ನಗರದ ಜಲನಗರ ಪ್ರದೇಶದಲ್ಲಿರುವ ಜಿಲ್ಲಾ ಕಾಂಗ್ರೆಸ್‌ ಕಚೇರಿಗೆ ಇಂದು ಬೆಳಗಾಗುವುದರೊಳಗೆ ಅದ್ಯಾರೋ ವ್ಯಕ್ತಿಗಳು ವೀರ ಸಾವರ್ಕರ್‌ ಹಲವಾರು ಪೋಸ್ಟರುಗಳನ್ನ ಅಂಟಿಸಿ ಪರಾರಿಯಾಗಿದ್ದಾರೆ.
ವಿಷಯ ತಿಳಿಸಿ ಪೊಲೀಸರು ಕೂಡಲೇ ಸ್ಥಳಕ್ಕಾಗಮಿಸಿ ಪೋಸ್ಟರುಗಳನ್ನು ಕೂಡಲೇ ತೆರವುಗೊಳಿಸಿದರು. ಈ ಪೋಸ್ಟರುಗಳನ್ನ ಅಂಟಿಸಿದ್ದು ನಾನೇ ಎಂದು ಬಿಜೆಪಿಯ ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಬಸವರಾಜ ಹೂಗಾರ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಪದೇ ಪದೇ ಕಾಂಗ್ರೆಸ್‌ ವೀರ ಸಾವರ್ಕರ್‌ ವಿಚಾರವನ್ನ ಕೆಣಕಿ ಪ್ರಚಾರ ಗಿಟ್ಟಿಸುತ್ತಿದೆ ಮತ್ತು ದೇಶದ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ, ಶಿಕ್ಷೆ ಅನುಭವಿಸಿದ ಅವರನ್ನ ಅವಮಾನಿಸುವ ಕೆಲಸ ಮಾಡಿದ್ದರಿಂದ ಹೀಗೆ ಮಾಡಿದ್ದೇನೆ ಎಂದು ಹೇಳಿದ್ದಾರೆ. ಇದೇ ರೀತಿ ಮುಂದುವರೆದರೆ ನಮ್ಮ ಹೋರಾಟ ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಹೇಳಿದ್ದಾರೆ.
ಕೂಡಲೇ ಕಾಂಗ್ರೆಸ್‌ ಕಚೇರಿಗೆ ಆಗಮಿಸಿದ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ರಾಜು ಆಲಗೂರ ಪತ್ರಿಕಾಗೋಷ್ಠಿ ನಡೆಸಿ, ಬಿಜೆಪಿ ಕಾರ್ಯಕರ್ತರ ನಡೆಯನ್ನ ಕಟುವಾಗಿ ಖಂಡಿಸಿದರು. ಕ್ರಿಯೆಗೆ ಪ್ರತಿಕ್ರಿಯೆ ಇದ್ದೇ ಇರುತ್ತೆ, ಬಿಜೆಪಿಗೆ ಪ್ರತ್ಯುತ್ತರ ನೀಡಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು.

ಕಾಂಗ್ರೆಸ್‌ ಜಿಲ್ಲಾಧ್ಯಕ್ಷರು ಮೊಟ್ಟೆ ಪ್ರಕರಣದ ಪ್ರತಿಭಟನೆಗೆಂದು ಗಾಂಧೀವೃತ್ತಕ್ಕೆ ತೆರಳಿದಾಗಲೇ, ಪೊಲೀಸ್‌ ಭದ್ರತೆಯನ್ನು ಬೇಧಿಸಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್‌ ಕಚೇರಿಗೆ ಮುತ್ತಿಗೆಯನ್ನು ಹಾಕಿದರು, ಮತ್ತೊಮ್ಮೆ ಪೋಸ್ಟರ್‌ ಸಹ ಅಂಟಿಸಿದರು. ಸ್ಥಳದಲ್ಲಿ ಧರಣಿ ಕುಳಿತು ಕಾಂಗ್ರೆಸ್‌ ವಿರುದ್ಧ ಘೋಷಣೆ ಸಹ ಕೂಗಿದರು.

ಈ ಸಂದರ್ಭದಲ್ಲಿ ಮತ್ತಿಗೆ ಹಾಕಲು ಯತ್ನಿಸಿದ ಕಾರ್ಯಕರ್ತರನ್ನ ಪೊಲೀಸರು ಬಂಧಿಸಿದರು. ಇನ್ನೂ ಘಟನೆ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ನಗರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ, ಯುವಮೋರ್ಚಾ ಕಾರ್ಯಕರ್ತರ ನಡೆಯನ್ನ ಸಮರ್ಥಿಸಿಕೊಂಡರು.

ಅಲ್ಲದೇ ಬಿಜೆಪಿ ಕಾರ್ಯಕರ್ತರ ಬಂಧನ ಸರಿಯಲ್ಲ, ಅವರು ಯಾವುದೇ ದೇಶವಿರೋಧಿ ಚಟುವಟಿಕೆ ನಡೆಸಿಲ್ಲ , ಅವರನ್ನ ಕೂಡಲೇ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.

More News