SAVARKAR STATUE OR CIRCLE ?: ಉಡುಪಿಯಲ್ಲಿ ಸಾವರ್ಕರ್ ಪುತ್ಥಳಿ ಅಥವಾ ವೃತ್ತ ಶೀಘ್ರದಲ್ಲೇ ನಿರ್ಮಾಣ: ಬಿಜೆಪಿ ಶಾಸಕ ರಘುಪತಿ ಭಟ್

ಉಡುಪಿ: ಉಡುಪಿಯ ಬ್ರಹ್ಮಗಿರಿ ಸರ್ಕಲ್ ನಲ್ಲಿ ಸಾವರ್ಕರ್ ಪುತ್ಥಳಿ ನಿರ್ಮಾಣ ವಿಚಾರವಾಗಿ ಒತ್ತಡ ಹೆಚ್ಚಿದ್ದು, ನಗರ ಸಭೆ ಸೂಕ್ತ ತೀರ್ಮಾನ ಕೈಗೊಳ್ಳಬೇಕಾಗಿದೆ ಎಂದು ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂ ಮುಖಂಡರೊಬ್ಬರು ಪುತ್ಥಳಿ ಸ್ಥಾಪಿಸುವುದಾಗಿ ಹೇಳಿದ್ದಾರೆ, ಪುತ್ಥಳಿ ಸ್ಥಾಪಿಸುವಂತೆ ಉಡುಪಿ ನಗರಸಭೆಗೆ ಮನವಿ ಮಾಡಿದ್ದಾರೆ, ಹಾಗೆಯೇ ಹಿಂದೂ ಮಹಾಸಭಾ, ಹಿಂದೂ ಜಾಗರಣ ವೇದಿಕೆ ಕೂಡ ನಗರಸಭೆಗೆ ಮನವಿ ಸಲ್ಲಿಸಿದೆ ಎಂದು ತಿಳಿಸಿದರು.
ಇದೀಗ ಬಿಜೆಪಿ ಆಡಳಿತವಿರುವ ಉಡುಪಿ ನಗರಸಭೆ ಮೇಲೆ ಒತ್ತಡ ಹೆಚ್ಚಾಗುತ್ತಿರುವ ಮಧ್ಯೆಯೇ ಪುತ್ಥಳಿ ಅಥವಾ ಪ್ರತಿಮೆ ನಿರ್ಮಾಣ ಬೇಡ ಎಂದು ಶಾಸಕ ರಘುಪತಿ ಭಟ್ ನಗರ ಸಭೆಗೆ ಮನವಿಪತ್ರ ಬರೆದಿದ್ದಾರೆ. ಮುಂದಿನ ಕೌನ್ಸಿಲ್ ಮೀಟಿಂಗ್ ನಲ್ಲಿ ಪುತ್ಥಳಿ ನಿರ್ಮಾಣ ಅಥವಾ ವೃತ್ತಕ್ಕೆ ಹೆಸರು ಇಡುವುದರ ಬಗ್ಗೆ ಚರ್ಚಿಸಿ ಸೂಕ್ತ ನಿರ್ಧಾರಕ್ಕೆ ಬರುವ ಸಾಧ್ಯತೆಗಳಿವೆ ಎಂದು ಅವರು ತಿಳಿಸಿದರು.

ಪ್ರತಿಮೆ ಮಾಡುವುದು ಅಷ್ಟೊಂದು ಸಮಂಜಸ ಅಲ್ಲ, ಮುಂದಿನ ದಿನಗಳಲ್ಲಿ ಸಾವರ್ಕರ್ ಪ್ರತಿಮೆಗೆ ಅವಮಾನವಾದರೆ ಕಷ್ಟ, ಪುತ್ಥಳಿ ಬದಲಿಗೆ ಸಾವರ್ಕರ್ ಸರ್ಕಲ್ ನಿರ್ಮಿಸಲು ನಗರ ಸಭೆಗೆ ಪತ್ರ ಬರೆದಿದ್ದೇನೆ ಎಂದು ತಿಳಿಸಿದ ಅವರು, ಜನನಿಭಿಡ ಪ್ರದೇಶವಾದ ಹಳೆ ತಾಲೂಕ್ ಆಫೀಸ್ ಬಳಿಯ ಸರ್ಕಲ್ ಗೆ ಸಾವರ್ಕರ್ ಹೆಸರಿಡಲು ನಗರ ಸಭೆಯ ಸಭೆಯಲ್ಲಿ ಠರಾವು ಇಡುತ್ತೇನೆ ಎಂದರು.

ಈ ಬಗ್ಗೆ ಈಗಾಗಲೇ ನಗರಸಭೆಗೆ ಪತ್ರ ಬರೆದಿದ್ದೇನೆ, ಮೂರ್ತಿ ನಿರ್ಮಿಸುವ ಬಗ್ಗೆ ಚರ್ಚೆ ಮಾಡಬೇಕು, ಖಂಡಿತವಾಗಿ ಉಡುಪಿಯಲ್ಲಿ ವೀರ ಸಾವರ್ಕರ್ ಸರ್ಕಲ್ ನಿರ್ಮಾಣವಾಗುತ್ತೆ ಎಂದು ರಘುಪತಿ ಭಟ್ ತಿಳಿಸಿದರು.

More News