CBI RAID: RJD ನಾಯಕರ ಮನೆ ಮೇಲೆ ಸಿಬಿಐ ದಾಳಿ: ಮುಂದುವರೆದ ಶೋಧ ಕಾರ್ಯಾಚರಣೆ

ಪಟ್ನಾ : ರಾಷ್ಟ್ರೀಯ ಜನತಾದಳ (RJD) ನಾಯಕರುಗಳ ಮನೆ ಮತ್ತು ಕಚೇರಿ ಸೇರಿದಂತೆ ಬಿಹಾರದ ಹಲವೆಡೆ ಇಂದು ಬೆಳ್ಳಂಬೆಳಗ್ಗೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದು, ಶೋಧ ಕಾರ್ಯಾಚರಣೆ ಮುಂದುವರೆಸಿದ್ದಾರೆ.
ಆರ್ ಜೆ ಡಿ ಎಂ ಎಲ್ ಸಿ ಸುನೀಲ್ ಸಿಂಘ್, ಅಶ್ವಾಕ್ ಕರೀಂ, ಫಯಾಜ್ ಅಹ್ಮದ್ ಹಾಗೂ ಮಾಜಿ ಎಂಎಲ್ ಸಿ ಗಳಾದ ಸುಬೋಧ್ ರಾಯ್ ಅವರ ನಿವಾಸದ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಭೂಮಿ ಹಗರಣಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆಲಾಗಿದೆ ಎಂದು ತಿಳಿದುಬಂದಿದ್ದು, ಲಾಲು ಪ್ರಸಾದ್ ಯಾದವ್ ಅವರು ರೈಲ್ವೆ ಸಚಿವರಾಗಿದ್ದಾಗ ಡಿ ದರ್ಜೆಯ ನೇಮಕಾತಿಗೆ ಪ್ರತಿಯಾಗಿ ತಮ್ಮ ಕುಟುಂಬದ ಸದಸ್ಯರ ಹೆಸರಿಗೆ ಭೂಮಿ ವರ್ಗಾಯಿಸಿಕೊಂಡಿದ್ದರು ಎಂಬ ಆರೋಪಕ್ಕೆ ಸಂಬಂಧಿಸಿದಂತೆ ದಾಳಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಾಳಿ ಸಂಬಂಧ ಸುನೀಲ್ ಸಿಂಘ್ ಪ್ರತಿಕ್ರಯಿಸಿದ್ದು, ಉದ್ದೇಶಪೂರ್ವಕವಾಗಿ ಈ ದಾಳಿ ನಡೆಸಲಾಗಿದೆ, ಅರ್ಥವಿಲ್ಲದ ಈ ದಾಳಿಯಿಂದ ಶಾಸಕರು ಹೆಸರಿ ತಮ್ಮ ಬಳಿ ಬರಬಹುದು ಎಂದು ಭಾವಿಸಿ ಮಾಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
ಆರ್ ಜೆ ಡಿ ರಾಜ್ಯ ಸಭಾ ಸದಸ್ಯ ಮನೋಜ್ ಝಾ ಮಾಧ್ಯಮದವರೊಂದಿಗೆ ಮಾತನಾಡಿ, ಇದನ್ನು ಐಟಿ ಇಡಿ ದಾಳಿ ಎಂದು ಹೇಳುವುದು ವ್ಯರ್ಥ, ಈ ಸಂಸ್ಥೆಗಳೆಲ್ಲ ಈಗ ಬಿಜೆಪಿ ಅಧೀನದಲ್ಲಿವೆ, ಅವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವುದರಿಂದ ಇದೊಂದು ಬಿಜೆಪಿ ದಾಳಿ ಎಂದು ಕರೆಯಬೇಕು, ಇಂದು ಬಿಹಾರ ವಿಧಾನಸಭೆಯಲ್ಲಿ ವಿಶ್ವಾಸಮತ ಪ್ರಕ್ರಿಯೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ನಡೆದ ದಾಳಿಯ ಮರ್ಮವನ್ನು ಪ್ರತಿಯೊಬ್ಬರೂ ಊಹಿಸಬಹುದು ಎಂದು ಹೇಳಿದ್ದಾರೆ.

More News