ಶಿವಮೊಗ್ಗ : ಟಿಪ್ಪು ಸುಲ್ತಾನ್ ಅವರನ್ನು ಗೂಂಡಾ ಎಂದು ಕರೆದಿದ್ದರಿಂದ ನನ್ನ ನಾಲಿಗೆ ಕಟ್ ಮಾಡುವ ಬೆದರಿಕೆಯೊಡ್ಡಿದ್ದಾರೆ. ಅನಾಮಧೇಯ ಬೆದರಿಕೆ ಪತ್ರ ಬಂದಿದ್ದು, ಈ ಸಂಬಂಧ ಸೂಕ್ತ ತನಿಖೆ ನಡೆಸಲು ಶಿವಮೊಗ್ಗ ಎಸ್ ಪಿ ಅವರಿಗೆ ಪತ್ರ ಬರೆದಿದ್ದೇನೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೇಡಿಯೊಬ್ಬ ಬರೆದ ಪತ್ರದ ಬಗ್ಗೆ ತನಿಖೆ ನಡೆಸಲು ಶಿವಮೊಗ್ಗ ಎಸ್ಪಿ ಗೆ ಪತ್ರ ಬರೆದಿದ್ದೇನೆ ಎಂದು ತಿಳಿಸಿದ ಅವರು, ಯಾರು ಗೂಂಡಾಗಿರಿ, ಕೊಲೆ, ದರೋಡೆ ಮಾಡುವ ಮುಸ್ಲಿಮರಿಗೆ ಗೂಂಡಾ ಎಂದು ಕರೆಯುತ್ತೇನೆ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.
ಎಲ್ಲಾ ಮುಸ್ಲಿಮರನ್ನು ಗೂಂಡಾ ಎಂದು ಕರೆಯೋಲ್ಲ ಎಂದು ಹೇಳಿದ ಅವರು, ಕಳ್ಳನ ಮನಸ್ಸು ಹುಳ್ಳಹುಳ್ಳಗೆ ಎಂಬಂತೆ ಗೂಂಡಾಗಿರಿ ಮಾಡಿದ ಹೇಡಿ ಪತ್ರ ಬರೆದಿದ್ದಾನೆ ಎಂದರು. ಶಿವಮೊಗ್ಗದ ಹರ್ಷ, ಮಂಗಳೂರಿನ ಪ್ರವೀಣ್ ನೆಟ್ಯಾರುರನ್ನು ಹೇಡಿಗಳಂತೆ ಕೊಲೆ ಮಾಡಿದ್ದಾರೆ, ಶಿವಮೊಗ್ಗದ ಪ್ರೇಮ್ ಸಿಂಗ್ ಗೂ ಹೇಡಿಗಳಂತೆ ಚಾಕು ಹಾಕಿದ್ದಾರೆ, ಪತ್ರ ಬರೆಯುವುದು ಹೇಡಿಗಳ ಕೆಲಸ. ಇದಕ್ಕೆಲ್ಲ ಹೆದರೋದಿಲ್ಲ ಎಂದರು.

ಗೂಂಡಾಗಿರಿ ಮಾಡುವ ಮುಸ್ಲಿಮರನ್ನು ಗೂಂಡಾ ಎನ್ನದೇ ಒಳ್ಳೆಯವರು ಎಂದು ಕರೆಯಬೇಕಾ? ಎಂದು ಪ್ರಶ್ನಿಸಿದ ಈಶ್ವರಪ್ಪ, ಗೂಂಡಾ ಅಂದಿದ್ದಕ್ಕೆ ಬೇಸರಗೊಂಡು ಗೂಂಡಾ ಪತ್ರ ಬರೆದಿದ್ದಾನೆ ಎಂದರು. ರಾಜ್ಯದಿಂದಲೇ ಪತ್ರ ಬರೆಯಲಾಗಿದೆ. ಈ ಹೇಡಿಯನ್ನು ಪೋಲಿಸರು ಪತ್ತೆ ಹಚ್ಚುತ್ತಾರೆ, ನನಗೆ ಯಾವುದೇ ಹೆಚ್ಚಿನ ಭದ್ರತೆಯ ಅವಶ್ಯಕತೆ ಇಲ್ಲ ಎಂದರು.