ಬೆಂಗಳೂರು: ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರ ಸಿನಿಮಾದ ನಿರ್ದೇಶಕ, ನಿರ್ಮಾಪಕ ಯಾರೆಂಬುದು ಸದ್ಯದಲ್ಲೇ ಗೊತ್ತಾಗಲಿದೆ. ಅವರ ಆರೋಪಗಳು ಟೂಲ್ ಕಿಟ್‍ನ ಮತ್ತೊಂದು ಭಾಗ ಎಂದು ಬಿಜೆಪಿ ಶಾಸಕ ಸಿ.ಟಿ. ರವಿ ತಿಳಿಸಿದರು.
ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಬಿಬಿಎಂಪಿ ಚುನಾವಣೆ ಹತ್ತಿರ ಬರುತ್ತಿದ್ದಂತೆ ಆರೋಪ ಮಾಡಲಾಗುತ್ತಿದೆ. ದಾಖಲೆ ನೀಡಿ ಎಂದರೆ ನೀಡುವುದಿಲ್ಲ. ಆರೋಪ ಮಾಡುವುದು ಅತ್ಯಂತ ಸುಲಭ. ಕೆಂಪಣ್ಣಗೆ ಯಾರು, ಎಲ್ಲಿಂದ ಪ್ರಚೋದನೆ ನೀಡುತ್ತಿದ್ದಾರೆ ಎಂಬುದು ತಿಳಿಯಬೇಕಿದೆ ಎಂದು ತಿಳಿಸಿದರು.
ಯಾವುದೇ ವಿಚಾರವನ್ನು ನ್ಯಾಯಾಂಗ ತನಿಖೆಗೆ ನೀಡಲು ಒಂದು ಮೂಲಭೂತ ಪ್ರಕರಣ ಇರಬೇಕು. ಒಂದು ನಿರ್ದಿಷ್ಟ ವಿಚಾರವೂ ಇರಬೇಕು. ಕೆಂಪಣ್ಣ ಆರೋಪದ ಹಿಂದಿನ ನಿರ್ದೇಶಕ ಯಾರೆಂಬುದು ಸದ್ಯದಲ್ಲೇ ಗೊತ್ತಾಗಲಿದೆ ಎಂದು ಅವರು ತಿಳಿಸಿದರು.
ಸುಮ್ಮನೆ ನ್ಯಾಯಾಂಗ ತನಿಖೆಗೆ ನೀಡಲು ಸಾಧ್ಯವಿಲ್ಲ. ಒಂದು ಹತ್ಯೆಯೇ ಆಗಿದ್ದರೆ, ಎಲ್ಲಿ, ಯಾರು ಮತ್ತು ಹೇಗೆ ಎಂಬುದು ಮುಖ್ಯವಾಗುತ್ತದೆ. ನಿರ್ದಿಷ್ಟವಾಗಿ ಪ್ರಕರಣ ಇದ್ದರೆ ಹೇಳಲಿ ಎಂದು ಒತ್ತಾಯಿಸಿದರು.

ಮದರಸಾ ಶಿಕ್ಷಣದ ಬಗ್ಗೆ ಮಾಹಿತಿ ಕೇಳುವ ವಿಚಾರ ಕುರಿತ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಅವರು, ಮಾಹಿತಿ ಕೇಳುವುದರಲ್ಲಿ ತಪ್ಪೇನಿದೆ? ಇವತ್ತು ತಾಲಿಬಾನ್ ಏನಾಗಿದೆ? ಶಿಕ್ಷಣ ಇಲಾಖೆ ಮದರಸಾ ಬಗ್ಗೆ ಗಮನ ನೀಡುವುದರಲ್ಲಿ ಏನು ತಪ್ಪಿದೆ? ಎಂದು ಮರು ಪ್ರಶ್ನೆ ಹಾಕಿದರು.