SDPI OFFICE SEARCHED: ಶಿವಮೊಗ್ಗ ಪ್ರೇಮ್ ಸಿಂಗ್ ಚಾಕು ಇರಿತ ಪ್ರಕರಣ: SDPI ಕಚೇರಿ ಹಾಗೂ ನಾಲ್ವರು ಆರೋಪಿಗಳ ಮನೆ ಶೋಧ: ಮಹತ್ವದ ಮಾಹಿತಿ ಸಂಗ್ರಹ

ಶಿವಮೊಗ್ಗ: ಪ್ರೇಮ್ ಸಿಂಗ್ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ಸರ್ಚ್ ವಾರಂಟ್ ಪಡೆದು ನಾಲ್ವರು ಆರೋಪಿಗಳ ಮನೆ, ಮತ್ತು ಎಸ್ ಡಿಪಿಐ ಕಚೇರಿ ಸೇರಿ ಒಟ್ಟು 6 ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಲಾಗಿದೆ ಎಂದು ಶಿವಮೊಗ್ಗ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣದ ಆರೋಪಿಯೊಬ್ಬನ ಸಂಬಂಧಿಕರ ಮನೆಯಲ್ಲಿ ಕೂಡ ತಪಾಸಣೆ ನಡೆಸಲಾಗಿದೆ, ತಪಾಸಣೆ ವೇಳೆ ಮಹತ್ವದ ಮಾಹಿತಿ ಕಲೆ ಹಾಕಲಾಗಿದೆ, ಪೋಲಿಸ್ ಫೈರಿಂಗ್ ನಲ್ಲಿ ಗಾಯಗೊಂಡ ಪ್ರಕರಣದ ಪ್ರಮುಖ ಆರೋಪಿ ಜಬೀಯುಲ್ಲ ನನ್ನು ಕೋರ್ಟ್ ಗೆ ಹಾಜರು ಪಡಿಸುತ್ತೇವೆ ಎಂದು ತಿಳಿಸಿದರು.
ಹೆಚ್ಚಿನ ವಿಚಾರಣೆಗಾಗಿ ಜಬೀಯುಲ್ಲನನ್ನು ನಾಲ್ಕು ದಿನಗಳ ಕಾಲ ಪೋಲಿಸ್ ಕಸ್ಟಡಿಗೆ ಪಡೆಯಲಿದ್ದೇವೆ ಎಂದು ತಿಳಿಸಿದ ಅವರು, ಶಿವಮೊಗ್ಗದಲ್ಲಿ 13 ರೌಡಿಶೀಟರ್ ಗಡಿಪಾರು ಮಾಡಲು ಶಿಫಾರಸ್ಸು ಮಾಡಲಾಗಿದೆ, ಅದರಲ್ಲಿ ಇದೀಗ ಇಬ್ಬರ ಗಡಿಪಾರು ಆದೇಶ ಆಗಿದೆ ಎಂದು ವಿವರಿಸಿದರು.

ಶಿವಮೊಗ್ಗದಲ್ಲಿ ಗಣೇಶೋತ್ಸವ ಹಿನ್ನೆಲೆಯಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಗುತ್ತಿದೆ, ಜಬೀಯುಲ್ಲನಿಗೆ ನ್ಯಾಯಾಲಯ ಕಳ್ಳತನ ಪ್ರಕರಣದಲ್ಲಿ ಶಿಕ್ಷೆ ವಿಧಿಸಿದೆ ಎಂದು ತಿಳಿಸಿದರು.
ಈಶ್ವರಪ್ಪ ಬೆದರಿಕೆ ಪತ್ರ
ಮಾಜಿ ಸಚಿವ ಕೆ ಎಸ್ ಈಶ್ವರಪ್ಪರವರಿಗೆ ಪತ್ರ ಬರೆದು ಬೆದರಿಕೆ ಹಾಕಿದ ಪ್ರಕರಣ ಸಂಬಂಧ ಶಿವಮೊಗ್ಗದ ಕೋಟೆ ಪೋಲಿಸ್ ಠಾಣೆಯಲ್ಲಿ ಎಫ್ಐಅರ್ ದಾಖಲಾಗಿದೆ. ಸೆಕ್ಷನ್ 504, 506ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪತ್ತೆಗೆ ತನಿಖೆಯನ್ನು ಚರುಕುಗೊಳಿಸಲಾಗಿದೆ.

ಕೋಟೆ ಠಾಣೆಯ ಪಿಐ ಚಂದ್ರಶೇಖರ್ ನೇತೃತ್ವದಲ್ಲಿ ತನಿಖೆ ಆರಂಭಿಸಲಾಗಿದ್ದು, ಎರಡು ದಿನಗಳ ಹಿಂದೆ ಶಿವಮೊಗ್ಗದ ಮಲ್ಲೇಶ್ವರನಗರದ ನಿವಾಸಕ್ಕೆ ಬೆದರಿಕೆ ಪತ್ರ ಬಂದಿತ್ತು, ಈಶ್ವರಪ್ಪನವರ ನಾಲಿಗೆ ಕಟ್ ಮಾಡುವ ಬೆದರಿಕೆ ಹಾಕಲಾಗಿತ್ತು.

More News