ಬೆಂಗಳೂರು : ಕಾಂಗ್ರೆಸ್ ನ ಹಿರಿಯ ಮುಖಂಡ ಗುಲಾಂನಬಿ ಆಜಾದ್ ರಾಜೀನಾಮೆಗೆ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, 46 ವರ್ಷದಿಂದ ಕಾಂಗ್ರೆಸ್ ನಲ್ಲಿದ್ದು ಎಲ್ಲಾ ಅಧಿಕಾರವನ್ನು ಅವರು ಅನುಭವಿಸಿದ್ದಾರೆ. ಆರು ಭಾರಿ ರಾಜ್ಯಸಭಾ ಸದಸ್ಯರಾಗಿದ್ದರು. 20-25 ವರ್ಷಗಳ ಕಾಲ ಸಚಿವರಾಗಿದ್ದರು. ಹಲವು ವರ್ಷ ಪಕ್ಷದಲ್ಲಿ ಹಲವು ಪದವಿಗಳನ್ನು ಎಂಜಾಯ್ ಮಾಡಿದ್ದಾರೆ. ಎಲ್ಲಾ ಸ್ಥಾನಮಾನ ಪಡೆದು ಈಗ ಅಪಾದನೆ ಮಾಡಿ ರಾಜೀನಾಮೆ ನೀಡಿವುದು ಸರಿಯಲ್ಲ ಎಂದು ಹೇಳಿದ್ದಾರೆ.
ಬಿಜೆಪಿ, ಆರ್ ಎಸ್ ಎಸ್ ಗೆ ಹೆದರಿ ಹೋಗುವುದು ಸರಿಯಲ್ಲ ಎಂದು ಕಿಡಿಕಾರಿದ ಅವರು, ಪಕ್ಷ ಸಂಕಷ್ಟ ಸಮಯದಲ್ಲಿ ಅಜಾದ್ ನಡೆ ಸರಿಯಲ್ಲ. ಇಡೀ ದೇಶಾದ್ಯಂತ ಭಾರತ್ ಜೋಡೋ ಕಾರ್ಯಕ್ರಮ ರಾಹುಲ್ ಗಾಂಧಿ ಕರೆ ನೀಡಿದ್ದಾರೆ. ಇಂತಹ ಸಂದರ್ಭದಲ್ಲಿ ಹಿರಿಯ ನಾಯಕರು ರಾಜೀನಾಮೆ ಕೊಡುವುದು ಸರಿಯಲ್ಲ ಎಂದು ಹೇಳಿದರು.
ನಾನು ಕೆಳಮನೆಯಲ್ಲಿ 5 ವರ್ಷ ವಿಪಕ್ಷ ನಾಯಕನಾಗಿದ್ದೆ. ಈಗ ಮೇಲ್ಮನೆಯಲ್ಲಿ ಒಂದೂವರೆ ವರ್ಷದಿಂದ ವಿಪಕ್ಷ ನಾಯಕನಾಗಿದ್ದೇನೆ ಅಲ್ಲಿ ಕಣ್ಣಿರು ಹಾಕೋರು ಯಾರು ನನಗೆ ಸಿಗಲಿಲ್ಲ ಅನ್ನೋ ಮೂಲಕ ರಾಜ್ಯಸಭೆಯಲ್ಲಿ ಗುಲಾಂ ನಬಿ ಕಣ್ಣೀರು ಹಾಕಿದ್ದಕ್ಕೆ ಖರ್ಗೆ ವ್ಯಂಗ್ಯವಾಡಿದರು.
ರಾಜ್ಯಸಭೆಯಲ್ಲಿ ವಿದಾಯ ಭಾಷಣ ಮಾಡುವಾಗ ಜಮ್ಮು ಕಾಶ್ಮೀರದಲ್ಲಿ ಪಕ್ಷ ಕಟ್ತೀನಿ. ಅದು ಸ್ವರ್ಗ ಎಂದು ಹೇಳಿದ್ರು. ಸ್ವರ್ಗ ಅಂದ್ರೆ ಏನು ಅಂತ ಅವರೇ ಹೇಳಬೇಕು ಎಂದು ಖರ್ಗೆ ಕಿಡಿಕಾರಿದರು.
ಎಐಸಿಸಿ ಅಧ್ಯಕ್ಷರಾಗ್ತೀರಾ
ಇನ್ನು ತಾವು ಎಐಸಿಸಿ ಅಧ್ಯಕ್ಷರಾಗ್ತೀರಾ ಅನ್ನೋ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಅದರ ಬಗ್ಗೆ ನನಗೆ ಮಾಹಿತಿ ಇಲ್ಲ. ದೆಹಲಿಗೆ ಹೋಗ್ತಾ ಇದ್ದೇನೆ, ವರಿಷ್ಠರನ್ನು ಭೇಟಿಯಾಗುತ್ತಿದ್ದೇನೆ, ಬಳಿಕ ಈ ಬಗ್ಗೆ ಮಾತನಾಡುತ್ತೇನೆ ಎಂದು ಹೇಳಿದ ಅವರು, ಇದೇ ವೇಳೆ ಬಿಜೆಪಿ ವಿರುದ್ಧ ಆಕ್ರೋಶ ಹೊರ ಹಾಕಿದ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿ ಅವರಿಗೆ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ಆಗಲ್ಲ. ನಾವು ಗೆದ್ದ ರಾಜ್ಯಗಳಲ್ಲಿ ಆಪರೇಷನ್ ಮಾಡಿ ಅಧಿಕಾರಕ್ಕೆ ಬರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಹಾರಾಷ್ಟ್ರ, ಗೋವಾ, ಜಮ್ಮು ಕಾಶ್ಮೀರ, ಈಗ ದೆಹಲಿ ಸೇರಿದಂತೆ ಎಲ್ಲ ಕಡೆ ಆಪರೇಷನ್ ಮಾಡಿ ಅಧಿಕಾರಕ್ಕೆ ಬರುತ್ತಿದ್ದಾರೆ. ಮೊದಲು ಹಣ ಆಫರ್ ಮಾಡ್ತಾರೆ. ಅದು ಆಗಲಿಲ್ಲ ಅಂದ್ರೆ ಕೇಂದ್ರದ ತನಿಖಾ ಸಂಸ್ಥೆಗಳನ್ನ ಬಳಸಿಕೊಂಡು ಹೆದರಿಸಿ ಅಧಿಕಾರಕ್ಕೆ ಬರುತ್ತಿದ್ದಾರೆ. ಮಾಧ್ಯಮಗಳು ಅವರ ವಿರುದ್ಧ ಮಾತನಾಡಿದ್ರೆ ನಿಮ್ಮನ್ನೂ ಮುಗಿಸುತ್ತಾ ಬರುತ್ತಾರೆ ಎಂದು ಖರ್ಗೆ, ಬಿಜೆಪಿ ವಿರುದ್ಧ ಕಿಡಿಕಾರಿದರು.




