ಬೆಂಗಳೂರು : ಭಾರತ ಒಗ್ಗೂಡಿಸಲು ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ದೇಶದ ಐಕ್ಯತೆ ಯಾತ್ರೆ ನಡೆಯಲಿದೆ. ಈ ಪಾದಯಾತ್ರೆ ಜವಾಬ್ದಾರಿಯನ್ನು ಕಾಂಗ್ರೆಸ್ ವಹಿಸಿದ್ದರೂ ಇದು ಪಕ್ಷಾತೀತ ಯಾತ್ರೆಯಾಗಿರುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಭಾರತ ಐಕ್ಯತಾ ಯಾತ್ರೆ ರಾಜ್ಯದಲ್ಲಿ 21 ದಿನ, ಗುಂಡ್ಲುಪೇಟೆಯಿಂದ ರಾಯಚೂರುವರೆಗೆ ಸಾಗಲಿದೆ. ಒಂದೊಂದು ದಿನ ಯಾರು ಪಾಲ್ಗೊಳ್ಳಬೇಕು, 21 ದಿನವೂ ಯಾರು ಇರಬೇಕೆಂದು ನಿಶ್ಚಯಿಸಲಾಗಿದೆ. ನೋಂದಣಿಗೂ ಅವಕಾಶ ಇರಲಿದೆ. ಬೆಳಗ್ಗೆ ಹನ್ನೊಂದರವರೆಗೆ ಜನರೊಂದಿಗೆ ಚರ್ಚೆ ನಡೆಸಿ, ನಂತರ ಪಾದಯಾತ್ರೆ ಸಂಜೆವರೆಗೂ ಸಾಗಲಿದೆ. ಕನ್ನಡದ ಲೇಪದೊಂದಿಗೆ ಈ ಕಾರ್ಯಕ್ರಮ ರೂಪಿಸಲಾಗಿದೆ ಎಂದು ವಿವರಿಸಿದರು.
ಈ ದೇಶದಲ್ಲಿ ಸಾಮಾಜಿಕ ಸಾಮರಸ್ಯ ಹದಗೆಡುತ್ತಿದ್ದು, ಕುವೆಂಪು ಅವರು ಹೇಳಿರುವಂತೆ ನಮ್ಮ ನಾಡು ಶಾಂತಿಯ ತೋಟ ಆಗಬೇಕು, ಪ್ರತಿ ಕುಟುಂಬವೂ ಬೆಲೆ ಏರಿಕೆಯಿಂದ ತತ್ತರಿಸುತ್ತಿದ್ದು, ಅದರಲ್ಲೂ ಮಹಿಳೆಯರಿಗೆ ಆರ್ಥಿಕ, ಮಾನಸಿಕ ಶಕ್ತಿ ತುಂಬಬೇಕು. ನಿರುದ್ಯೋಗ ಪ್ರಮಾಣ ಹೆಚ್ಚಿದ್ದು ಯುವಕರಿಗೆ ಉದ್ಯೋಗ ಸಿಗಬೇಕು, ರಾಜ್ಯದಲ್ಲಿ ಭ್ರಷ್ಟಾಚಾರ ರಹಿತ ಸರ್ಕಾರ ರಚನೆ ಆಗಬೇಕು, ರೈತರು ಹಾಗೂ ಕಾರ್ಮಿಕರ ಬದುಕು ಹಸನಾಗಬೇಕು. ಈ ಐದು ಉದ್ದೇಶದೊಂದಿದೆ ಎಲ್ಲ ವರ್ಗದವರನ್ನು ರಕ್ಷಣೆ ಮಾಡಲು ಭಾರತ ಜೋಡೋ ಯಾತ್ರೆ ನಡೆಯಲಿದೆ ಎಂದರು.
ನಮ್ಮ ರಾಜ್ಯದಲ್ಲಿನ ಪಾದಯಾತ್ರೆ ಇಡೀ ದೇಶಕ್ಕೆ ಮಾದರಿಯಾಗಲಿದೆ ಎಂಬ ವಿಶ್ವಾಸವಿದೆ. ಈ ಪಾದಯಾತ್ರೆಯಲ್ಲಿ ಶಿಕ್ಷಕರು, ನಿವೃತ್ತ ಅಧಿಕಾರಿಗಳು, ಸಂಘ ಸಂಸ್ಥೆಗಳು, ರೈತರು, ಕಾರ್ಮಿಕರಿಗೆ ಅವಕಾಶ ಮಾಡಿಕೊಡಲಾಗುವುದು. ರಾಜ್ಯದಲ್ಲಿ ನಿತ್ಯ 25 ಕಿ.ಮೀ ದೂರ ಪಾದಯಾತ್ರೆ ಮಾಡಲಾಗುವುದು. ಈ ಪಾದಯಾತ್ರೆಗೆ ಎಲ್ಲ ಜಿಲ್ಲೆಗಳ ಜನರು ಭಾಗವಹಿಸಲು ಅವಕಾಶ ಮಾಡಿಕೊಡಲಾಗುವುದು. ರಾಹುಲ್ ಗಾಂಧಿ ಅವರು ರಾಷ್ಟ್ರಾದ್ಯಂತ 3,500 ಕಿ.ಮೀ. ಹೆಜ್ಜೆ ಹಾಕಲಿದ್ದಾರೆ ಎಂದರು.

ಬಿ.ಕೆ ಹರಿಪ್ರಸಾದ್ ಅವರಿಗೆ ರಾಜ್ಯದಲ್ಲಿನ ಪಾದಯಾತ್ರೆ ಉಸ್ತುವಾರಿ ನೀಡಲಾಗಿದ್ದು, ರಾಷ್ಟ್ರ ಮಟ್ಟದ ಸಮಿತಿಯಲ್ಲಿ ಕೆ.ಜೆ. ಜಾರ್ಜ್, ಸಲೀಂ ಅಹ್ಮದ್ ಅವರಿಗೆ ಸ್ಥಾನ ನೀಡಲಾಗಿದ್ದು, ವಿವಿಧ ಜವಾಬ್ದಾರಿ ವಹಿಸಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲರ ಜತೆ ಸಭೆ ಮಾಡಿ ಯಾರೆಲ್ಲಾ 21 ದಿನ ನಡೆಯಬೇಕು ಎಂದು ಅಭಿಪ್ರಾಯ ಸಂಗ್ರಹಿಸಿ, ನಂತರ ಅವರನ್ನು ಆಯ್ಕೆ ಮಾಡಲಾಗುವುದು. ಎಲ್ಲರಿಗೂ ಅಧಿಕೃತ ವೆಬ್ ಸೈಟ್ ನಲ್ಲಿ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಬಳ್ಳಾರಿಯಲ್ಲಿ ಒಂದು ದಿನ ಸಾರ್ವಜನಿಕ ಸಮಾವೇಶ ಮಾಡಲಾಗುವುದು. ಮೈಸೂರಿನಲ್ಲಿ ತಾಂತ್ರಿಕ ಸಮಸ್ಯೆ ಇದೆ. ಅಕ್ಟೋಬರ್ 4-5 ರಂದು ದಸರಾ ಹಬ್ಬ ನಡೆಯಲಿದ್ದು, ಈ ದಿನ ಯಾವ ರೀತಿ ಮಾಡಬೇಕು ಎಂದು ದೆಹಲಿ ನಾಯಕರ ಜತೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ.
ಸಮಸಮಾಜ ನಿರ್ಮಿಸುವುದು ನಮ್ಮ ಉದ್ದೇಶ – ಸಿದ್ದರಾಮಯ್ಯ
ದೇಶದಲ್ಲಿ ಸಾಮರಸ್ಯ ಹಾಳಾಗುತ್ತಿದೆ, ಐಕ್ಯತೆಗೆ ಧಕ್ಕೆ ಬಂದಿದೆ, ಹಾಗಾಗಿ ಸಾಮರಸ್ಯ ಮೂಡಿಸಬೇಕಾದ ಅಗತ್ಯವಿದೆ ಎಂದು ವಿರೋಧ ಪಕ್ಷಧ ನಾಯಕ ಸಿದ್ದರಾಮಯ್ಯ ತಿಳಿಸಿದರು.

ಪ್ರಜಾಪ್ರಭುತ್ವಕ್ಕೆ ಬೀಳುತ್ತಿರುವ ಹೊಡೆತವನ್ನ ತಪ್ಪಿಸಬೇಕಿದೆ, ಧರ್ಮ ರಾಜಕಾರಣ ಹೆಚ್ಚಾಗುತ್ತಿದೆ, ಮತಗಳ ಕ್ರೋಡೀಕರಣಕ್ಕೆ ಧರ್ಮ ರಾಜಕಾರಣ ಮಾಡಲಾಗುತ್ತಿದೆ, ಸಮ ಸಮಾಜವನ್ನ ನಿರ್ಮಿಸುವುದು ನಮ್ಮ ಪಕ್ಷದ ಉದ್ದೇಶ ಎಂದು ತಿಳಿಸಿದರು.
