NOIDA SUPERTECH TWIN TOWER DEMOLITION: ಕೇವಲ 9 ಸೆಕಂಡ್ ಗಳಲ್ಲಿ ನೆಲಸಮವಾದ ನೋಯ್ಡಾದ ಸೂಪರ್ ಟೆಕ್ ಅವಳಿ ಕಟ್ಟಡ

ನೋಯ್ಡಾ: ವಿಶ್ವದ ಗಮನ ಸೆಳೆದಿದ್ದ ನೋಯ್ಡಾದ ಸೂಪರ್ ಟೆಕ್ ಅವಳಿ ಕಟ್ಟಡಗಳು ಇಂದು ಮಧ್ಯಾಹ್ನ ಸುಮಾರು 2.30ಕ್ಕೆ ನೆಲಸಮಗೊಳಿಸಲಾಯಿತು. ಅವಳಿ ಕಟ್ಟಡದ ಅಪೆಕ್ಸ್ ಟವರ್ 32 ಹಾಗೂ ಸಯಾನಿ 29 ಮಹಡಿಗಳನ್ನು ಹೊಂದಿದ್ದು, ಕೇವಲ 9 ಸೆಕಂಡ್ ಗಳಲ್ಲಿ ಧರೆಗುರುಳಿಸಲಾಯಿತು.
ಅಪೆಕ್ಸ್ ಟವರ್ 103 ಮೀಟರ್ ಮತ್ತು ಸಯಾನಿ 97 ಮೀಟರ್ ಎತ್ತರವಿದ್ದು, ಇದನ್ನು ಎಡಿಫಿಸ್ ಎಂಜಿನಿಯರಿಂಗ್ ಸಂಸ್ಥೆಯು ದಕ್ಷಿಣ ಆಫ್ರಿಕಾದ ತಜ್ಞರ ನೆರವಿನಿಂದ ಕೆಡವಿತು. ದೇಶದಲ್ಲಿ ಈ ಹಿಂದೆ ಕೇರಳಾದಲ್ಲಿ 2020ರಲ್ಲಿ 68 ಮೀಟರ್ ಎತ್ತರದ ಕಟ್ಟಡ ಕೆಡವಿರುವುದು ಇದುವರೆಗಿನ ದೇಶದ ಅತೀದೊಡ್ಡ ಕಾರ್ಯಾಚರಣೆಯಾಗಿತ್ತು. ಅಬುದಾಭಿಯಲ್ಲಿ 168 ಮೀಟರ್ ಎತ್ತರದ ಕಟ್ಟಡ ನೆಲಸಮ ಇದುವರೆಗಿನ ವಿಶ್ವದ ಅತ್ಯಂತ ದೊಡ್ಡ ಕಾರ್ಯಾಚರಣೆ ಎಂಬ ಕೀರ್ತಿಗೆ ಪಾತ್ರವಾಗಿದೆ.
ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್ ನಲ್ಲಿ ಮೂರು ವರ್ಷಗಳ ಹಿಂದೆ 108 ಮೀಟರ್ ಎತ್ತರದ ಬ್ಯಾಂಕ್ ಕಟ್ಟಡವನ್ನು ಕೆಡವಿದ ಕಾರ್ಯಾಚರಣೆ ಅತೀ ದೊಡ್ಡ ಕಾರ್ಯಾಚರಣೆಯಾಗಿತ್ತು. ಇವೆರಡರಲ್ಲಿ ಪಾಲ್ಗೊಂಡಿದ್ದ ತಜ್ಞರು ಈ ಅವಳಿ ಕಟ್ಟಡ ಕಾರ್ಯಾಚರಣೆಯಲ್ಲೂ ಪಾಲ್ಗೊಂಡಿದ್ದರು.
ಅವಳಿ ಕಟ್ಟಡವನ್ನು ಏಕೆ ನೆಲಸಮಗೊಳಿಸಲಾಯಿತು?

ಸೂಪರ್ ಟೆಕ್ ಕಂಪನಿ ಎಮರಾಲ್ಡ್ ಕೋರ್ಟ್ ಸೊಸೈಟಿ ಆವರಣದಲ್ಲಿ 100 ಮೀಟರ್ ಎತ್ತರದ ಅವಳಿ ಕಟ್ಟಡಗಳನ್ನು ನಿರ್ಮಾಣ ಮಾಡಿತ್ತು. ಕಟ್ಟಡ ನಿರ್ಮಾಣದ ಮೂಲ ನಕ್ಷೆಯಲ್ಲಿ 14 ಮಹಡಿಗಳ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಲಾಗಿತ್ತು. ಆದರೆ ಕಂಪನಿಯು 40 ಮಹಡಿಗಳ ಕಟ್ಟಡವನ್ನು ನಿರ್ಮಾಣ ಮಾಡಿತ್ತು. ಅದಲ್ಲದೆ, ಉದ್ಯಾನವನ ನಿರ್ಮಾಣ ಮಾಡುವ ಜಾಗದಲ್ಲಿ ಅವಳಿ ಕಟ್ಟಡ ತಲೆಎತ್ತಿತ್ತು.,
2012ರಲ್ಲಿ ಸ್ಥಳೀಯ ನಿವಾಸಿಗಳು ಕಾನೂನುಬಾಹಿರವಾಗಿ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಆರೋಪಿಸಿ ಅಲಹಾಬಾದ್ ಹೈಕೋರ್ಟ್ ನ ಮೊರೆಹೋಗಿದ್ದರು. ನ್ಯಾಯಾಲಯ 2014ರಲ್ಲಿ ನಿವಾಸಿಗಳ ಪರವಾಗಿ ತೀರ್ಪು ನೀಡಿತ್ತು ಹಾಗೆಯೇ ಕೇವಲ ನಾಲ್ಕು ತಿಂಗಳಲ್ಲಿ ಕಂಪನಿಯು ಸ್ವಂತ ಖರ್ಚಿನಲ್ಲಿ ಕಟ್ಟಡವನ್ನು ನೆಲಸಮ ಮಾಡಬೇಕು ಎಂದು ಆದೇಶ ನೀಡಿತ್ತು.
ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಫ್ಲಾಟ್ ಖರೀದಿದಾರರು ಮತ್ತು ಕಂಪನಿಯು ಸುಪ್ರೀಂಕೋರ್ಟ್ ಮೊರೆ ಹೋಗಿತ್ತು. ಅಂತಿಮವಾಗಿ ಸುಪ್ರೀಂಕೋರ್ಟ್ ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಎತ್ತಿಹಿಡಿದು, ಕಟ್ಟಡ ನೆಲಸಮಕ್ಕೆ ಆದೇಶ ನೀಡಿತ್ತು.
ಕಟ್ಟಡ ಕೆಡವಿದ ಕಾರ್ಯಾಚರಣೆ ಹೇಗಿತ್ತು
ಎರಡು ಟವರ್‌ಗಳಲ್ಲಿ 3,700 ಕೆ ಜಿ ಸ್ಫೋಟಕಗಳನ್ನು ಬಳಸಲಾಗಿತ್ತು. ಕಟ್ಟಡಗಳ ಕಂಬಗಳಲ್ಲಿ ಸುಮಾರು 7,000 ರಂಧ್ರಗಳಲ್ಲಿ ಸ್ಫೋಟಕಗಳನ್ನು ಇರಿಸಿದ್ದು 20,000 ಸರ್ಕ್ಯೂಟ್‌ಗಳನ್ನು ಬಳಸಲಾಗಿದೆ. “waterfall technique” ಎಂದು ಕರೆಯಲ್ಪಡುವ ತಂತ್ರಜ್ಞಾನದಿಂದ ಕಟ್ಟಡಗಳು ಕುಸಿದು ನೇರವಾಗಿ ಕೆಳಗೆ ಬೀಳುವಂತೆ ಖಚಿತಪಡಿಸಿಕೊಳ್ಳಲು ಸ್ಫೋಟವನ್ನು ಜೋಡಿಸಲಾಗಿತ್ತು.

ಈ ಪ್ರದೇಶದ ಸುಮಾರು 7,000 ನಿವಾಸಿಗಳನ್ನು ಇಂದು ಬೆಳಿಗ್ಗೆನೇ ಬೇರೆಡೆ ಸ್ಥಳಾಂತರಿಸಲಾಗಿತ್ತು. ಅಕ್ಕಪಕ್ಕದ ಕಟ್ಟಡಗಳಲ್ಲಿ ಗ್ಯಾಸ್ ಮತ್ತು ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿತ್ತು. ಸಂಜೆ 4 ಗಂಟೆಗೆ ಅವುಗಳನ್ನು ಪುನಃಸ್ಥಾಪಿಸಲಾಗುತ್ತದೆ ಮತ್ತು ನಿವಾಸಿಗಳಿಗೆ ಸಂಜೆ 5.30 ರೊಳಗೆ ಹಿಂತಿರುಗಲು ಅನುಮತಿ ನೀಡಲಾಗಿತ್ತು.

ಧೂಳಿನಿಂದ ರಕ್ಷಣೆ ಪಡೆಯಲು ತಮ್ಮ ಮನೆಗಳಿಗೆ ಹಿಂತಿರುಗಲು ಅನುಮತಿಸಿದಾಗ ಮನೆಯೊಳಗೆ ಮಾಸ್ಕ್ ಧರಿಸಿ ಬರಲು ಸೂಚಿಸಲಾಗಿತ್ತು. ಕಟ್ಟಡ ಕೆಡವುವ ಕಾರ್ಯಾಚರಣೆಗಾಗಿ ₹ 100 ಕೋಟಿ ಮೊತ್ತದ ಬಜೆಟ್​ ಕಾಮಗಾರಿ ನಡೆಯಲಿದೆ. ಕೆಡವುವಾಗ ಅಕ್ಕಪಕ್ಕದ ಕಟ್ಟಡಗಳಿಗೆ ಆಗುವ ಹಾನಿಯನ್ನೂ ಭರಿಸಬೇಕಿದೆ. ಈ ವೆಚ್ಚಗಳನ್ನು ಸೂಪರ್​ಟೆಕ್ ಕಂಪನಿಯೇ ಭರಿಸಬೇಕಿದೆ. ಕೆಡವುವ ಕಾರ್ಯಾಚರಣೆಗೆ ₹ 20 ಕೋಟಿ ಖರ್ಚಾದರೆ, ಕಟ್ಟಡದ ಅಸ್ಥಿಪಂಜರದಂಥ ಆಕೃತಿ ಕೆಡವಲು ₹ 50 ಕೋಟಿ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಸ್ಫೋಟದ ಗಂಟೆಗಳ ಮುಂಚೆಯೇ ಯಾವುದೇ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಸಂಚಾರ ಮಾರ್ಗಗಳನ್ನು ನಿರ್ಬಂಧಿಸಲಾಗಿತ್ತು.
ಮುಂದಿನ ಸವಾಲು
ಕಟ್ಟಡ ಕೆಡವಿನದ ನಂತರ ಉಂಟಾಗುವ ಸಮಸ್ಯೆಯೇ ದೊಡ್ಡ ಸಮಸ್ಯೆ. ಕಟ್ಟಡ ಕೆಡವಿದಾಗ ಉಂಟಾಗುವ ಅವಶೇಷ ಸ್ವಚ್ಛಗೊಳಿಸುವುದು ನೋಯ್ಡಾ ಅಧಿಕಾರಿಗಳಿಗಿರುವ ಮುಂದಿನ ಸವಾಲಾಗಿದೆ. ಅವಶೇಷಗಳನ್ನು ತೆರವುಗೊಳಿಸಲು ಮೂರು ತಿಂಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ತ್ಯಾಜ್ಯವನ್ನು ನಿಗದಿತ ಜಾಗದಲ್ಲಿ ಸುರಿಯಲಾಗುವುದು.

#Noida twin building #demolition #waterfall technique #supertech twin building #supreeme court #alahabad highcourt

More News

You cannot copy content of this page