ಹುಬ್ಬಳ್ಳಿ: ರಾತ್ರಿ ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ನಗರದ ಚನ್ನಮ್ಮಾ ವೃತ್ತದ ಬಳಿಯಲ್ಲಿರುವ ಈದ್ಗಾ ಮೈದಾನದಲ್ಲಿ ಗಜಾನನ ಉತ್ಸವ ಮಹಾಮಂಡಳಿ ಇಂದು ಬೆಳಗ್ಗೆ ಗಣೇಶಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿತು.
ಸುಮಾರು ನಾಲ್ಕು ಅಡಿ ಎತ್ತರದ ಮೂರ್ತಿಯನ್ನು ಧಾರ್ಮಿಕ ವಿಧಿ ವಿಧಾನಗಳ ಮೂಲಕ ಪ್ರತಿಷ್ಠಾಪನೆ ಮಾಡಲಾಗಿದ್ದು, ಸಂಜೆ ಮಂಗಳಾರತಿ ನಡೆಯಲಿದೆ. ಮೂರು ದಿನ ಪೂಜಾ ಕಾರ್ಯಕ್ರಮಗಳು ನಡೆಯಲಿದ್ದು, ಮೂರ್ತಿ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ.
ಮಂಗಳವಾರ ರಾತ್ರಿ ಹೈಕೋರ್ಟ್ ನಿಂದ ಮೂರ್ತಿ ಸ್ಥಾಪನೆಗೆ ಅವಕಾಶ ದೊರೆಯುತ್ತಿದ್ದಂತೆಯೇ ಮಹಾಮಂಡಲದ ಅಧ್ಯಕ್ಷ ಸಂಜೀವ್ ಸೇರಿದಂತೆ ಸದಸ್ಯರು ರಾತ್ರಿಯೇ ಮೈದಾನದಲ್ಲಿ ಪೆಂಡಾಲ್ ಹಾಕಿ ಗಣೇಶ ಉತ್ಸವಕ್ಕೆ ಸಿದ್ದತೆ ಮಾಡಿಕೊಂಡರು. ಪೆಂಡಾಲ್ ಜಾಗದಲ್ಲಿ ಗೋಮೂತ್ರ ಸಿಂಪಡಿಸಿ, ಶುದ್ದಿಕಾರ್ಯ ಕೈಗೊಂಡಿದ್ದರು.




