NO INTERFERANCE: ಮುರುಘಾ ಶರಣರ ಪ್ರಕರಣದಲ್ಲಿ ರಾಜ್ಯ ಸರ್ಕಾರ ಯಾವುದೇ ಹಸ್ತಕ್ಷೇಪವಿಲ್ಲ: ಗೃಹ ಸಚಿವ

ಶಿವಮೊಗ್ಗ : ಮುರುಘಾ ಶರಣರ ತನಿಖೆಯ ವಿಚಾರದಲ್ಲಿ ರಾಜ್ಯ ಸರ್ಕಾರ ಯಾವುದೇ ರೀತಿಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದ್ದಾರೆ.
ಶಿವಮೊಗ್ಗದಲ್ಲಿ ಈ ವಿಚಾರ ತಿಳಿಸಿದ ಅವರು, ಈ ವಿಚಾರವಾಗಿ ಪೊಲೀಸರು ತನಿಖೆ ಮಾಡುತ್ತಿದ್ದಾರೆ, ಇದರಲ್ಲಿ ಸರಕಾರ ಯಾವುದೇ ರೀತಿಯ ಹಸ್ತಕ್ಷೇಪ ಮಾಡುವುದಿಲ್ಲ, ತನಿಖೆ ದೃಷ್ಟಿಯಿಂದ ಹೆಚ್ಚಿಗೆ ಏನನ್ನೂ ಹೇಳುವುದಿಲ್ಲ ಎಂದರಲ್ಲದೆ, ಮುರುಘಾ ಮಠಕ್ಕೆ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗಿದೆ, ಕೆಎಸ್ ಆರ್ ಪಿಯ ಏಳು ತುಕಡಿಗಳನ್ನು ನಿಯೋಜಿಸಲಾಗಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದ ಬಗ್ಗೆ ಮೋದಿಯವರು ವಿಶೇಷ ಆಸಕ್ತಿ ಹೊಂದಿದ್ದಾರೆ, ತಿಂಗಳಿಗೊಮ್ಮೆ ಭೇಟಿ ನೀಡುವುದಾಗಿ‌ ತಿಳಿಸಿದ್ದಾರೆ, ಚುನಾವಣೆಗೆ ನಾವು ಸಿದ್ದರಾಗಿದ್ದೇವೆ, ಸೆ.8 ರಂದು ದೊಡ್ಡಬಳ್ಳಾಪುರದಲ್ಲಿ ಜನೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದರು.
ಮೋದಿ ಭೇಟಿ ಬಗ್ಗೆ ಹೆಚ್ ಡಿಕೆ ಅವರು ಮಾಡಿರುವ ಆರೋಪ ವಿಚಾರವಾಗಿ ಮಾತನಾಡಿದ ಅವರು, ಒಬ್ಬ ಪ್ರಧಾನಿಯಾಗಿ ಏನು ಕೆಲಸ ಮಾಡಬೇಕೋ ಅದನ್ನು ಮೋದಿ ಮಾಡುತ್ತಿದ್ದಾರೆ, ಮಾಜಿ ಸಿಎಂ ಆಗಿ ಅವರ ಹೇಳಿಕೆ ಸರಿಯಲ್ಲ, ಮಳೆ ಹಾನಿಗೆ ಸರಕಾರ ಏನೇನು ಕ್ರಮ ಕೈಗೊಳ್ಳಬೇಕೋ ಅದನ್ನು ಕೈಗೊಂಡಿದೆ ಎಂದು ಸಮಜಾಯಿಸಿ ನೀಡಿದರು.

ಯಡಿಯೂರಪ್ಪ ಅವರಿಗೆ ಸ್ಥಾನಮಾನ ನೀಡುವ ವಿಚಾರವಾಗಿ ಮಾತನಾಡಿದ ಅವರು, ಯಡಿಯೂರಪ್ಪ ಅವರಿಗೆ ಪಕ್ಷ ಗೌರವ ಸಲ್ಲಿಸಿದೆ, ರಾಜ್ಯಾದ್ಯಂತ ಪ್ರವಾಸಕ್ಕೆ ಅವರು ಸಿದ್ದರಾಗಿದ್ದಾರೆ, ಮುಂದಿನ ಚುನಾವಣೆಯಲ್ಲಿ ಪಕ್ಷಕ್ಕೆ ಹೆಚ್ಚಿನ ಸ್ಥಾನ ಸಿಗಲಿದೆ ಎಂದರು.
ಪ್ರೇಮ್ ಸಿಂಗ್ ಚೂರಿ ಇರಿತ ಪ್ರಕರಣ
ಶಿವಮೊಗ್ಗದ ಪ್ರೇಮ್ ಸಿಂಗ್ ಚೂರಿ ಇರಿತ ಪ್ರಕರಣದ ಪ್ರಮುಖ ಆರೋಪಿ ಜಬೀ ಲಿಂಕ್ ಭಯಾನಕವಾಗಿದೆ, ಭಯೋತ್ಪಾದಕರ ಜೊತೆ ಸಂಬಂಧ ಇರುವುದು ಬಹಿರಂಗವಾಗುತ್ತಿದೆ, ಸದ್ಯದಲ್ಲೇ ಈ ಪ್ರಕರಣವನ್ನು ಎನ್ ಐಎಗೆ ಹಸ್ತಾಂತರ ಮಾಡುತ್ತೇವೆ ಎಂದು ತಿಳಿಸಿದರು.
ಶಿವಮೊಗ್ಗ ಸಂಪೂರ್ಣ ಶಾಂತಿಯುತವಾಗಿದೆ, ಆಗಾಗ್ಗೆ ಆಕಸ್ಮಿಕ ಘಟನೆಗಳು ನಡೆಯುತ್ತವೆ ಅಷ್ಟೇ ಎಂದು ವಿವರಿಸಿದರು.

More News