ಶಿವಮೊಗ್ಗ : ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಎನೇನು ಭ್ರಷ್ಟಾಚಾರ ನಡೆದಿತ್ತು ಎಂದು ಜನರ ಮುಂದೆ ಇಡಲಾಗುವುದು ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬೊಮ್ಮಾಯಿ ಅಧಿಕಾರಾವಧಿಯಲ್ಲಿ ನಡೆದಿದ್ದನ್ನು ಕೂಡ ಜನತೆಯ ಮುಂದಿಡಲಾಗುವುದು ಎಂದು ತಿಳಿಸಿದರು.
ರಾಜ್ಯ ಸರ್ಕಾರದ ಮೇಲೆ ಸಾಕಷ್ಟು ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಬಿಜೆಪಿ ತಂತ್ರಗಾರಿಕೆಯಲ್ಲಿ ತೊಡಗಿದೆ. ಈ ಹಿಂದಿನ ಸರ್ಕಾರಗಳು ಮಾಡಿರುವ ಭ್ರಷ್ಟಾಚಾರವನ್ನು ಜನರ ಮುಂದಿಡಲು ಮುಂದಾಗಿದ್ದಾರೆ. ಅಭಿವೃದ್ಧಿ ಕೆಲಸವನ್ನು ಮಾತನಾಡದ ಹಾಗೂ ಆರೋಪಗಳನ್ನು ಸೂಕ್ತ ರೀತಿಯ ತನಿಖೆಗೆ ಒಳಪಡಿಸದೇ ಹಿಂದಿನ ಸರ್ಕಾರಗಳ ತಪ್ಪುಗಳನ್ನು ಹುಡುಕುವುದರಲ್ಲಿ ರಾಜ್ಯ ಸರ್ಕಾರ ತಲ್ಲೀನವಾಗಿದೆ.
ಭ್ರಷ್ಟಾಚಾರ ನಡೆದರೆ ಅದನ್ನು ಬಯಲು ಮಾಡಲಿ ಆದರೆ, ತಮ್ಮ ಸರ್ಕಾರದ ಮೇಲೆ ಆರೋಪಗಳು ಬಂದಿದ್ದರಿಂದ ಹಳೆಯದ್ದನ್ನು ಕೆದಕುವುದು ಎಷ್ಟು ಸರಿ ಎನ್ನುವುದು ಜನರ ಅಭಿಪ್ರಾಯವಾಗಿದೆ.
ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣನಂತಹ ಯಜಮಾನರನ್ನು ದಯವಿಟ್ಟು ಬಿಟ್ಟು ಬಿಡಿ ಎಂದು ಕಾಂಗ್ರೆಸ್ ಮುಖಂಡರಿಗೆ ಮನವಿ ಮಾಡಿದ ಅವರು, ಸುಮ್ಮನೆ ಕೆಂಪಣ್ಣನನ್ನು ಮುಂದೆ ಬಿಟ್ಟು ಅವರಿಗೂ ಕೆಟ್ಟ ಹೆಸರು ತರಬೇಡಿ ಎಂದಿದ್ದಾರೆ.
40% ಕುರಿತ ನಿಮ್ಮ ಹೇಳಿಕೆ ಯಾರು ನಂಬುತ್ತಾರೆ, ಒಂದೇ ಒಂದು ದಾಖಲೆ ಬಿಡುಗಡೆ ಮಾಡಿಲ್ಲ, ಬರಿ ಪುಕ್ಸಟ್ಟೆ ಮಾತು ಎಂದು ಲೇವಡಿ ಮಾಡಿದ ಅವರು, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ತೋರಿಸಲು ಜನೋತ್ಸವ ಕಾರ್ಯಕ್ರಮ ಮಾಡಲಾಗುವುದು ಎಂದರು.

ಶಿವಮೊಗ್ಗದಲ್ಲೂ ರಸ್ತೆ, ವಿದ್ಯುತ್ ದೀಪ, ಕುಡಿಯುವ ನೀರು ಸಮಗ್ರ ಅಭಿವೃದ್ಧಿ ಮಾಡಿದ್ದೇವೆ, ವಿಪಕ್ಷ ಎಂಬ ಕಾರಣಕ್ಕೆ ಎನೇನೂ ಅಭಿವೃದ್ಧಿ ಆಗಿಲ್ಲ ಎಂದರೆ ಹೇಗೆ? ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರ ಮಾಡಿದ್ದಕ್ಕಾಗಿ ರಾಜ್ಯದ ಜನರು ಕಿತ್ತು ಬಿಸಾಕಿದರು ಎಂದು ಕಿಡಿಕಾರಿದರು.
ಡಿಕೆಶಿ ಬೇಲ್ ಮೇಲೆ ಇದ್ದೀಯಪ್ಪಾ
ಇದೇ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡ ಅವರು, ನೀನೀಗ ಬೇಲ್ ಮೇಲೆ ಯಾಕಿದ್ದೀಯಪ್ಪಾ? ತಿಹಾರ್ ಜೈಲಿಗೆ ಸುಮ್ಮನೆ ಕಳುಹಿಸುತ್ತಾರಾ? ಕೋಟಿ ಕೋಟಿ ಆಕ್ರಮ ಹಣ ನಿಮ್ಮ ಮನೆಯಲ್ಲಿ ಸಿಕ್ಕಿದ್ದು ಸತ್ಯ ತಾನೇ? ಸತ್ಯ ಹರಿಶ್ಚಂದ್ರನಂತೆ ದಿನಾ ಬಿಜೆಪಿ ಸರ್ಕಾರ ಭ್ರಷ್ಟಾಚಾರ ಮಾಡಿದ್ದಾರೆ ಎಂದರೆ ಜನ ನಿನ್ನ ನಂಬುತ್ತಾರಾ? ಎಂದು ಪ್ರಶ್ನಿಸಿದರು.
ಪಿಕ್ ಪಾಕೆಟರ್ ಸಿಕ್ಕಿದ ಕೂಡಲೇ ಅವನು ಎಲ್ಲೆಲ್ಲಿ ಮಾಡಿದ್ದ, ಯಾರು ಅವನ ಜೊತೆಗೆ ಇದ್ದಾರೆ ಗೊತ್ತಾಗುತ್ತದೆ, ಪ್ರೇಮ್ ಸಿಂಗ್ ಕೊಲೆ ಯತ್ನದ ಆರೋಪಿಗಳ ಹಿಡಿದ ಮೇಲೆ ಟೆರರಿಸ್ಟ್ ಲಿಂಕ್ ಇರೋದು ಗೊತ್ತಾಗಿದೆ, ಎಷ್ಟೇ ಉಗ್ರವಾದಿ ಚಟುವಟಿಕೆ ನಡೆದರೂ ಬಗ್ಗು ಬಡಿಯುತ್ತೇವೆ ಎಂದು ತಿಳಿಸಿದರು.
ಮುಂಬರುವ ಲೋಕಸಭಾ, ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಸಂಘಟನೆಯ ಕಾರ್ಯಕರ್ತರ ಶಕ್ತಿ ರಾಷ್ಟ್ರೀಯ ನಾಯಕರ ಶಕ್ತಿ ಮೇಲೆ ಗೆಲ್ಲುತ್ತೆ, ದೇಶದಲ್ಲಿ ಕಾಂಗ್ರೆಸ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಯಾರ ನೇತೃತ್ವದಲ್ಲಿ ಚುನಾವಣೆಗೆ ಹೋಗ್ತಾರೆ ಹೇಳಲಿ, ಕರ್ನಾಟಕದಲ್ಲಿ ಯಾರ ನೇತೃತ್ವದಲ್ಲಿ ಚುನಾವಣೆಗೆ ಹೋಗ್ತಿವಿ ಎಂದು ಒಂದು ಹೆಸರು ಹೇಳಲಿ ನೋಡೋಣ ಎಂದು ಹೇಳಿದರು.
ಕೇವಲ ಪ್ರಧಾನಿ ಮೋದಿಯವರ ಹೆಸರು ಹೇಳಿ ಗೆದ್ದು ಅಧಿಕಾರ ಅನುಭವಿಸುತ್ತಿರುವ ಬಿಜೆಪಿಯವರ ಸಾಧನೆ ಏನು ಎನ್ನುವುದು ಪ್ರತಿಪಕ್ಷದವರು ಪ್ರಶ್ನಿಸುತ್ತಿದ್ದಾರೆ.