NITISH KUMAR: ಬಿಹಾರದ ಸಿಎಂ ನಿತೀಶ್ ಕುಮಾರ್ ಹಾಗೂ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಮಹತ್ವದ ಮಾತುಕತೆ

ನವದೆಹಲಿ : ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಬಿಹಾರದ ಮುಖ್ಯಮಂತ್ರಿಗಳಾದ ನಿತೀಶ್ ಕುಮಾರ್ ಅವರು ಇಂದು ಭೇಟಿ ಮಾಡಿ ಮಾತುಕತೆ ನಡೆಸಿದರು.
ಈ ಭೇಟಿಯು ಮಾಜಿ ಪ್ರಧಾನಮಂತ್ರಿಗಳಾದ ಹೆಚ್.ಡಿ.ದೇವೇಗೌಡರ ನವದೆಹಲಿಯ ನಿವಾಸದಲ್ಲಿ ಜರುಗಿತು.

ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷರಾದ ಸಿಎಂ ಇಬ್ರಾಹಿಂ ಹಾಗೂ ಜೆಡಿಯು ರಾಜ್ಯಾಧ್ಯಕ್ಷರಾದ ಮಹಿಮಾ ಪಟೇಲ್ ಅವರು ಉಪಸ್ಥಿತರಿದ್ದರು.

ದೇಶಾದ್ಯಂತ ಜನತಾ ಪರಿವಾರ ಮತ್ತೆ ಒಗ್ಗೂಡಬೇಕಿದೆ ಎಂದ ಮಾಜಿ ಮುಖ್ಯಮಂತ್ರಿ
ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕಾದರೆ ಎಲ್ಲರೂ ಒಗ್ಗೂಡುವ ಅವಶ್ಯಕತೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರೆ.
ನವದೆಹಲಿಯಲ್ಲಿ ಇಂದು ಸಂಜೆ ಮಾಜಿ ಪ್ರಧಾನಮಂತ್ರಿಗಳಾದ ಹೆಚ್.ಡಿ.ದೇವೇಗೌಡ ಅವರ ನಿವಾಸದಲ್ಲಿ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೊಂದಿಗೆ ಮಾತುಕತೆ ನಡೆಸಿದ ನಂತರ ಅವರು ಮಾಧ್ಯಮಗಳ ಜೊತೆ ಮಾತನಾಡಿದರು.
ಜನತಾ ಪರಿವಾರ ಒಗ್ಗೂಡುವ ಬಗ್ಗೆ ಮಾತುಕತೆ ನಡೆಯಿತು. ಕೆಲ ದಿನಗಳ ಹಿಂದೆ ಬಿಹಾರದಲ್ಲಿ ನಡೆದ ರಾಜಕೀಯ ಬೆಳವಣಿಗೆಗಳ ನಂತರ ಮತ್ತೆ ಈ ಚರ್ಚೆಗೆ ಚಾಲನೆ ಸಿಕ್ಕಿದೆ. ಜಯಪ್ರಕಾಶ ನಾರಾಯಣ್ ಅವರಿಂದ ಪ್ರಾರಂಭವಾದ ಜನತಾ ಪರಿವಾರ ಮತ್ತೆ ಒಂದುಗೂಡಬೇಕಿದೆ. ಈಗ ದೇಶದಲ್ಲಿ ಬಲವಾದ ವಿಪಕ್ಷದ ಅವಶ್ಯಕತೆ ಇದೆ ಎಂದು ಅವರು ಅಭಿಪ್ರಾಯಪಟ್ಟರು.
ಇತ್ತೀಚಿಗೆ ದೇಶದ ಉದ್ದಗಲಕ್ಕೂ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು, ಅದರಲ್ಲೂ ಪ್ರಮುಖವಾಗಿ ಬಿಹಾರದಲ್ಲಿ ಆದಂತಹ ಒಂದು ರಾಜಕೀಯದ ಒಂದು ಹೊಸ ಬೆಳವಣಿಗೆ ಎಲ್ಲರ ಗಮನ ಸೆಳೆದಿದೆ. ಜನತಾ ಪರಿವಾರ ಮತ್ತೆ ಒಂದಾಗಬೇಕೆಂಬ ಚರ್ಚೆಗಳು ನಡೆದಿವೆ. ನಿತೀಶ್‌ ಕುಮಾರ್‌ ಅವರು ಕೆಲ ಮಹತ್ವದ ವಿಷಯಗಳನ್ನು ಸಭೆಯಲ್ಲಿ ಪ್ರಸ್ತಾಪ ಮಾಡಿದ್ದಾರೆ. ಪ್ರಾಥಮಿಕ ಹಂತದ ಚರ್ಚೆಗಳಾಗಿವೆ ಎಂದರು.
ತಮ್ಮ ಭೇಟಿಗೂ ಮೊದಲು ನಿತೀಶ್ ಕುಮಾರ್ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ ಎಂದು ಕೇಳಲಾದ ಪ್ರಶ್ನೆಗೆ, “ಮುಂದಿನ ದಿನಗಳಲ್ಲಿ ದೇಶದ ಹಿತದೃಷ್ಟಿಯಿಂದ ಏನೇನು ಬೆಳವಣಿಗೆ ಆಗಬೇಕು. ಆ ಬೆಳವಣಿಗೆಗಳು ಯಾವ ರೀತಿ ಆಗುತ್ತವೆ ಕಾದುನೋಡಿ” ಎಂದು ಅವರು ಮಾರ್ಮಿಕವಾಗಿ ಉತ್ತರಿಸಿದರು.
2018ರಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರಕಾರ ರಚನೆ ಮಾಡಿದಾಗ ಸುಮಾರು 23 ರಾಜ್ಯಗಳ ಪ್ರಮುಖ ನಾಯಕರುಗಳು ಸೇರಿ ಹಲವಾರು ರಾಜ್ಯಗಳ ಮುಖ್ಯಮಂತ್ರಿಗಳು ಆ ಪ್ರಮಾಣದ ಸಮಾರಂಭದಲ್ಲಿ ಸೇರಿದ್ದ ಅವತ್ತಿನ ಸನ್ನಿವೇಶ, ಒಂದು ಪರ್ಯಾಯ ಶಕ್ತಿಯಾಗಿ ಒಟ್ಟುಗೂಡಿಸಬೇಕೆಂದು ಆಸೆ ಇತ್ತು. ಆದರೆ, ಅದಕ್ಕೆ ಹಿನ್ನಡೆ ಆಯಿತು. ಈಗ ಬಿಹಾರದಲ್ಲಿ ಆಗಿರುವ ಬೆಳವಣಿಗೆಯಿಂದ ಯಾವ ರೀತಿ ಬದಲಾವಣೆ ಆಗುತ್ತದೆ ಎಂಬುದನ್ನು ಕಾದು ನೋಡೊಣ ಎಂದರು ಕುಮಾರಸ್ವಾಮಿ.
ಸಭೆಯಲ್ಲಿ ರಾಜ್ಯದ ಜೆಡಿಎಸ್‍ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹಾಗೂ ರಾಜ್ಯದ ಜೆಡಿಯು ಅಧ್ಯಕ್ಷ ಮಹಿಮಾ ಪಟೇಲ್ ಮತ್ತಿತರರು ಉಪಸ್ಥಿತರಿದ್ದರು.

#JDu #jds #Nitish kumar #bihar cm #former cm #hd kumaraswamy #hd devegowdaa #former prime minister

More News

You cannot copy content of this page