KRISHNAM RAJU: ಬಾಹುಬಲಿ ಖ್ಯಾತಿಯ ಪ್ರಭಾಸ್ ಅವರ ಸಂಬಂಧಿ, ಟಾಲಿವುಡ್ ರೆಬಲ್ ಸ್ಟಾರ್ ವೆಂಕಟ ಕೃಷ್ಣಂರಾಜು ನಿಧನ: ಗಣ್ಯರ ಸಂತಾಪ

ಹೈದರಾಬಾದ್ : ತೆಲುಗು ಸಿನಿಮಾ ರಂಗದ ಮೇರುನಟ, ರೆಬಲ್ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ವೆಂಕಟ ಕೃಷ್ಣಂರಾಜು ಭಾನುವಾರ ನಸುಕಿನ ವೇಳೆ ತಮ್ಮ ನಿವಾಸದಲ್ಲಿ ನಿಧನರಾದರು.
ಕೃಷ್ಣಂರಾಜು ಅವರಿಗೆ 83 ವರ್ಷ ವಯಸ್ಸಾಗಿತ್ತು. ಅವರು ಪತ್ನಿ, ಮೂವರು ಪುತ್ರಿಯರು ಹಾಗೂ ಅಪಾರ ಬಂಧು ಬಳಗ ಸ್ನೇಹಿತರನ್ನು ಅಗಲಿದ್ದಾರೆ.
ನಟ, ಪತ್ರಕರ್ತ, ಛಾಯಾಗ್ರಾಹಕರಾಗಿ ಕೃಷ್ಣಂರಾಜು ಜನಪ್ರಿಯರಾಗಿದ್ದರಲ್ಲದೆ, ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ, ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಅವರು ಬಾಹುಬಲಿ ಖ್ಯಾತಿಯ ಪ್ರಭಾಸ್ ಅವರ ದೊಡ್ಡಪ್ಪ.

1966 ರಲ್ಲಿ ಚಿಲಕ ಗೋರಿಂಕಾ ಎಂಬ ಚಿತ್ರದಲ್ಲಿ ಅವರು ಮೊತ್ತ ಮೊದಲ ಬಾರಿಗೆ ಬಣ್ಣಹಚ್ಚಿದ್ದರು. 1940ರಲ್ಲಿ ಪಶ್ಚಿಮ ಗೋದಾವರಿಯ ಜಿಲ್ಲೆಯ ಮೊಗಲಟೂರು ಗ್ರಾಮದಲ್ಲಿ ಜನಿಸಿದರು.ನಂತರದ ದಿನಗಳಲ್ಲಿ ಅವರು ನಾಯಕನಟರಾಗಿ ಜನಪ್ರಿಯರಾಗಿದ್ದರು.

ಸುಮಾರು 183 ಚಿತ್ರಗಳಲ್ಲಿ ನಟಿಸಿದ್ದ ಅವರು, ರಾಧೇ ಶ್ಯಾಮ್ ಕೊನೆಯ ಚಿತ್ರವಾಗಿತ್ತು. ಗೋಪಿಕೃಷ್ಣ ಮೂವೀಸ್ ಲಾಂಛನದಲ್ಲಿ ಅನೇಕ ಚಿತ್ರಗಳನ್ನು ನಿರ್ಮಿಸಿರುವ ಅವರು ಹಲವು ಬಾರಿ ಫೀಲಂ ಫೇರ್ ಮತ್ತು ನಂದಿ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದರು.
ಗಣ್ಯರ ಸಂತಾಪ
ಕೃಷ್ಣಂರಾಜು ಅವರ ನಿಧನಕ್ಕೆ ಸಿನಿ ನಟರು, ರಾಜಕೀಯ ನಾಯಕರು ಹಾಗೂ ಅಪಾರ ಅಭಿಮಾನಿಗಳು ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದ ಟ್ವೀಟ್ ಮಾಡಿ ಪ್ರಾರ್ಥಿಸಿದ್ದಾರೆ.

https://twitter.com/urstrulyMahesh/status/1568818284920999937?s=20&t=M0LdQzM5aOKPQBCoVh_7YQ
https://twitter.com/Prasad_Darling/status/1568791840169787400?s=20&t=Mo5firmo6ub6ipWIZ0JA-g
#krishnam raju garu #prabhas #bahubali film #no more #jr ntr #mahesh babu #condolence

More News