VIM’S TRAGEDY: ವಿಮ್ಸ್‌ದುರಂತ: ಮೃತರ ಕುಟುಂಬಗಳಿಗೆ 25 ಲಕ್ಷ ಪರಿಹಾರ ಕೊಡಿ ಎಂದ ಸಿದ್ದರಾಮಯ್ಯ: ನಾವು ಕತ್ತೆ ಕಾಯೋಕೆ ಬಂದಿಲ್ಲ: ಮಾಧುಸ್ವಾಮಿ ಗರಂ

ಬೆಂಗಳೂರು: ವಿಮ್ಸ್ ಆಸ್ಪತ್ರೆಯಲ್ಲಿ ಮೂರು ರೋಗಿಗಳು ದಾರುಣವಾಗಿ ಸಾವನ್ನಪ್ಪಿದ್ದು ಇದು ಸರ್ಕಾರದ ಪ್ರಾಯೋಜಿತ ಕೊಲೆ ಎಂದು ಬಿಜೆಪಿ ವಿರುದ್ಧ ಮಾಜಿ ಸಿ.ಎಂ ಸಿದ್ಧರಾಮಯ್ಯ ಸದನದ ಅಧಿವೇಶನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

ವಿಧಾನಸಭೆಯಲ್ಲಿ ಮಾತನಾಡಿದ ಅವರು, ಜನರೇಟರ್ ಕೆಟ್ಟು, ಕರೆಂಟಿಲ್ಲದೇ ಐಸಿಯುನಲ್ಲಿದ್ದ ಮೂವರು ರೋಗಿಗಳು ಸತ್ತಿದ್ದಾರೆ . ಇದಕ್ಕೆ ಯಾರು ಜವಾಬ್ದಾರಿ? ಆ ಆಸ್ಪತ್ರೆಯವರ ಬಳಿ ಹಣ ಇದೆ, ಜನರೇಟರ್ ವ್ಯವಸ್ಥೆ ಮಾಡಬಹುದಿತ್ತು. ಈ ಸಾವಿಗೆ ಸರ್ಕಾರವೇ ಹೊಣೆ ಹೊರಬೇಕು.

ಇದರಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಇದರ ಜವಾಬ್ದಾರಿ ಆರೋಗ್ಯ ಇಲಾಖೆ ಹೊರಬೇಕು. ಮೃತರ ಕುಟುಂಬಗಳಿಗೆ ಕನಿಷ್ಟ 25 ಲಕ್ಷ ಪರಿಹಾರ ಕೊಡಿ ಎಂದು ಆಗ್ರಹಿಸಿದ್ದರು.

ಸಿದ್ದರಾಮಯ್ಯನವರ ಈ ಹೇಳಿಕೆಗೆ ಆಕ್ಷೇಪ ವ್ಯಕ್ತ ಪಡಿಸಿದ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ರಾಮುಲು, ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಮೂವರು ರೋಗಿಗಳ ಸಾವಿನ ಪ್ರಕರಣ ಕುರಿತಂತೆ ಮುಲ್ಲಾ ಹುಸೇನ್ ಅನ್ನೋ ರೋಗಿ 11 ರಂದು ದಾಖಲಾಗಿರುತ್ತಾರೆ.

14 ರಂದು ಅವರು ಸಾವನ್ನಪ್ಪಿದ್ದಾರೆ. ಅವರಿಗೆ ಎರಡೂ ಕಿಡ್ನಿ ವೈಫಲ್ಯ, ಇತರೆ ಕಾಯಿಲೆಗಳು ಬಾಧಿಸುತ್ತಿತ್ತು. ಇದರಿಂದ ಮುಲ್ಲಾ ಹುಸೇನ್ ಸತ್ತಿದ್ದಾರೆ.ಹಾವು ಕಚ್ಚಿ ಮತ್ತೊಂದು ಸಾವಾಗಿದೆ. ವಿಮ್ಸ್ ಡೈರೆಕ್ಟರ್ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ.

ವಿದ್ಯುತ್ ಸಂಪರ್ಕ ಆಗಾಗ ಕೈಕೊಡುತ್ತಿದ್ದು, ಕರೆಂಟ್ ಹೋದಾಗ ಒಂದೂವರೆ ಗಂಟೆ ಜನರೇಟರ್ ಬ್ಯಾಕಪ್ ಇರುತ್ತದೆ. ರೋಗಿಗಳು ಮೃತರಾಗಿದ್ದಕ್ಕೂ, ಕರೆಂಟಿಗೂ ಯಾವುದೇ ಸಂಬಂಧ ಇಲ್ಲ ಆಸ್ಪತ್ರೆಯಲ್ಲಿ ಜನರೇಟರ್ ಯಾವಾಗಲೂ ಬ್ಯಾಕ್ ಅಪ್ ಇರುತ್ತದೆ. ವಿಮ್ಸ್ ರೋಗಿಗಳ ಸಾವಿಗೆ ಆಸ್ಪತ್ರೆ ನಿರ್ಲಕ್ಷ್ಯ ಕಾರಣ ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ನಾವು ಕತ್ತೆ ಕಾಯೋಕೆ ಬಂದಿಲ್ಲ- ಮಾಧುಸ್ವಾಮಿ ಗರಂ
ನಾವು ಕತ್ತೆ ಕಾಯೋಕೆ ಇಲ್ಲಿ ಬಂದಿಲ್ಲ ಎಂದು ಸದನದಲ್ಲಿ ಕಾನೂನು ಸಚಿವ ಮಾಧುಸ್ವಾಮಿ ಗರಂ ಆಗಿದ್ದಾರೆ. ಬಳ್ಳಾರಿ ವಿಮ್ಸ್ ಆಸ್ಪತ್ರೆ ಸಾವಿನ ವಿಚಾರವಾಗಿ ವಿಪಕ್ಷ ನಾಯಕರು ಇದೆಲ್ಲದಕ್ಕೂ ಸರ್ಕಾರವೇ ಹೊಣೆ ಅಂತ ಪತ್ರ ಕೊಟ್ಟಿದ್ದಾರೆ.

ಪತ್ರದಲ್ಲಿ ಮರ್ಡರ್(Murder) ಅಂತ ಬಳಕೆ ಮಾಡಿದ್ದಾರೆ. ವಿಚಾರಣೆ ಯೇ ನಡೆಯದೇ ಪತ್ರ ಕೊಟ್ಟಿದ್ದು ಎಷ್ಟು ಸರಿ? . ಅವರ ಸರ್ಕಾರಾವಧಿಯಲ್ಲೂ ಇಂತಹ ಅವಘಡಗಳು ನಡೆದಿದ್ದು, ನಾವೆಲ್ಲೂ ಸರ್ಕಾರದ ಮರ್ಡರ್ ಅಂತ ಯಾವತ್ತೂ ಹೇಳಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ವಿಮ್ಸ್ ಆಸ್ಪತ್ರೆಯಲ್ಲಿ ಮೂರು ಸಾವು ಪ್ರಕರಣಕ್ಕೆ ಸರ್ಕಾರ ಕಾರಣ ಎಂಬ ಸಿದ್ದರಾಮಯ್ಯ ಅವರ ಈ ಆರೋಪಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮಾಧುಸ್ವಾಮಿ, ಸಿದ್ದರಾಮಯ್ಯ ಅವರಿಂದ ಈ ಭಾಷೆ ನಿರೀಕ್ಷೆ ಮಾಡಿರಲಿಲ್ಲ. ಆಕಸ್ಮಿಕ ದುರಂತವನ್ನು ಸರ್ಕಾರಿ ಪ್ರಾಯೋಜಿತ ಕೊಲೆ ಎನ್ನುವುದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

#MINISTER mADHUSWAMY #SIDDARAMAIAH #OPPOSITION LEADER #FORMER CHIEF MINISTER #VIMS #BELLARY #DEATH

More News