LEADERS ARE NOT RESPONDING: ಪಕ್ಷದಲ್ಲಿ ಕೆಲವರು ಸ್ಪಂದಿಸುತ್ತಿಲ್ಲ ಅನ್ನೋದು ನಿಜ: ಕೆಪಿಸಿಸಿ ಅಧ್ಯಕ್ಷ

ಬೆಂಗಳೂರು : ನನ್ನ ಕೆಲಸ ವೇಗ ಜಾಸ್ತಿ ಇರಬಹುದು ಅಷ್ಟೇ. ಎಲ್ಲ ನಾನೊಬ್ಬನೇ ಮಾಡೋದಕ್ಕೆ ಆಗಲ್ಲ. ಕೆಲವರು ಸ್ಪಂದಿಸುತ್ತಿಲ್ಲ ಅಂತ ಹೇಳಿದ್ದು ನಿಜ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬಹಿರಂಗ ವಾಗಿ ಅಸಮಧಾನ ವ್ಯಕ್ತಪಡಿಸಿದ್ದಾರೆ.

ನಿಮ್ಮ ವೇಗಕ್ಕೆ ಬೇರೆಯವರು ಸ್ಪಂದಿಸುತ್ತಿಲ್ಲ ಎಂದು ಹೇಳಿದ್ದೀರಿ ಎಂಬ ಪ್ರಶ್ನೆಗೆ  ಸದಾಶಿವನಗರದಲ್ಲಿ ಉತ್ತರಿಸಿದ ಡಿಕೆ ಶಿವಕುಮಾರ್, ನಮ್ಮ ನಾಯಕರು ಸ್ಪಂದಿಸುತ್ತಿಲ್ಲ ಎಂದು ಹೇಳಿದವರು ಯಾರು? ಎಲ್ಲರೂ ಸ್ಪಂದಿಸುತ್ತಾ ಕೆಲಸ ಮಾಡುತ್ತಿದ್ದಾರೆ. ನನ್ನ ವೇಗ ಹೆಚ್ಚಾಗಿರಬಹುದು. ಕೆಲವರಿಗೆ ಅವರ ಕ್ಷೇತ್ರದಲ್ಲಿನ ಜವಾಬ್ದಾರಿ ಹೆಚ್ಚಾಗಿದೆ. ಎಲ್ಲವನ್ನೂ ನನ್ನಿಂದಲೇ ಮಾಡಲು ಆಗುವುದಿಲ್ಲ. ನಮ್ಮ ನಾಯಕರು ಅವರವರ ಕೆಲಸ ಮಾಡುತ್ತಿದ್ದಾರೆ. ಉಪಾಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಪ್ರತಿ ಕ್ಷೇತ್ರಕ್ಕೂ ಹೋಗಬೇಕು, ಪ್ರಧಾನ ಕಾರ್ಯದರ್ಶಿಗಳು ಪ್ರತಿ ಪಂಚಾಯ್ತಿಗೆ ಹೋಗುವ ಜವಾಬ್ದಾರಿ ನೀಡಿದ್ದೇವೆ. ಆ ಪ್ರಕಾರ ಅವರು ಸಂಘಟನೆ ಮಾಡಬೇಕು. ಸಂಘಟನೆ ಇಲ್ಲದೇ ಯಶಸ್ಸು ಸಿಗುವುದಿಲ್ಲ ‘ ಎಂದರು.

ನಿನ್ನೆಯ ಸಭೆಯ ನಿಮ್ಮ ಮಾತಿನಲ್ಲಿ, ಬೇರೆಯವರು ಸಹಕಾರ ನೀಡುತ್ತಿಲ್ಲ ಎಂಬ ನೋವಿತ್ತು ಎಂದು ಹೇಳಿದಾಗ, ‘ ನನಗೆ ಅಸಹಕಾರದ ನೋವಿಲ್ಲ. ಸರ್ಕಾರ ಅಧಿವೇಶನ ಕರೆದಾಗ ಕೇವಲ ವಿರೋಧ ಪಕ್ಷದ ನಾಯಕರೇ ಎಲ್ಲವನ್ನೂ ಮಾಡಲು ಆಗುವುದಿಲ್ಲ. ಅವರಿಗೆ ನಾನು ಸೇರಿದಂತೆ 69 ಶಾಸಕರ ಸಹಕಾರ ಇರಬೇಕು. ಇನ್ನು ಸರ್ಕಾರದ ಪರ ನೂರಕ್ಕೂ ಹೆಚ್ಚು ಶಾಸಕರಿದ್ದರೂ ಸಚಿವರುಗಳು ಅಧಿವೇಶನಕ್ಕೆ ಬರುತ್ತಿಲ್ಲ. ಅವರು ಸರ್ಕಾರದ ಸಾಧನೆ ಕಾರ್ಯಕ್ರಮ ಮಾಡಿದಾಗ ಎಷ್ಟು ಜನ ಸಚಿವರು ಹೋಗಿದ್ದರು?ಏನಾಯ್ತು? ಎಷ್ಟು ಜನ ಇದ್ದರು.  ಯಡಿಯೂರಪ್ಪ ಅವರ ಭಾಷಣ ಮುಗಿದ ನಂತರ ಎಲ್ಲರೂ ಖಾಲಿ ಆದರು. ಇದರ ಬಗ್ಗೆ ಯಾಕೆ ಮಾತನಾಡುವುದಿಲ್ಲ? ಅದನ್ನು ಅಸಹಕಾರ ಚಳವಳಿ ಎನ್ನುತ್ತೀರಾ? ನಾನು ನಮ್ಮ ಪದಾಧಿಕಾರಿಗಳಿಗೆ ಅವರ ಜವಾಬ್ದಾರಿ ತಿಳಿಸಿದ್ದೇನೆ ಅಷ್ಟೇ. ನಮ್ಮ. ಶಾಸಕರುಗಳಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲ ಅವರು ಟಾರ್ಗೆಟ್ ನೀಡಿದ್ದಾರೆ. ಶಾಸಕರು ಎಂದರೆ ಕೇವಲ ಮದುವೆ ಸಮಾರಂಭ, ಟೇಪ್ ಕಟ್ ಕಾರ್ಯಕ್ರಮಕ್ಕೆ ಹೋಗುವುದಲ್ಲ. ಮನೆ ಮನೆಗೆ ಹೋಗಿ ಬೂತ್ ಯಾತ್ರಾ ಮಾಡಬೇಕು ಎಂದು ಬಯಸುತ್ತೇನೆ. ಅವರು ಮೊದಲು ತಮ್ಮ ಹೊಲ ಚೆನ್ನಾಗಿ ಬೇಸಾಯ ಮಾಡಬೇಕು. ನಂತರ ಬಿತ್ತನೆ ಮಾಡಬೇಕು ಎಂದು ಹೇಳಿದ್ದೇನೆ ‘ ಎಂದು ತಿಳಿಸಿದರು.

ಮುಂದುವರೆದು ಮಾತನಾಡಿದ ಅವರು, ಪ್ರಚಾರದ ಜವಾಬ್ದಾರಿಯನ್ನು ರಾಮಲಿಂಗಾರೆಡ್ಡಿ ಅವರಿಗೆ, ಬಳ್ಳಾರಿ ಬೃಹತ್ ಸಮಾವೇಶದ ಜವಾಬ್ದಾರಿಯನ್ನು ಪ್ರಚಾರ ಸಮಿತಿ ಅಧ್ಯಕ್ಷರ ನೇತೃತ್ವದ ಸಮಿತಿಗೆ ವಹಿಸಲಾಗಿದೆ. ಸಂಚಾರ ವ್ಯವಸ್ಥೆಯನ್ನು ರೇವಣ್ಣ ಅವರಿಗೆ,  ಪ್ರತಿನಿತ್ಯದ ಸಭೆಗಳ ಜವಾಬ್ದಾರಿಯನ್ನು ಕೃಷ್ಣ ಭೈರೇಗೌಡ ಅವರ ನೇತೃತ್ವದಸಮಿತಿಗೆ, ವಾಸ್ತವ್ಯ ವ್ಯವಸ್ಥೆಗೆ ದಿನೇಶ್ ಗುಂಡೂರಾವ್ ಅವರ ಸಮಿತಿ, ಮೈಸೂರು ಚಾಮರಾಜನಗರ ಭಾಗದ ಉಸ್ತುವಾರಿಯನ್ನು ಧ್ರುವನಾರಾಯಣ ಅವರ ಸಮಿತಿ, ಮೈಸೂರು ನಗರದ ಉಸ್ತುವಾರಿ ಮಹದೇವಪ್ಪ ಹಾಗೂ ಯತೀಂದ್ರ ಅವರಿಗೆ, ಮಂಡ್ಯ ಭಾಗದ ಉಸ್ತುವಾರಿ ಚಲುವರಾಯಸ್ವಾಮಿ, ತುಮಕೂರು ಭಾಗಕ್ಕೆ ಪರಮೇಶ್ವರ್, ಚಳ್ಳಕೆರೆ ಭಾಗದಲ್ಲಿ ಸಲೀಂ ಅಹ್ಮದ್ ಅವರು ಸ್ಥಳೀಯ ಶಾಸಕರ ಜತೆ ಜವಾಬ್ದಾರಿ ನಿಭಾಯಿಸುತ್ತಾರೆ. ರಾಯಚೂರು ಉಸ್ತುವಾರಿಯನ್ನು ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ ಅವರು ನೋಡಿಕೊಳ್ಳುತ್ತಾರೆ ಎಂದರು.

More News