ಬೆಂಗಳೂರು : ಚಾಮರಾಜಪೇಟೆ ಶಾಸಕರು ಹಾಗೂ ಮಾಜಿ ಸಚಿವರಾದ ಜಮೀರ್ ಅಹ್ಮದ್ ಖಾನ್ ಅವರು ಇಂದು ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸಿದರು.
ಚಾಮರಾಜಪೇಟೆಯ ಅಶ್ವತ್ಥ ಕಟ್ಟೆಯಲ್ಲಿ ಡಾ.ವಿಷ್ಣುವರ್ಧನ್ ಪ್ರತಿಮೆಗೆ ಶಾಸಕ ಜಮೀರ್ ಅಹ್ಮದ್ ಖಾನ್ ಅವರು ಮಾಲಾರ್ಪಣೆ ಮಾಡಿ, ಕೇಕ್ ಕತ್ತರಿಸಿ ಸಿಹಿ ಹಂಚಿ ನೂರಾರು ಜನರಿಗೆ ಅನ್ನಸಂತರ್ಪಣೆ ಮಾಡಿದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ನಾನು ಡಾ.ವಿಷ್ಣುವರ್ಧನ್ ಅವರ ಅಪ್ಪಟ ಅಭಿಮಾನಿ. ಇಂದು ಎಲ್ಲೆಡೆ ಅವರ ಜನ್ಮದಿನವನ್ನು ಅತ್ಯಂತ ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತಿದೆ. ಅಂತೆಯೇ ನಾನೂ ಇಂದು ಅವರ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿ, ಸಾಹಸಸಿಂಹ ಅವರ ಸವಿ ನೆನಪುಗಳನ್ನು ಮೆಲುಕು ಹಾಕಿದೆ.

ಸರಳ ಮತ್ತು ಮೃದು ಸ್ವಭಾವದರಾಗಿದ್ದ ಡಾ. ವಿಷ್ಣುವರ್ಧನ್ ಅವರು ಅಭಿನಯಿಸಿರುವ ಸದಭಿರುಚಿಯ ಚಿತ್ರಗಳ ಮೂಲಕ ಅವರು ಸದಾ ನಮ್ಮೆಲ್ಲರ ಮನದಲ್ಲಿ ಅಜರಾಮರರಾಗಿರುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಭಾವೈಕ್ಯತೆಗಾಗಿ 10 ಕಿ.ಮೀ ರ‍್ಯಾಲಿ ನಡೆಸಿ ವಿನಾಯಕನಿಗೆ ಪೂಜೆ
ಗಣೇಶೋತ್ಸವದ ಪ್ರಯುಕ್ತ 10 ಕಿ.ಮೀ ರ‍್ಯಾಲಿ ನಡೆಸಿ, ಪ್ರಥಮ ವಂದಿತನಿಗೆ ವಿಶೇಷ ಪೂಜೆ ಸಲ್ಲಿಸಿ, ಭಾವೈಕ್ಯತೆ ಮೆರೆದಿದ್ದಾರೆ.

ಮೈಸೂರು ಟೋಲ್ ಗೇಟ್ ನಿಂದ ಆರಂಭವಾದ ಗಣೇಶೋತ್ಸವ ರ‍್ಯಾಲಿಯು, ಚಾಮರಾಜಪೇಟೆಯ ಅಶ್ವತ್ಥ ಕಟ್ಟೆಯ ಮೂಲಕ ಹಾದು ವಾಲ್ಮೀಕಿ ನಗರ ದವರೆಗೆ ಸಾಗಿತು. ಬಣ್ಣ ಬಣ್ಣದ ಹೂಗಳು ಹಾಗೂ ಬೃಹತ್ ಮಾಲೆಯಿಂದ ಅಲಂಕೃತಗೊಂಡಿದ್ದ ಗಣೇಶನನ್ನು ಹೊತ್ತು ಸಾಗಿದ ವಾಹನವು ಆಕರ್ಷಣೆಯ ಕೇಂದ್ರಬಿಂದುವಾಗಿತ್ತು.

ತಾವು ಸಾಗುವ ಮಾರ್ಗದಲ್ಲಿ ಪ್ರತಿಷ್ಠಾಪಿಸಲಾಗಿದ್ದ ವಿನಾಯಕ ಮೂರ್ತಿಯ ಬಳಿಗೆ ತೆರಳಿ ಪೂಜೆ ಸಲ್ಲಿಸಿದ ಶಾಸಕ ಜಮೀರ್ ಅಹ್ಮದ್ ಖಾನ್ ಅವರು, ಗಣೇಶನಿಗೆ ಕಾಣಿಕೆ ಅರ್ಪಿಸಿ, ನೆರೆದಿದ್ದ ಭಕ್ತಾದಿಗಳು ಹಾಗೂ ಸ್ಥಳೀಯರಿಗೆ ಸಿಹಿ ಹಂಚಿ ಅನ್ನಸಂತರ್ಪಣೆ ಮಾಡಿದರು.





