ದಾವಣಗೆರೆ : ಮೂರು ಸಾವಿರಕ್ಕೂ ಹೆಚ್ಚು ಸಾಲು ಮರಗಳನ್ನು ಬೆಳೆಸಿ ಹಾಗೂ ಬೇರೆಯವರಿಗೂ ಮರಗಳನ್ನು ಬೆಳೆಸಲು ಪ್ರೋತ್ಸಾಹಿಸುತ್ತಿದ್ದ ಸಾಲುಮರದ ವೀರಾಚಾರಿ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ದಾವಣಗೆರೆಯ ಮಿಟ್ಲಕಟ್ಟೆಯಲ್ಲಿ ಸೋಮವಾರ ರಾತ್ರಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದಾವಣಗೆರೆಯ ಶಾಮನೂರಿನಿಂದ ಮಿಟ್ಲಕಟ್ಟೆಯವರೆಗೂ ಮರಗಳನ್ನು ಬೆಳೆಸಿ ಅವುಗಳನ್ನು ಕಾದು ಸಂರಕ್ಷಿಸುತ್ತಿದ್ದ ವೀರಾಚಾರಿ ಅವರು, ಚಿಕ್ಕಂದಿನಿಂದಲೇ ಪರಿಸರದ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದರು.
ಕೇವಲ ತಾವು ಮರಗಳನ್ನು ಬೆಳೆಸುವುದಲ್ಲದೆ, ಇತ್ತರಿಗೂ ಮಾದರಿಯಾಗಿದ್ದರು. ಸಭೆ, ಸಮಾರಂಭಗಳಲ್ಲಿ ಗಿಡಗಳನ್ನು ಕೊಡುಗೆಯಾಗಿ ನೀಡುತ್ತಿದ್ದರು. ಸ್ವಂತ ಅಟೋದಲ್ಲಿ ತಿರುಗಾಡಿ ಪರಿಸರ ಕಾಳಜಿಯನ್ನು ಮೂಡಿಸುತ್ತಿದ್ದ ಇವರಿಗೆ ರಾಜ್ಯ ಸರ್ಕಾರ 1999-2000ರಲ್ಲಿ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.

ಗ್ರಾಮದಲ್ಲಿನ ನ್ಯಾಯಬೆಲೆ ಅಂಗಡಿಯೊಂದರ ಅವ್ಯವಹಾರವನ್ನು ಪ್ರಶ್ನಿಸಿ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು, ಅಲ್ಲಿ ನ್ಯಾಯ ಸಿಗದೇ ಮನನೊಂದು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಕುಟುಂಬದವರು ತಿಳಿಸಿದ್ದಾರೆ.
ಸ್ಥಳೀಯರ ಪ್ರತಿಭಟನೆ
ನ್ಯಾಯಬೆಲೆ ಅಂಗಡಿ ಮಾಲೀಕರ ಲೈಸನ್ಸ್ ರದ್ದುಪಡಿಸಬೇಕು ಹಾಗೂ ಅವರನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿ ಸ್ಥಳೀಯರು ಶವವಿಟ್ಟು ಪ್ರತಿಭಟನೆ ನಡೆಸಿದರು. ವೀರಾಚಾರಿ ಕುಟುಂಬಕ್ಕೆ ಪರಿಹಾರ ನೀಡಬೇಕು ಹಾಗೂ ಅಧಿಕಾರಿಗಳನ್ನುಕೂಡಲೇ ಅಮಾನತ್ತು ಮಾಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ನಂತರ ಸ್ಥಳಕ್ಕೆ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಅಧಿಕಾರಿಗಳ ಪ್ರತಿಭಟನಾಕಾರರ ಮನವೊಲಿಸಿ ಸೂಕ್ತ ರೀತಿಯ ನ್ಯಾಯ ಒದಗಿಸುವ ಭರವಸೆ ನೀಡದ ನಂತರ ಪ್ರತಿಭಟನೆ ಹಿಂದಕ್ಕೆ ಪಡೆದರು.
#saalumarada veerachari #environmentalist #committes suicide #davanagere




