ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ನೀರಸ ಪ್ರದರ್ಶನ ನೀಡುವ ಮೂಲಕ ಸೋಲಿನ ಆಘಾತ ಅನುಭವಿಸಿದ್ದ ಟೀಂ ಇಂಡಿಯಾ ಸ್ಟ್ರಾಂಗ್ ಕಮ್ ಬ್ಯಾಕ್ ಮಾಡುವ ಲೆಕ್ಕಾಚಾರದಲ್ಲಿದೆ. ನಾಗ್ಪುರದಲ್ಲಿ ನಡೆಯುವ ಎರಡನೇ ಪಂದ್ಯಕ್ಕಾಗಿ ರೋಹಿತ್ ಶರ್ಮ ಪಡೆ ಮಹತ್ವದ ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆ ಇದೆ.
ಮೊದಲ ಪಂದ್ಯದಲ್ಲಿ ಬ್ಯಾಟ್ಸ್‌ಮನ್‌ಗಳು ಭರ್ಜರಿ ಪ್ರದರ್ಶನ ನೀಡಿದ್ದರು. ಆದರೆ ಬೌಲಿಂಗ್, ಫೀಲ್ಡಿಂಗ್‌ನಲ್ಲಿ ಮಾಡಿಕೊಂಡ ತಪ್ಪುಗಳು ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು. ಬ್ಯಾಟ್ಸ್‌ಮನ್‌ಗಳ ಅದ್ಭುತ ಪ್ರದರ್ಶನದಿಂದ ಭಾರತ 20 ಓವರ್‌ಗಳಲ್ಲಿ 208 ರನ್‌ಗಳ ಬೃಹತ್ ಮೊತ್ತವನ್ನೇ ಕಲೆಹಾಕಿತ್ತು.
ಆದರೆ ಆಸ್ಟ್ರೇಲಿಯಾ ಬ್ಯಾಟ್ಸಮನ್‌ಗಳ ಅಬ್ಬರಕ್ಕೆ ಶರಣಾದ ಟೀಂ ಇಂಡಿಯಾ ಬೌಲರ್‌ಗಳು ದುಬಾರಿ ರನ್ ಬಿಟ್ಟುಕೊಟ್ಟಿದ್ದರಿಂದ ತಂಡ ಸೋಲನುಭವಿಸಿತು. ಇದರ ಪರಿಣಾಮ ಮೂರು ಪಂದ್ಯಗಳ ಸರಣಿಯಲ್ಲಿ ಆಸೀಸ್ 1-0 ಮುನ್ನಡೆ ಪಡೆದಿದ್ದು, ಸರಣಿ ಜೀವಂತ ಇರಬೇಕಾದರೆ ನಾಗ್ಪುರ್‌ನ ವಿದರ್ಭ ಕ್ರಿಕೆಟ್ ಅಸೋಸಿಯೇಷನ್‌ನಲ್ಲಿ ನಡೆಯುವ ಪಂದ್ಯದಲ್ಲಿ ಭಾರತ ಗೆಲ್ಲಲೇಬೇಕಿದೆ.
ಉಮೇಶ್ ಬದಲು ಬುಮ್ರಾ
ಹೀಗಾಗಿ ʼಡು ಆರ್ ಡೈʼ ಪಂದ್ಯದಲ್ಲಿ ಬಲಿಷ್ಠವಾಗಿ ಕಮ್ ಬ್ಯಾಕ್ ಮಾಡುವ ನಿರೀಕ್ಷೆಯಲ್ಲಿರುವ ಭಾರತ, ಎರಡನೇ ಟಿ20 ಪಂದ್ಯಕ್ಕಾಗಿ ಬೌಲಿಂಗ್ ವಿಭಾಗದಲ್ಲಿ ಪ್ರಮುಖ ಬದಲಾವಣೆ ಮಾಡಿಕೊಳ್ಳಬೇಕಿದೆ. ಮುಖ್ಯವಾಗಿ ಮೊಹಮ್ಮದ್ ಶಮಿ ಬದಲಾಗಿ ತಂಡದಲ್ಲಿ ಸ್ಥಾನ ಪಡೆದಿರುವ ಉಮೇಶ್ ಯಾದವ್ ಅವರನ್ನ ಕೈಬಿಟ್ಟು ತಂಡದ ಬೌಲಿಂಗ್ ಅಸ್ತ್ರವಾಗಿರುವ ಜಸ್ಪ್ರೀತ್ ಬುಮ್ರಾ ಅವರನ್ನ ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕಿದೆ.
ಗಾಯದ ಸಮಸ್ಯೆಯ ಕಾರಣದಿಂದ ಮೊದಲ ಪಂದ್ಯದಲ್ಲಿ ಬುಮ್ರಾ ಅವರಿಗೆ ವಿಶ್ರಾಂತಿ ನೀಡಲಾಗಿತ್ತು. ಆದರೆ ವಿಶ್ವದ ನಂ.1 ಬೌಲರ್ ಬುಮ್ರಾ ಅವರನ್ನ ತಂಡದಿಂದ ಕೈಬಿಟ್ಟಿದ್ದು ಭಾರತದ ಸೋಲಿಗೆ ಪ್ರಮುಖವಾದ ಕಾರಣವಾಯಿತು.
ಭುವಿ ಬದಲು ಚಹರ್
ಟೀಂ ಇಂಡಿಯಾದ ಸ್ವಿಂಗ್ ಸ್ಪೆಷಲಿಸ್ಟ್ ಎಂದೇ ಖ್ಯಾತಿಯಾಗಿರುವ ಭುವನೇಶ್ವರ್ ಕುಮಾರ್ ಸಹ ಮೊದಲ ಪಂದ್ಯದಲ್ಲಿ ನೀರಸ ಪ್ರದರ್ಶನ ನೀಡಿದರು. ಅನುಭವಿ ಬೌಲರ್ ಆಗಿ ತಂಡದ ಬೌಲಿಂಗ್ ವಿಭಾಗದ ಜವಾಬ್ದಾರಿ ಹೊತ್ತಿದ್ದ ಭುವನೇಶ್ವರ್, ದುಬಾರಿ ರನ್ ನೀಡಿದ್ದು ತಂಡಕ್ಕೆ ಸೋಲಿನ ಆಘಾತವನ್ನುಂಟು ಮಾಡಿತು.
ಹೀಗಾಗಿ ಎರಡನೇ ಪಂದ್ಯಕ್ಕೆ ಭುವನೇಶ್ವರ್ ಕುಮಾರ್ ಅವರನ್ನ ಕೈಬಿಟ್ಟು ದೀಪಕ್ ಚಹರ್ ಅವರನ್ನ ಕಣಕ್ಕಿಳಿಸುವ ಅನಿವಾರ್ಯತೆ ಎದುರಾಗಿದೆ. ಏಷ್ಯಾಕಪ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧದ ಐದು ವಿಕೆಟ್ ಪಡೆದಿದ್ದನ್ನು ಹೊರತಪಡಿಸಿ, ಭುವನೇಶ್ವರ್ ಟೀಮ್ ಇಂಡಿಯಾದ ಇತ್ತೀಚಿನ T20I ಪಂದ್ಯಗಳಲ್ಲಿ ಪರಿಣಾಮಕಾರಿ ಪ್ರದರ್ಶನ ನೀಡಿಲ್ಲ.
ಹೀಗಾಗಿ ಆಸೀಸ್ ವಿರುದ್ಧದ ಉಳಿದ ಎರಡು ಟಿ20 ಪಂದ್ಯಗಳಲ್ಲಿ ದೀಪಕ್ ಚಹರ್‌ಗೆ ಅವಕಾಶ ನೀಡುವತ್ತ ಗಮನಹರಿಸಬಹುದು. ಚಹರ್ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿರುವುದರಿಂದ ಆಸ್ಟ್ರೇಲಿಯಾ ವಿರುದ್ದದ ಸರಣಿಯಲ್ಲಿ ತಂಡಕ್ಕೆ ಅನುಕೂಲವಾಗಲಿದೆ.
ಚಹಾಲ್ ಬದಲು ಅಶ್ವಿನ್
ಭುವನೇಶ್ವರ್ ಅವರಂತೆ, ಲೆಗ್-ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಕೂಡ ಕೆಲವು ವಾರಗಳ ಹಿಂದಿನವರೆಗೂ T20I ಗಳಲ್ಲಿ ಟೀಮ್ ಇಂಡಿಯಾದ ಪ್ರಮುಖ ಬೌಲರ್‌ಗಳಲ್ಲಿ ಪರಿಗಣಿಸಲ್ಪಟ್ಟಿದ್ದರು. ಆದರೆ ಅವರ ಪ್ರದರ್ಶನವೂ ತೀವ್ರವಾಗಿ ಕುಸಿದಿದೆ, ಇದು ಟಿ 20 ವಿಶ್ವಕಪ್‌ಗೆ ಒಂದು ತಿಂಗಳಿಗಿಂತ ಕಡಿಮೆ ಇರುವ ಭಾರತಕ್ಕೆ ಒಳ್ಳೆಯ ಸುದ್ದಿಯಲ್ಲ.
ಭುವಿ ಅವರಂತೆ ಯುಜ್ವೇಂದ್ರ ಚಹಲ್, ಏಷ್ಯಾಕಪ್‌ನಲ್ಲಿ ಶ್ರೀಲಂಕಾ ವಿರುದ್ಧದ ಸೂಪರ್-4 ಪಂದ್ಯ ಹೊರತುಪಡಿಸಿ, ಟಿ20 ಪಂದ್ಯಗಳಲ್ಲಿ ಪರಿಣಾಮಕಾರಿ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಏಷ್ಯಾ ಕಪ್‌ನ ಮೊದಲ ಮೂರು ಪಂದ್ಯಗಳಲ್ಲಿ ಕೇವಲ ಒಂದು ವಿಕೆಟ್ ಪಡೆದಿದ್ದ ಚಹಲ್, ತಂಡಕ್ಕೆ ವಿಕೆಟ್ ತಂದುಕೊಡುವಲ್ಲಿ ವಿಫಲವಾಗುತ್ತಿದ್ದಾರೆ.
ಆಸ್ಟ್ರೇಲಿಯ ವಿರುದ್ಧದ ಆರಂಭಿಕ T20 ಪಂದ್ಯದಲ್ಲಿ 3.2 ಓವರ್‌ಗಳಲ್ಲಿ 42 ರನ್ ನೀಡಿ ಕೇವಲ 1 ವಿಕೆಟ್ ಮಾತ್ರ ಪಡೆದಿದ್ದರು. ಹೀಗಾಗಿ ಚಹಲ್ ಅವರ ಬದಲಿಗೆ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರಿಗೆ ತಂಡದಲ್ಲಿ ಸ್ಥಾನ ನೀಡಿದರೆ ಬೌಲಿಂಗ್ ವಿಭಾಗ ಬಲಿಷ್ಠವಾಗುವ ಸಾಧ್ಯತೆ ಹೆಚ್ಚಿದೆ.
#t-20 cricket #australia #india #match #bowling squad change




