INDIA WINS AGAINST AUSTRALIA: ಹಿಟ್‌ ಮ್ಯಾನ್‌ ಆರ್ಭಟಕ್ಕೆ ಆಸೀಸ್‌ ಉಡೀಸ್‌: ಮಹತ್ವದ ಪಂದ್ಯದಲ್ಲಿ ಟೀಂ ಇಂಡಿಯಾಗೆ ಜಯ

ಮೊದಲ ಟಿ-20 ಪಂದ್ಯದಲ್ಲಿ ಅನುಭವಿಸಿದ ಹೀನಾಯ ಸೋಲಿನ ಬಳಿಕ ಭರ್ಜರಿ ಕಮ್‌ ಬ್ಯಾಕ್‌ ಮಾಡಿದ ಟೀಂ ಇಂಡಿಯಾ, ಮಹತ್ವದ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಎರಡನೇ ಟಿ-20 ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಆರು ವಿಕೆಟ್‌ಗಳ ಅಮೋಘ ಗೆಲುವು ಸಾಧಿಸಿದೆ.
ನಾಗ್ಪುರದಲ್ಲಿ ನಡೆದ ಪಂದ್ಯಕ್ಕೆ ಆರಂಭದಲ್ಲೇ ಮಳೆ ಅಡ್ಡಿಪಡಿಸಿತು. ಹೀಗಾಗಿ ಮಳೆ ಬಾಧಿತ ಪಂದ್ಯ ಎಂಟು ಓವರ್‌ಗಳಿಗೆ ಇಳಿಸಲಾಯಿತು. ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಅವಕಾಶ ಪಡೆದ ಆಸ್ಟ್ರೇಲಿಯಾ 8 ಓವರ್‌ಗಳಲ್ಲಿ 5 ವಿಕೆಟ್‌ಗೆ 90 ರನ್‌ಗಳ ಉತ್ತಮ ಮೊತ್ತ ಕಲೆಹಾಕಿತು. ಈ ಟಾರ್ಗೆಟ್‌ ಬೆನ್ನತ್ತಿದ ಟೀಂ ಇಂಡಿಯಾ 7.2 ಓವರ್ ಗಳಲ್ಲಿ 4 ವಿಕೆಟ್‌ಗೆ 92 ರನ್‌ಗಳಿಸಿ ಜಯ ಸಾಧಿಸಿತು. ಆ ಮೂಲಕ ಮೂರು ಪಂದ್ಯಗಳ ಸರಣಿ 1-1 ರಿಂದ ಸಮಗೊಂಡಿದ್ದು, ಸೆ.25ರಂದು ಸರಣಿಯ ಅಂತಿಮ ಪಂದ್ಯ ನಡೆಯಲಿದೆ.
ಮೊದಲು ಬ್ಯಾಟ್‌ ಮಾಡಿದ ಆಸ್ಟ್ರೇಲಿಯಾ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಮೊದಲ ಪಂದ್ಯದಲ್ಲಿ ಮಿಂಚಿದ್ದ ಕೆಮರೂನ್‌ ಗ್ರೀನ್‌(5) ರನ್‌ಗಳಿಸಿ ವಿಕೆಟ್‌ ಒಪ್ಪಿಸಿದರೆ. ಆಲ್ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌(0) ಎರಡನೇ ಪಂದ್ಯದಲ್ಲೂ ನಿರಾಸೆ ಮೂಡಿಸಿದರು. ಟೀಮ್ ಡೆವಿಡ್(2) ಸಹ ತಂಡಕ್ಕೆ ಆಸರೆಯಾಗುವಲ್ಲಿ ವಿಫಲರಾದರು. ಆದರೆ ನಾಯಕನಾಗಿ ಜವಾಬ್ದಾರಿಯುತ ಆಟವಾಡಿದ ಆರಾನ್ ಫಿಂಚ್ 15 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ನೆರವಿನಿಂದ 31 ರನ್ ಸಿಡಿಸಿದರು.
ಮಧ್ಯಮ ಕ್ರಮಾಂಕದಲ್ಲಿ ಮತ್ತೊಮ್ಮೆ ಅಬ್ಬರಿಸಿದ ಮ್ಯಾಥ್ಯೂ ವೇಡ್‌, ಟೀಂ ಇಂಡಿಯಾ ಬೌಲರ್‌ಗಳನ್ನು ಧೂಳಿಪಟ ಮಾಡಿದರು. ಕೇವಲ 20 ಬಾಲ್‌ಗಳಲ್ಲಿ 4 ಬೌಂಡರಿ, 3 ಸಿಕ್ಸರ್ ಸಹಾಯದಿಂದ 43* ರನ್‌ಗಳಿಸಿ ಅಬ್ಬರಿಸಿದರು. ಆ ಮೂಲಕ ತಂಡದ ಮೊತ್ತವನ್ನು 90 ರನ್‌ಗಳಿಗೆ ಏರಿಸಿದರು. ಭಾರತದ ಪರ ಸ್ಪಿನ್ನರ್‌ ಅಕ್ಸರ್‌ ಪಟೇಲ್ 2, ಜಸ್ಪ್ರಿತ್ ಬುಮ್ರಾ 1 ವಿಕೆಟ್ ಕಬಳಿಸಿದರು.
ಆಸ್ಟ್ರೇಲಿಯಾ ನೀಡಿದ 91 ರನ್‌ಗಳ ಟಾರ್ಗೆಟ್‌ ಚೇಸ್‌ ಮಾಡಿದ ಟೀಂ ಇಂಡಿಯಾಕ್ಕೆ ಆರಂಭಿಕರಾದ ಕೆ.ಎಲ್‌. ರಾಹುಲ್‌(10) ಹಾಗೂ ನಾಯಕ ರೋಹಿತ್‌ ಶರ್ಮ(46*) ಮೊದಲ ವಿಕೆಟ್‌ಗೆ 39 ರನ್‌ಗಳಿಸುವ ಮೂಲಕ ಸಾಧಾರಣ ಆರಂಭ ನೀಡಿದರು. ಕೆ.ಎಲ್‌. ರಾಹುಲ್‌ 10 ರನ್‌ಗಳಿಸಿ ವಿಕೆಟ್‌ ಒಪ್ಪಿಸಿದರೆ, ನಂತರ ಬಂದ ವಿರಾಟ್‌ ಕೊಹ್ಲಿ(11) ಉತ್ತಮವಾಗಿ ಆಡುವ ನಿರೀಕ್ಷೆ ಮೂಡಿಸಿ ಆಡಂ ಜ್ಹಾಂಪ ಬೌಲಿಂಗ್‌ನಲ್ಲಿ ವಿಕೆಟ್‌ ಒಪ್ಪಿಸಿದರು. ಇವರ ಬೆನ್ನಲ್ಲೇ ಸೂರ್ಯಕುಮಾರ್‌ ಯಾದವ್‌(0) ಮೊದಲ ಬಾಲ್‌ನಲ್ಲೇ ಔಟಾಗಿದ್ದ ತಂಡಕ್ಕೆ ಆಘಾತ ನೀಡಿತು. ಹಾರ್ದಿಕ್‌ ಪಾಂಡ್ಯ(9) ಸಹ ರನ್‌ಗಳಿಸುವ ಆತುರದಲ್ಲಿ ವಿಕೆಟ್‌ ಒಪ್ಪಿಸಿದರು.
ಆದರೆ ಒಂದೆಡೆ ವಿಕೆಟ್‌ ಬೀಳುತ್ತಿದ್ದರು ಜವಾಬ್ದಾರಿಯ ಆಟವಾಡಿದ ನಾಯಕ ರೋಹಿತ್‌ ಶರ್ಮಾ 20 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್ ಸಹಾಯದಿಂದ ಅಜೇಯ 46 ರನ್‌ಗಳಿಸಿ ಟೀಂ ಇಂಡಿಯಾದ ಗೆಲುವಿನ ಹೀರೋ ಆಗಿ ಮಿಂಚಿದರು. ಮಧ್ಯಮ ಕ್ರಮಾಂಕದಲ್ಲಿ ಫಿನಿಷರ್ ರೂಪದಲ್ಲಿ ಕಾಣಿಸಿಕೊಂಡ ದಿನೇಶ್ ಕಾರ್ತಿಕ್ ಕೇವಲ 2 ಎಸೆತಗಳಲ್ಲಿ 10 ರನ್‌ಗಳಿಸಿ ತಂಡವನ್ನ ಗೆಲುವಿನ ದಡಸೇರಿಸಿದರು. ಆಸ್ಟ್ರೇಲಿಯಾ ಪರ ಆಡಂ ಜ್ಹಾಂಪ 3 ವಿಕೆಟ್‌ ಪಡೆದು ಮಿಂಚಿದರು. ಟೀಂ ಇಂಡಿಯಾದ ಗೆಲುವಿಗೆ ಕಾರಣವಾದ ರೋಹಿತ್‌ ಶರ್ಮಾ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

#team india #australia #t-20 cricket #rohith sharma #mathew wade

More News