ಮೈಸೂರು : ಭಕ್ತಿ, ಸಮಾನತೆ, ಆದರ್ಶಕ್ಕೆ ಕರ್ನಾಟಕ ರಾಜ್ಯ ಸಾಕ್ಷಿಯಾಗಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮ ಅಭಿಪ್ರಾಯಪಟ್ಟರು.
ದೇಶದ ಹೆಮ್ಮೆಯ ಸಂಕೇತವಾದ ನಾಡಹಬ್ಬ ಮೈಸೂರು ದಸರಾಕ್ಕೆ ಬೆಳ್ಳಿ ಪಲ್ಲಕ್ಕಿಯಲ್ಲಿ ಕೂಡಿಸಿರುವ ನಾಡದೇವಿ ತಾಯಿ ಶ್ರೀ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಆರತಿ ಬೆಳಗಿ, ಪುಷ್ಪಾರ್ಚನೆಗೈದು ನಮಿಸಿ, ದೀಪ ಬೆಳಗುವ ಮೂಲಕ ವಿದ್ಯುಕ್ತ ಚಾಲನೆ ನೀಡಿದ ನಂತರ ಮಾತನಾಡಿದ ಅವರು, ಮಹಿಷಾಸುರನ್ನು ಸಂಹರಿಸಿದ ಪುಣ್ಯ ಕ್ಷೇತ್ರದಲ್ಲಿ ನಿಮ್ಮೊಂದಿಗೆ ನಿಂತು ಮಾತನಾಡಲು ಹೆಮ್ಮೆ ಎನಿಸುತ್ತದೆ. ಕರ್ನಾಟಕವು ಇಡೀ ದೇಶಕ್ಕೆ ಒಂದು ಮಾದರಿಯಾಗಿ ಈ ಹಬ್ಬವನ್ನು ನೀಡಿದೆ. ಹಲವಾರು ವರ್ಷಗಳಿಂದ ಇದನ್ನು ನಡೆಸಿಕೊಂಡು ಬಂದಿರುವುದು ಅತ್ಯಂತ ಹೆಮ್ಮೆಯ ಸಂಗತಿ ಎಂದು ಶ್ಲಾಘಿಸಿದರು.
ಧಾರ್ಮಿಕತೆಯ ಆಚರಣೆಯಲ್ಲಿ ಕರ್ನಾಟಕವು ಬಹಳಷ್ಟು ಮುಂದುವರಿದಿದೆ. ಇಲ್ಲಿ ಬಹಳಷ್ಟು ಆದರ್ಶ ವೀರರು ಇರುವುದನ್ನು ಕಾಣಬಹುದು. ಬಸವಣ್ಣ, ಅಕ್ಕಮಹಾದೇವಿ ಹೀಗೇ ಅನೇಕರಿದ್ದಾರೆ ಎಂದರು.
ಧಾರ್ಮಿಕತೆಯ ಆಚರಣೆ ಕರ್ನಾಟಕದಲ್ಲಿ ಸಾಕಷ್ಟು ನಡೆದುಕೊಂಡು ಬಂದಿದೆ. ಬಸವಣ್ಣ ಅವರು ಅನುಭವ ಮಂಟಪ ಸ್ಥಾಪಿಸಿ ಎಲ್ಲರನ್ನ ಒಗ್ಗೂಡಿಸುವ ಕೆಲಸ ಮಾಡಿದರು. ಸಾಮಾಜಿಕ ಹಾಗೂ ಆದ್ಯಾತ್ಮಿಕತೆಗೆ ಹೆಚ್ಚಿನ ಆದ್ಯತೆ ನೀಡಿದರು.ಕರ್ನಾಟಕ ಭಕ್ತಿ, ಸಮಾನತೆ, ಆದರ್ಶಕ್ಕೆ ಸಾಕ್ಷಿಯಾಗಿದೆ. ರಾಣಿ ಚೆನ್ನಮ್ಮ, ಅಬ್ಬಕ್ಕರಂತಹ ವೀರ ವನಿತೆಯರಿದ್ದಾರೆ. ಇಂತಹ ಐತಿಹಾಸಿಕ ಕಾರ್ಯಕ್ರಮಕ್ಕೆ ನನಗೆ ಆಮಂತ್ರಣ ನೀಡಿದ ಸಿಎಂ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದರು.
“ನಾನೇ ಭಾಗ್ಯಶಾಲಿ”
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ನಾನು ಕೇವಲ ಟಿವಿಯಲ್ಲಿ ನೋಡುತ್ತಿದ್ದ ದಸರಾ ಸಂಭ್ರಮವನ್ನು ಇಂದು ನೇರವಾಗಿ ನೋಡುತ್ತಿರುವುದು ಸಂತಸ ಸಂಗತಿಯಾಗಿದೆ. ನಾನು ಭಾಗ್ಯಶಾಲಿ ಇದ್ದೇನೆ. ಇಂದು ರಾಷ್ಟ್ರಪತಿಗಳ ಜೊತೆ ದೇವಿಯ ದರ್ಶನ ಪಡೆದಿದ್ದು, ಸಂಪನ್ನನಾಗಿದ್ದೇನೆ.
ಈ ಸಂಪ್ರದಾಯ ಹೀಗೆ ಮುಂದುವರೆಯಲಿ ಎನ್ನುವುದು ನನ್ನ ಆಶಯ.ಎಲ್ಲರಿಗು ಒಳಿತಾಗಲಿ, ದೇಶದಲ್ಲಿ ನಾಡಲ್ಲಿ ಶಾಂತಿ ನೆಲಸಲಿ ದೇವಿ ಕಾಪಾಡಲಿ.ಮೈಸೂರಿನ ದಸರಾ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಹೀಗೆ ಮುಂದುವರಿಯಲಿ ಎಂದು ಶುಭಹಾರೈಸಿದರು.

ಮೈಸೂರು ದಸರಾಗೆ ರಾಷ್ಟ್ರಪತಿ ಮುರ್ಮು ಚಾಲನೆ
ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣದಿಂದಾಗಿ ಸರಳವಾಗಿ ನಡೆಯುತ್ತಿದ್ದ ವಿಶ್ವವಿಖ್ಯಾತ ಮೈಸೂರು ದಸರಾ ಈ ಬಾರಿ ಅದ್ದೂರಿಯಾಗಿ ನಡೆಯುತ್ತಿದ್ದು, ದೇಶದ ಪ್ರಥಮ ಪ್ರಜೆಯಾದ ರಾಷ್ಟ್ರಪತಿ ದ್ರೌಪದಿ ಮುರ್ಮ ಅವರು ಬೆಳ್ಳಿ ಪಲ್ಲಕ್ಕಿಯಲ್ಲಿ ಪವಡಿಸಿರುವ ನಾಡದೇವಿ ತಾಯಿ ಶ್ರೀ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಆರತಿ ಬೆಳಗಿ, ಪುಷ್ಪಾರ್ಚನೆಗೈದು ನಮಿಸಿ, ದೀಪ ಬೆಳಗುವ ಮೂಲಕ ವಿದ್ಯುಕ್ತ ಚಾಲನೆ ನೀಡಿದರು.
ಚಾಮುಂಡಿ ಬೆಟ್ಟದ ವೇದಿಕೆಯಲ್ಲಿ ನಾಡಹಬ್ಬ ದಸರಾಗೆ 9:45 ರಿಂದ 10.05 ನಿಮಿಷದ ವರೆಗಿನ ಶುಭ ವೃಶ್ಚಿಕ ಲಗ್ನದಲ್ಲಿ ಬೆಳ್ಳಿ ರಥದಲ್ಲಿ ಆಸೀನರಾಗಿರುವ ನಾಡದೇವತೆ ಚಾಮುಂಡಿ ತಾಯಿಯ ಉತ್ಸವ ಮೂರ್ತಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಪುಷ್ಪಾರ್ಚನೆ ಮಾಡಿ ಚಾಲನೆ ನೀಡಿದರು.

ದಸರಾ ಉದ್ಘಾಟನೆಗಾಗಿ ಚಾಮುಂಡಿ ಬೆಟ್ಟಕ್ಕೆ ಬಂದ ಕೂಡಲೇ ಚಾಮುಂಡೇಶ್ವರಿ ದರ್ಶನ ಪಡೆದರು ಬಳಿಕ ದೇವಾಲಯವನ್ನು ವೀಕ್ಷಿಸಿದ ಅವರು, ವೇದಿಕೆಗೆ ನೇರವಾಗಿ ಆಗಮಿಸಿದರು. ಕೂಡಲೇ ಪೊಲೀಸ್ ಬ್ಯಾಂಡ್ ಸೆಟ್ ತಂಡದಿಂದ ರಾಷ್ಟ್ರಗೀತೆಯನ್ನು ಮೊಳಗಿಸಲಾಯಿತು.
ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಹಸಿರು ಜರತಾರಿ ಸೀರೆ ತೊಡಿಸಿ ಸಿಂಗರಿಸಲಾಗಿತ್ತು. ಬಂಗಾರದ ಒಡವೆಗಳು, ತಾಳಿ, ವಿವಿಧ ಬಗೆಯ ಹೂವುಗಳಿಂದ ತಾಯಿ ಚಾಮುಂಡಿಯ ಉತ್ಸವ ಮೂರ್ತಿಯನ್ನು ಅಲಂಕಾರಿಸಲಾಗಿತ್ತು. ಬೆಳ್ಳಿ ಪಲ್ಲಕ್ಕಿಯಲ್ಲಿ ಮಹಿಷ ಮರ್ದಿನಿ ಅವತಾರದ ದೇವಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ದಸರಾಗೆ ವಿದ್ಯುಕ್ತ ಚಾಲನೆ ದೊರೆಯಿತು.

ಪೊಲೀಸ್ ಬಿಗಿ ಬಂದೋಬಸ್ತ್ : ರಾಷ್ಟ್ರಪತಿ ಮುರ್ಮು ದಸರಾ ಉದ್ಘಾಟಿಸಿದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯು ಸೂಕ್ತ ಬಂದೋಬಸ್ತ್ ಕಲ್ಪಿಸಿತ್ತು. ಚಾಮುಂಡಿ ಬೆಟ್ಟಕ್ಕೆ ಸರ್ಪಗಾವಲು ಕಾದಿದ್ದು, ಯಾರೂ ಒಳಗೆ ಪ್ರವೇಶಿಸದಂತೆ ನಿರ್ಬಂಧಿಸಲಾಗಿತ್ತು.
#NADAHABBA #MYSORE DASARA #PRESIDENT DROUPADI MURMU #GOVERNOR THAWARCHAND GEHLOT #CM BASAVARAJ BOMMAI #UNION MINISTER PRAHALLAD JOSHI #CHAMUNDI DEVI DHARSHAN #MYSORE DASARA STARTED




