VETERINARY DOCTOR BECOME ACTOR: ನಟನಾಗಿ ಬಣ್ಣ ಹಚ್ಚಿದ ಪಶು ವೈದ್ಯ ಮಧುನಂದನ್: ನಟನಾಗೋ ಕನಸು ಕೊನೆಗೂ ನನಸು

ಕಲೆ ಕೈ ಬೀಸಿ ಕರೆದ ಮೇಲೆ, ಅದರೆಡೆ ಒಂದು ಸಣ್ಣ ಸೆಳೆತ ಬಂದ ಮೇಲೆ ನಾವೇನೇ ಮಾಡುತ್ತಿದ್ರು ಅದು ನಮ್ಮನ್ನು ಬಿಡುವುದಿಲ್ಲ. ಒಮ್ಮೆಯಾದ್ರು ಬಣ್ಣದ ಲೋಕದಲ್ಲಿ ಒಂದು ಸಣ್ಣ ಪ್ರಯತ್ನ ಮಾಡಿಬಿಡಬೇಕು ಎಂಬ ಹಂಬಲ ಮನದಾಳದಲ್ಲಿ ಇದ್ದೇ ಇರುತ್ತೆ.
ಆದ್ರೆ ಪರಿಸ್ಥಿತಿ ಕೆಲವೊಮ್ಮೆ ಕಟ್ಟಿ ಹಾಕಿಬಿಡುತ್ತೆ. ಹೀಗೆ ಕಲಾವಿದನಾಗೋ ಕನಸು ಕಂಡು ಪಶುವೈದ್ಯನಾಗಿ ಕೆಲಸ ನಿರ್ವಹಿಸುತ್ತಿದ್ದವರು ಕೊನೆಗೂ ತಮ್ಮ ಕನಸಿನ ಬೆನ್ನಟ್ಟಿ ನನಸಾಗಿಸಿಕೊಂಡಿದ್ದಾರೆ. ಆತ ಬೇರಾರು ಅಲ್ಲ ಸ್ಯಾಂಡಲ್ ವುಡ್ ಅಂಗಳದಲ್ಲಿ ಬಿಡುಗಡೆಗೆ ಸಜ್ಜಾಗಿರುವ ಸಿನಿಮಾ ‘ಸದ್ದು ವಿಚಾರಣೆ ನಡೆಯುತ್ತಿದೆ’ ಮುಖ್ಯ ಪಾತ್ರಧಾರಿ ಮಧುನಂದನ್.
ಹೌದು, ಇದು ಮಂಡ್ಯದ ಸಾಮಾನ್ಯ ಹುಡುಗನೊಬ್ಬನ ಕಥೆ, 20 ವರ್ಷಗಳ ಹಿಂದೆ ಸಿನಿಮಾ ರಂಗಕ್ಕೆ ಬರಬೇಕು ಎಂದು ಕನಸು ಕಂಡವರು ಆಯ್ಕೆ ಮಾಡಿಕೊಂಡಿದ್ದು ಪಶು ವೈದ್ಯ ವೃತ್ತಿ. ಶಾಲೆ, ಕಾಲೇಜು ದಿನಗಳಲ್ಲಿ ನಾಟಕ, ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದ ಮಧುನಂದನ್ ಸಿನಿಮಾದಲ್ಲಿ ನಟಿಸಬೇಕು ಎಂದು ಕನಸು ಕಂಡವರು.

ಆದ್ರೆ ಮನೆಯಲ್ಲಿ ಇದಕ್ಕೆ ಸಮ್ಮತಿ ಇರಲಿಲ್ಲ. ಮಗ ಓದಬೇಕು, ಒಂದೊಳ್ಳೆ ಕೆಲಸ ಹುಡುಕಿಕೊಂಡು ಜೀವನ ನಡೆಸಬೇಕು ಅನ್ನೋದು ತಂದೆ ತಾಯಿ ಆಸೆ. ಮನೆಯವರ ಆಸೆಯಂತೆ ನಟನೆಯ ಒಲವನ್ನು ಬದಿಗೊತ್ತಿ ಪಶು ವೈದ್ಯಕೀಯದಲ್ಲಿ ವಿದ್ಯಾಭ್ಯಾಸ ಮುಗಿಸಿ, ಪಿಹೆಚ್ ಡಿ ಪದವಿಯನ್ನೂ ಪಡೆದು ಪಶು ವೈದ್ಯನಾಗಿ ಕೆಲಸ ನಿರ್ವಹಿಸಿ, ಪ್ರಸ್ತುತ ಸಹಾಯಕ ಪ್ರಾಧ್ಯಾಪಕನಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಮಧುನಂದನ್.
ಇದೆಲ್ಲದರ ನಡುವೆ ಕಲಾವಿದನಾಗಬೇಕೆಂಬ ಬಯಕೆ ಮಾತ್ರ ಹಾಗೆಯೇ ಇತ್ತು. ಕೋವಿಡ್ ಸಮಯದಲ್ಲಿ ರಂಗಭೂಮಿ ಸ್ನೇಹಿತರಾದ ಭಾಸ್ಕರ್ ಆರ್ ನೀನಾಸಂ ಸಿನಿಮಾ ಕುರಿತಾಗಿ ಸಂಪರ್ಕ ಮಾಡಿದ್ರು. ‘ಸದ್ದು ವಿಚಾರಣೆ ನಡೆಯುತ್ತಿದೆ’ ಸಿನಿಮಾ ಬಗ್ಗೆ ಹೇಳಿದ್ರು.

ನನ್ನಿಂದ ಸಾಧ್ಯನಾ ಎಂಬ ಪ್ರಶ್ನೆ ಬಂದಾಗ ಭಾಸ್ಕರ್ ಹುರಿದುಂಬಿಸಿದ್ರು. ಸಿನಿಮಾ ಮಾಡಲು ಒಪ್ಪಿಕೊಂಡೆ. ವೃತ್ತಿ ಜೊತೆಗೆ ನಟನೆ ಮಾಡಲು ವೈದ್ಯಕೀಯ ವಿದ್ಯಾನಿಲಯದಲ್ಲಿ ಅನುಮತಿಯೂ ಸಿಕ್ಕಿದೆ. ಕೊನೆಗೂ ಕಲಾವಿದನಾಗಿ ಬಣ್ಣ ಹಚ್ಚಿದ್ದೇನೆ. ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸಿದ್ದೇನೆ. ಖಡಕ್ ಪೊಲೀಸ್ ಪಾತ್ರಕ್ಕೆ ಬಣ್ಣ ಹಚ್ಚಿದ್ದೇನೆ. ಫಸ್ಟ್ ಟೈಂ ಈ ರೀತಿಯ ಪಾತ್ರ ಸಿಕ್ಕಿದ್ದು ಖುಷಿ ಕೊಟ್ಟಿದೆ. ನವೆಂಬರ್ ನಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಇನ್ಮುಂದೆ ವೃತ್ತಿ ಜೊತೆಗೆ ಸಿನಿಮಾ ಪ್ಯಾಶನ್ ಕೂಡ ಮುಂದುವರೆಸಿಕೊಂಡು ಹೋಗುವ ಯೋಜನೆ ಹಾಕಿಕೊಂಡಿದ್ದೇನೆ ಎನ್ನುತ್ತಾರೆ ಮಧುನಂದನ್.

ಸದ್ದು ವಿಚಾರಣೆ ನಡೆಯುತ್ತಿದೆ ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಒಳಗೊಂಡಿದೆ. ಒಂದಿಷ್ಟು ನೈಜ ಘಟನೆಗಳ ಸ್ಪೂರ್ತಿಯೂ ಈ ಚಿತ್ರಕ್ಕಿದೆ. ಭಾಸ್ಕರ್ ಆರ್ ನೀನಾಸಂ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ರಾಕೇಶ್ ಮಯ್ಯ, ಪಾವನಾ ಗೌಡ ಚಿತ್ರದಲ್ಲಿ ನಾಯಕ, ನಾಯಕಿಯಾಗಿ ನಟಿಸಿದ್ದಾರೆ. ಎಂ. ಎಂ. ಸಿನಿಮಾಸ್ ಬ್ಯಾನರ್ ನಡಿ ಸುರಭಿ ಲಕ್ಷ್ಮಣ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ರಾಜ್ ಕಾಂತ ಕ್ಯಾಮೆರಾ ನಿರ್ದೇಶನ, ಸಚಿನ್ ಬಸ್ರೂರು ಸಂಗೀತ, ಶಶಿಧರ್ ಪಿ ಸಂಕಲನ ಚಿತ್ರಕ್ಕಿದೆ.

More News

You cannot copy content of this page