ಹೈದರಾಬಾದ್ : ತೆಲುಗು ಚಿತ್ರರಂಗದ ಮೇರು ನಟ ನಾಗಾರ್ಜುನ್ ಅಕ್ಕಿನೇನಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಆಂದ್ರಪ್ರದೇಶದ ಸಿಎಂ ಜಗನ್ ಮೋಹನ್ ರೆಡ್ಡಿ ನೇತೃತ್ವದಲ್ಲಿ ವೈ ಎಸ್ ಆರ್ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿಯಲಿದ್ದಾರೆ ಎಂಬ ಗುಸುಗುಸು ಸದ್ದು ಕೇಳಿಬರುತ್ತಿದೆ.
ವಿಜಯವಾಡ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸುವ ಸಂಬಂಧ ವೈಎಸ್ ಆರ್ ಪಕ್ಷದ ನಾಯಕರು ನಿರ್ಧರಿಸಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ. ಈ ಮೂಲಕ ನಾಗಾರ್ಜುನ ವೈಎಸ್‌ಆರ್‌ಸಿಪಿಯಿಂದ ಲೋಕಸಭೆಗೆ ಸ್ಪರ್ಧಿಸಬಹುದು ಎಂಬ ಊಹಾಪೋಹಗಳು ಕೇಳಿ ಬರುತ್ತಿವೆ.
ಸಿನಿಮಾ ಕ್ಷೇತ್ರದಲ್ಲಿ ಸಾಕಷ್ಟು ಖ್ಯಾತಿಯನ್ನು ಹೊಂದಿರುವ ನಟರನ್ನು ಸೆಳೆಯಲು ವೈಎಸ್ ಆರ್ ಸಿಪಿ ಮುಂದಾಗಿದೆ. ಆ ಮೂಲಕ ಲೋಕಸಭೆಗೆ ಹೆಚ್ಚಿನ ಜನರನ್ನು ಆಯ್ಕೆ ಮಾಡಿ ಕಳುಹಿಸುವ ಹಾಗೂ ಮುಂದೆ ನಡೆಯುವ ವಿಧಾನಸಭಾ ಚುನಾವಣೆಗೆ ತಯಾರಿಯ ಹಿನ್ನೆಲೆಯಲ್ಲಿ ನಟರನ್ನು ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ ಎನ್ನಲಾಗಿದೆ.

ಅಕ್ಕಿನೇನಿ ರಾಜಕೀಯಕ್ಕೆ ಪ್ರವೇಶಿಸುವ ಕುರಿತು ಬಹಳಷ್ಟು ಚರ್ಚೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಅವರೇ ಪ್ರತಿಕ್ರಿಯೆ ನೀಡಿದ್ದಾರೆ. ಹೀಗಿರುವಾಗ ಇಂತಹ ಸುದ್ದಿಯನ್ನು ನಾಗ್ ನಿರಾಕರಿಸಿದ್ದಾರೆ. ವಿಜಯವಾಡ ಸಂಸದ ಸ್ಥಾನಕ್ಕೆ ಸ್ಪರ್ಧಿಸುತ್ತಾರೆ ಎಂಬ ಸುದ್ದಿಯಲ್ಲಿ ಸತ್ಯಾಂಶವಿಲ್ಲ. ಈಗ ರಾಜಕೀಯದಿಂದ ದೂರವಾಗಿದ್ದೇನೆ ಎನ್ನುವ ಮೂಲಕ ನಾಗ್ ರಾಜಕೀಯ ಪ್ರವೇಶದ ಕುರಿತು ಹರಡಿರುವ ಸುದ್ದಿಯನ್ನು ನಿರಾಕರಿಸಿದ್ದಾರೆ.
ದೇಶದಲ್ಲಿ ಅಥವಾ ರಾಜ್ಯದಲ್ಲಿ ಪ್ರತಿಬಾರಿ ಚುನಾವಣೆಗಳು ಬಂದಂತ ಸಂದರ್ಭದಲ್ಲಿ ಹಲವಾರು ಪಕ್ಷಗಳೊಂದಿಗೆ ಸೇರಿಕೊಳ್ಳುವೆ, ಚುನಾವಣೆಗೆ ಸ್ಪರ್ಧೆ ಮಾಡುವೆ ಎಂಬಂತಹ ವಿಷಯಗಳು ಹರಿದಾಡುತ್ತವೆ. ಇಂತಹ ಸುದ್ದಿಗಳು ಹಾಸ್ಯಾಸ್ಪದ. ನಾನು ನಟನಾಗಿ ಜನಪ್ರಿಯತೆ ಪಡೆದಿದ್ದೇನೆ. ಅಷ್ಟು ಸಾಕು ನನಗೆ. ರಾಜಕೀಯದಲ್ಲಿ ಮಿಂಚುವ ಆಸಕ್ತಿ ನನಗಿಲ್ಲ. ಆದರೆ ಒಳ್ಳೆಯ ಕಥೆಯಿದ್ದರೆ ಅದರಲ್ಲಿ ರಾಜಕೀಯ ನಾಯಕನಾಗಿ ನಟಿಸಲು ಸಿದ್ಧ ಎಂದಿದ್ದಾರೆ ನಾಗಾರ್ಜುನ.

ಆಂದ್ರ ಸಿಎಂ ಜಗನ್ ಜೊತೆಗೆ ಉತ್ತಮ ಸಂಬಂಧ ಹೊಂದಿರುವ ನಾಗಾರ್ಜುನ ವಿಜಯವಾಡದಿಂದ ಸ್ಪರ್ಧೆ ಖಚಿತ ಅಂತಾನೇ ನಂಬಲಾಗಿತ್ತು. ಆದರೆ, ಅವರ ಸ್ಪಷ್ಟನೆ ನೀಡಿದ ನಂತರ ಎಲ್ಲ ವದಂತಿಗಳಿಗೂ ತೆರೆಬಿದ್ದಿದೆ.
#akkineni nagarjuna #telugu actor #ysr congress #cm jagan mohan reddy #speculations