ಇತ್ತೀಚೆಗೆ ಅಯೋಧ್ಯೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತೆಲುಗು ನಟ ಪ್ರಭಾಸ್ ನಾಯಕ ನಟನಾಗಿ ನಟಿಸಿರುವ ಆದಿಪುರುಷ್ ಸಿನಿಮಾ ಟೀಸರ್ ಬಿಡುಗಡೆಯಾಗಿದ್ದು, ಅದರಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ ತರಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ.

ಈಗಾಗಲೇ ಟೀಸರ್ ಬಿಡುಗಡೆಯಾಗಿದ್ದು, ಈ ಸಂದರ್ಭದಲ್ಲಿ ಮಹಾರಾಷ್ಟ್ರದ ಗೃಹ ಸಚಿವರು ಈ ಬಗ್ಗೆ ಅಪಸ್ವರ ಎತ್ತಿದ್ದಾರೆ. ಸಿನಿಮಾದಲ್ಲಿ ಹನುಮಂತ ಪಾತ್ರಧಾರಿಗೆ ಲೆದರ್ ಬಟ್ಟೆಗಳನ್ನು ತೊಡಿಸಲಾಗಿದೆ. ಹನುಮನ ಸೈನಕ್ಕೂ ಲೆದರ್ ಬಟ್ಟೆ ಇದೆ. ಹೀಗಾಗಿ ಹನುಮ ದೇವರಿಗೆ ಅಪಮಾನ ಮಾಡಲಾಗಿದೆ ಎಂದು ಗೃಹ ಸಚಿವ ನರೋತ್ತಮ್ ಮಿಶ್ರಾ ಆಕ್ಷೇಪಿಸಿದ್ದಾರೆ. ಅದನ್ನು ಸರಿ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಇನ್ನೊಂದು ಕಡೆಯಲ್ಲಿ ಆದಿಪುರುಷ್ ಸಿನಿಮಾದಲ್ಲಿ ರಾಮಾಯಣಕ್ಕೆ ಅಪಮಾನ ಮಾಡಿದ್ದಾರೆ ಎಂದು ಹಿಂದೂ ಪರ ಸಂಘಟನೆಗಳು ಆರೋಪಿಸಿದ್ದು, ರಾಮಾಯಣದ ಪಾತ್ರಗಳನ್ನು ಮನಬಂದಂತೆ ಅಭಿವ್ಯಕ್ತಿ ಪಡಿಸಿದ್ದಾರೆ. ಇದು ಸರಿಯಾದ ಕ್ರಮವಲ್ಲ ಎಂದು ಸಂಘಟನೆಗಳು ಆರೋಪಿಸಿವೆ.

ಇತ್ತೀಚೆಗೆ ಬಿಡುಗಡೆಯಾದ ಟೀಸರ್ ತೀರಾ ಕಳಪೆಯಾಗಿದೆ ಎಂದು ಟ್ರೋಲ್ ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದರ ಮಧ್ಯೆಯೇ ಒಂದು ರಾಜ್ಯದ ಗೃಹ ಸಚಿವರು ಚಿತ್ರಚಂಡಕ್ಕೆ ಗಂಭೀರ ಎಚ್ಚರಿಕೆ ರವಾನಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಮಿಶ್ರಾ, ಹನುಮಂತನಿಗೆ ಲೆದರ್ ಬಟ್ಟೆಗಳನ್ನು ಹಾಕಿರುವ ಸಂಬಂಧ ಆದಿಪುರುಷ್ ಸಿನಿಮಾ ತಂಡಕ್ಕೆ ಪತ್ರದ ಮೂಲಕ ತಿಳಿಸಿದ್ದೇನೆ. ಒಂದು ವೇಳೆ ಸಿನಿಮಾದಲ್ಲಿ ನಾವು ಬೇಡಿಕೆಯಿಟ್ಟಿರುವ ಪಾತ್ರಗಳನ್ನು ತೆಗೆಯದಿದ್ದಲ್ಲಿ ಕಾನೂನು ಪ್ರಕಾರ ಹೋರಾಟಕ್ಕೆ ಸಿದ್ದರಾಗುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾದರೆ ನಾವು ಸಹಿಸುವುದಿಲ್ಲ ಎಂದು ಹೇಳಿದ್ದಾರೆ.

ಈ ಸಿನಿಮಾ ಕುರಿತು ಪ್ರಭಾಸ್ ಸಹ ಕೋಪ ಮಾಡಿಕೊಂಡಿದ್ದಾರೆ. ಟೀಸರ್ ಬಿಡುಗಡೆ ಸಮಾರಂಭ ಮುಗಿದ ನಂತರ ನಿರ್ದೇಶಕರನ್ನು ತಮ್ಮ ರೂಮ್ ಗೆ ಕರೆದು ಬೈದಿದ್ದಾರೆ ಎಂದು ಹೇಳಲಾಗುತ್ತಿದೆ. ಇದಲ್ಲದೇ ಸೈಫ್ ಅಲಿ ಖಾನ್ ಅವರಿಗೆ ರಾವಣನ ಪಾತ್ರ ಕೊಟ್ಟಿದ್ದಕ್ಕೂ ಹಲವರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.




