IMPOSE OF HINDI: ಎಸ್ ಎಸ್ ಸಿ 20,000 ಹುದ್ದೆ ಆಯ್ಕೆಗೆ ಕನ್ನಡದಲ್ಲಿಲ್ಲ ಪರೀಕ್ಷೆ: ಹಿಂದಿ ಹೇರಿಕೆಗೆ ಬೇರೆ ಸಾಕ್ಷಿ ಬೇಕೆ?: ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನೆ

ಬೆಂಗಳೂರು : ಬಹುತೇಕ ಕೇಂದ್ರ ಸರ್ಕಾರದ ಪರೀಕ್ಷೆಗಳು ಆಂಗ್ಲ ಮತ್ತು ಹಿಂದಿ ಮಾದ್ಯಮದಲ್ಲೇ ಇರುವ ಕಾರಣ ಪ್ರಾದೇಶಿಕ (ಕನ್ನಡ) ಭಾಷಾ ಆಕಾಂಕ್ಷಿಗಳು ಉನ್ನತಮಟ್ಟದ ಹುದ್ದೆ ಪಡೆಯುವಲ್ಲಿ ನಿರಂತವಾಗಿ ವಂಚಿತರಾಗುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಕೇಂದ್ರದ ಸಿಬ್ಬಂದಿ ಆಯ್ಕೆ ಆಯೋಗ (SSC) 20,000 ಹುದ್ದೆ ಆಯ್ಕೆಗೆ ಹಿಂದಿ-ಇಂಗ್ಲೀಷ್‌ʼನಲ್ಲಿ ಮಾತ್ರ ಪರೀಕ್ಷೆ ನಡೆಸುತ್ತಿದೆ. ಆಯ್ಕೆಯಾದ ಅಭ್ಯರ್ಥಿಯನ್ನು ಯಾವ ರಾಜ್ಯಕ್ಕಾದರೂ ಕಳುಹಿಸಬಹುದು. ಕನ್ನಡ ಸೇರಿ ಯಾವುದೇ ಪ್ರಾದೇಶಿಕ ಭಾಷೆಯಲ್ಲಿ ಪರೀಕ್ಷೆಗೆ ಅವಕಾಶವಿಲ್ಲ. ಹಿಂದಿ ಹೇರಿಕೆ, ಭಾಷಾ ತಾರತಮ್ಯಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ? ಎಂದು ದೂರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಕೇಂದ್ರ ಸರಕಾರಕ್ಕೆ ಪ್ರಾದೇಶಿಕ ಭಾಷೆಗಳನ್ನು ಹತ್ತಿಕ್ಕಲೇಬೇಕು ಎನ್ನುವ ಕೆಟ್ಟ ಹಠವಿದ್ದಂತೆ ಇದೆ. ಕನ್ನಡವೂ ಸೇರಿ ದಕ್ಷಿಣದ ಪ್ರಾದೇಶಿಕ ಭಾಷೆಗಳ ಬಗ್ಗೆ ಇನ್ನಿಲ್ಲದ ಅಸಹನೆ, ದ್ವೇಷ ಮೈಗೂಡಿಸಿಕೊಂಡಿದೆ ಎನಿಸುತ್ತಿದೆ. ತ್ರಿಭಾಷಾ ಸೂತ್ರಕ್ಕೆ ಹೇಗಾದರೂ ಸಮಾಧಿ ಕಟ್ಟಲೇಬೇಕೆಂದು ಹೊರಟಂತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಒಕ್ಕೂಟ ತತ್ವದಲ್ಲಿ ಆಡಳಿತ ನಡೆಸುವ ಪಕ್ಷಕ್ಕೇ ಒಪ್ಪಿಗೆ ಇಲ್ಲ ಎನ್ನುವುದನ್ನು ಇದು ತೋರಿಸುತ್ತಿದೆ. ಹಿಂದಿ ಭಾಷಿಗರನ್ನು ಕರ್ನಾಟಕ ಹಾಗೂ ದಕ್ಷಿಣ ಭಾರತದಲ್ಲಿ ತುಂಬುವ ದುಸ್ಸಾಹಸವಷ್ಟೇ. ಈ ವಿಷಯದಲ್ಲಿ ನಮ್ಮ 2 ಬೇಡಿಕೆಗಳಿವೆ. ಕನ್ನಡದಲ್ಲೂ ಪರೀಕ್ಷೆ ನಡೆಸಬೇಕು. ಕರ್ನಾಟಕದ ಹುದ್ದೆಗಳಿಗೆ ಕನ್ನಡಿಗರನ್ನೇ ನೇಮಿಸಬೇಕು. ಈ ಬದಲಾವಣೆ ನಂತರವಷ್ಟೇ ಸಿಬ್ಬಂದಿ ಆಯ್ಕೆ ಆಯೋಗ ಪರೀಕ್ಷೆ ನಡೆಸಬೇಕು ಎಂದು ಹೆಚ್ ಡಿಕೆ ಆಗ್ರಹಿಸಿದ್ದಾರೆ.
ಕನ್ನಡದಲ್ಲೇ ಪರಿಕ್ಷೆ ನಡೆಸಿದರೆ ಕರ್ನಾಟಕದ ಅನೇಕ ಪ್ರತಿಭಾವಂತ ಯುವಜನರು ಆಯ್ಕೆ ಆಗಲು ಅನುಕೂಲವಾಗುತ್ತದೆ. ಕರ್ನಾಟಕದ ಹುದ್ದೆಗಳಿಗೆ ಕನ್ನಡಿಗರ ನೇಮಕವಾದರೆ, ಕರ್ನಾಟಕದ ಜನರಿಗೆ ಕನ್ನಡದಲ್ಲಿ ಸೇವೆ ದೊರೆಯುತ್ತದೆ. ತಪ್ಪಿದರೆ, ಕೇಂದ್ರವು ಕನ್ನಡಿಗರ ಆಗ್ರಹಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

#ssc exam #english and hindi #no other regional language

More News

You cannot copy content of this page