‘ಏಕ್ ಲವ್ ಯಾ’ ಸಿನಿಮಾ ಮೂಲಕ ಸಿನಿರಸಿಕರ ಮನಗೆದ್ದ ರಾಣಾ ಸದ್ದಿಲ್ಲದೇ ಪ್ಯಾನ್ ಇಂಡಿಯಾ ಸ್ಟಾರ್ ಆಗುವತ್ತ ಚಿತ್ತ ಹರಿಸಿದ್ದಾರೆ. ರಾಣಾ ಮುಂದಿನ ಸಿನಿಮಾ ಯಾರೊಂದಿಗೆ ಮಾಡುತ್ತಾರೆ ಎಂಬ ಪ್ರಶ್ನೆಗೆ ಈಗಾಗಲೇ ಉತ್ತರ ಸಿಕ್ಕಿದೆ. ನಿರ್ದೇಶಕ ಪ್ರೇಮ್ ಜೊತೆ ಸಹಾಯಕ ನಿರ್ದೇಶಕನಾಗಿ ದುಡಿದ ಅನುಭವ ಇರುವ ವಿಜಯ್ ಈಶ್ವರ್ ರಾಣಾ ಮುಂದಿನ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ವಿಜಯ್ ಈಶ್ವರ್ ಕಥೆ ರಾಣಾರನ್ನು ಇಂಪ್ರೆಸ್ ಮಾಡಿದ್ದು, ಯಂಗ್ ಅಂಡ್ ಟ್ಯಾಲೆಂಟೆಡ್ ಪ್ರತಿಭೆ ಜೊತೆ ರಾಣಾ ಕೈ ಜೋಡಿಸಿದ್ದಾರೆ. ಇಂಟ್ರಸ್ಟಿಂಗ್ ವಿಚಾರ ಅಂದ್ರೆ ಈ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾವಾಗಿ ಮೂಡಿ ಬರ್ತಿದೆ.
ವಿಜಯದಶಮಿಯಂದು ವಿಜಯ್ ಈಶ್ವರ್ ತಮ್ಮ ಚೊಚ್ಚಲ ಸಿನಿಮಾ ಸ್ಕ್ರಿಪ್ಟ್ ಪೂಜೆ ನಡೆಸಿದ್ದು, ಫಸ್ಟ್ ಲುಕ್ ರಿಲೀಸ್ ಮಾಡಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಅಕ್ಟೋಬರ್ 15ರಂದು ರಾಣಾ ಹುಟ್ಟುಹಬ್ಬ ಅಂದೇ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡಲು ವಿಜಯ್ ಈಶ್ವರ್ ತಯಾರಿ ಮಾಡಿಕೊಂಡಿದ್ದಾರೆ. ಕಲ್ಟ್, ಮಾಸ್ ಸಬ್ಜೆಕ್ಟ್ ಒಳಗೊಂಡ ಈ ಚಿತ್ರ ಪ್ಯಾನ್ ಇಂಡಿಯಾ ಸಿನಿಮಾವಾಗಿ ಬರಲಿದೆ ಎಂದು ನಿರ್ದೇಶಕ ವಿಜಯ್ ಈಶ್ವರ್ ತಿಳಿಸಿದ್ದಾರೆ.

ರಾಣಾ ಕಂಪ್ಲೀಟ್ ಡಿಫ್ರೆಂಟ್ ಲುಕ್ ನಲ್ಲಿ ಕಾಣಸಿಗುತ್ತಾರೆ. ಅದಕ್ಕೆಂದೇ ಕಳೆದ ಮೂರು ತಿಂಗಳಿನಿಂದ ವರ್ಕೌಟ್ ಮಾಡುತ್ತಿದ್ದಾರೆ. ತಮಿಳಿನ ಖ್ಯಾತ ನಟ ಈ ಚಿತ್ರದ ವಿಲನ್ ರೋಲ್ ನಲ್ಲಿ ನಟಿಸಲಿದ್ದು, ಸ್ಯಾಂಡಲ್ ವುಡ್ ಸ್ಟಾರ್ ನಟರೊಬ್ಬರ ಗೆಸ್ಟ್ ಅಪಿಯರೆನ್ಸ್ ಚಿತ್ರದಲ್ಲಿರಲಿದೆ. ಕೆವಿಎನ್ ಸಂಸ್ಥೆ ರಾಣಾ, ವಿಜಯ್ ಈಶ್ವರ್ ಕಾಂಬಿನೇಶನ್ ಚಿತ್ರಕ್ಕೆ ಬಂಡವಾಳ ಹೂಡುವ ಸಾಧ್ಯತೆಯಿದ್ದು ಇದೆಲ್ಲದಕ್ಕೂ ಸದ್ಯದಲ್ಲೇ ಉತ್ತರ ನೀಡಲಿದ್ದೇನೆ ಎನ್ನುತ್ತಾರೆ ವಿಜಯ್ ಈಶ್ವರ್.

ವಿಜಯ್ ಈಶ್ವರ್ ಕಳೆದ ಎಂಟು ವರ್ಷದಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದು, ನಾಲ್ಕು ವರ್ಷಗಳಿಂದ ನಿರ್ದೇಶಕ ಪ್ರೇಮ್ ಜೊತೆ ಸಹ ನಿರ್ದೇಶಕನಾಗಿ, ಬರಹಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಧ್ರುವ ಸರ್ಜಾ, ಪ್ರೇಮ್ ಕಾಂಬಿನೇಶನ್ ಹೊಸ ಸಿನಿಮಾಕ್ಕೂ ವಿಜಯ್ ಈಶ್ವರ್ ಡೈಲಾಗ್ ರೈಟರ್ ಆಗಿ ಕೆಲಸ ಮಾಡುತ್ತಿದ್ದಾರೆ.
ಇದಕ್ಕೂ ಮುನ್ನ ‘ಲೌಡ್ ಸ್ಪೀಕರ್’, ‘ಡಿಂಗ’, ‘ಏಕ್ ಲವ್ ಯಾ’ ಸಿನಿಮಾಗಳಿಗೆ ಡೈಲಾಗ್ ರೈಟರ್ ಹಾಗೂ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ. ಇದೀಗ ಸ್ವತಂತ್ರ ನಿರ್ದೇಶಕನಾಗಿ ಮೊದಲ ಸಿನಿಮಾದಲ್ಲೇ ಪ್ಯಾನ್ ಇಂಡಿಯಾ ಸಿನಿಮಾ ನಿರ್ದೇಶಕನಾಗಿ ಹೊರ ಹೊಮ್ಮುತ್ತಿದ್ದಾರೆ.




