ಬೆಂಗಳೂರು : ಗಣೇಶ ಹಬ್ಬಕ್ಕೆ ಕೇವಲ ಮೂರು ದಿನ ಬಾಕಿ ಇರುವಾಗ ರಾಜ್ಯ ಸರ್ಕಾರ ಮನೆಯಲ್ಲಿ 2 ಅಡಿ ,ಸಾರ್ವಜನಿಕ ಸ್ಥಳದಲ್ಲಿ 4 ಅಡಿ ಗಣೇಶ ಮೂರ್ತಿ ಇಡಬೇಕೆಂಬ ಅರ್ಥಹೀನ ನಿರ್ಬಂಧ ಹೇರಿದೆ.ಆ ಮೂಲಕ ಮೂರ್ತಿ ತಯಾರಕರ ಬದುಕಿನ ಜತೆ ಚೆಲ್ಲಾಟ ವಾಡುತ್ತಿದೆ.ತಕ್ಷಣ ಆದೇಶವನ್ನು ಹಿಂಪಡೆಯ ಬೇಕು.ಇಲ್ಲದಿದ್ದಲ್ಲಿ ಮೂರ್ತಿ ತಯಾರಿಕರಿಗೆ ಪರಿಹಾರ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಆಗ್ರಹಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಅವರು ‘ಕಳೆದ 2 ತಿಂಗಳಿಂದ ಗಣೇಶ ಮೂರ್ತಿ ತಯಾರಕರು ಲಕ್ಷಾಂತರ ಮೂರ್ತಿಗ ಳನ್ನು ತಯಾರಿಸಿದ್ದಾರೆ.ಸರ್ಕಾರ ಕೊನೆ ಕ್ಷಣದಲ್ಲಿ ನಿರ್ಬಂಧ ಹೇರಿದರೆ ಅವರ ವ್ಯಾಪಾರ ವ್ಯವಹಾರ ಹಾಳಾಗಿದೆ.ಸರ್ಕಾರ ಇದನ್ನೇ ಎರಡು ಮೂರು ತಿಂಗಳ ಹಿಂದೆಯೇ ಹೇಳಿದ್ದರೆ, ಮೂರ್ತಿ ತಯಾರಕರು ದೊಡ್ಡ ಮೂರ್ತಿಗಳನ್ನು ತಯಾರಿಸುತ್ತಿರಲಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಕೋವಿಡ್ ಸಮಯದಲ್ಲಿ ಆದಾಯವಿಲ್ಲದಿದ್ದ ಮೂರ್ತಿ ತಯಾರಕರು,ಎಲ್ಲಾ ಹಣ ಹಾಕಿ ಮೂರ್ತಿಗಳ ನ್ನು ತಯಾರಿಸಿದ್ದಾರೆ. ಕೊನೆ ಗಳಿಗೆಯಲ್ಲಿ ನಿರ್ಬಂಧ ಹೇರಿದರೆ ಅವರಿಗೆ ಆರ್ಥಿಕ ನಷ್ಟವಾಗುವುದಿಲ್ಲವೇ.? ಸರ್ಕಾರ ಇದುವರೆಗೂ ಇವರಿಗೆ ಕೋವಿಡ್ ಪರಿಹಾರ ನೀಡಿಲ್ಲ.ಹೀಗಿರುವಾಗ ನಿರ್ಬಂಧ ಎಷ್ಟು ಸರಿ? ದೇವರ ಮೂರ್ತಿ ಮಾಡಿಕೊಂಡು ಜೀವನ ನಡೆಸುವವರ ಬದುಕಿಗೆ ಸರಕಾರ ಕೊಳ್ಳಿ ಇಟ್ಟಿದೆ ಎಂದು ಆಕ್ರೋಶ ಅವರು ವ್ಯಕ್ತಪಡಿಸಿದ್ದಾರೆ.
‘ರಾಜ್ಯ ಸರ್ಕಾರ ಗಣಪತಿ ಉತ್ಸವಕ್ಕೆ ಕಡಿವಾಣ ಹಾಕುವ ಭರದಲ್ಲಿ ಭಕ್ತ ಹಾಗೂ ಭಗವಂತನ ನಡುವೆ ಕಂದಕ ನಿರ್ಮಿಸಿರುವುದು ದುರಾದೃಷ್ಟಕರ ಸಂಗತಿ.ಗಣೇಶ ಪ್ರತಿಮೆಯನ್ನು ಮನೆಯಲ್ಲಿ 2 ಅಡಿ, ಸಾರ್ವಜನಿಕ ಪ್ರದೇಶದಲ್ಲಿ 4 ಅಡಿಗೆ ಸೀಮಿತಗೊಳಿಸಿ, ದೇವರಿಗೂ ನೀನು ಇಷ್ಟೇ ಎತ್ತರ ಇರಬೇಕು ಎಂದು ನಿಯಂತ್ರಣ ಹೇರುತ್ತಿದ್ದಾರೆ ಎಂದು ಕುಟುಕಿದ್ದಾರೆ.

‘ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚು ಜನ ಸೇರಬಾರದು,ಮೆರವಣಿಗೆ ಮಾಡಬಾರದು ಎಂಬುದನ್ನು ಒಪ್ಪುತ್ತೇವೆ.ಆದರೆ ಗಣೇಶನ ಪ್ರತಿಮೆ 2-4 ಅಡಿಯೇ ಇರಬೇಕು ಎಂಬ ನಿರ್ಬಂಧದ ಹಿಂದೆ ಯಾವ ತರ್ಕ ಇದೆ? ಹಿಂದೂ ಸಂಸ್ಕೃತಿ ವಕ್ತಾರರು ಎಂದು ಹೇಳಿ ಕೊಳ್ಳುವವರು ಮಾಡುವ ಕೆಲಸ ಇದೇನಾ?’ ಎಂದು ಶಿವಕುಮಾರ್ ಅವರು ಪ್ರಶ್ನಿಸಿದ್ದಾರೆ.
‘ಸರ್ಕಾರ ಅಂತಿಮ ಗಳಿಗೆಯಲ್ಲಿ ಈ ನಿರ್ಧಾರ ತೆಗೆದುಕೊಂಡರೆ.ಈಗ ಮಾಡಿರುವ ಮೂರ್ತಿಗಳನ್ನು ನಿರ್ಧಾರ ಪ್ರಕಟಿಸಿರುವವರ ಮನೆ ಮುಂದೆ ಇಡಬೇಕಾ? ನಿರ್ಧಾರ ಪ್ರಕಟಿಸಿರುವವರೇ ಇವುಗಳನ್ನು ಖರೀದಿಸಲಿ ಎಂದು ಅವರು ಒತ್ತಾಯಿಸಿದ್ದಾರೆ.
ಸರಕಾರದ ಈ ತಿಕ್ಕಲುತನದ ನಿರ್ಧಾರ “ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ” ಎಂಬಂತಿದೆ ಎಂದು ಅವರು ಟೀಕಿಸಿದ್ದಾರೆ. ನಾವು ಕೋವಿಡ್ ನಿಯಮದ ಬಗ್ಗೆ ಪ್ರಶ್ನೆ ಮಾಡುತ್ತಿಲ್ಲ,ಸರ್ಕಾರದ ಅವೈಜ್ಞಾನಿಕ ತೀರ್ಮಾನ ಪ್ರಶ್ನಿಸುತ್ತಿದ್ದೇವೆ.ಈ ವೃತ್ತಿ ಅವಲಂಬಿಸಿರುವವರ ಬದುಕು ಬೀದಿ ಪಾಲಾಗಬಾರದು.ಗಣೇಶ ಹಬ್ಬಕ್ಕೆ ಇನ್ನು ಎರಡು ದಿನ ಕಾಲಾವಕಾಶ ಇದೆ.ಸರ್ಕಾರ ಅರ್ಥಹೀನ ನಿರ್ಬಂಧ ವಾಪಸ್ ಪಡೆಯಬೇಕು ಅಥವಾ ಮೂರ್ತಿ ತಯಾರಕರಿಗೆ ಪರಿಹಾರ ನೀಡಬೇಕು’ ಎಂದು ಅವರು ಆಗ್ರಹಿಸಿದ್ದಾರೆ.




