WOMEN’S IPL: ಮಹಿಳಾ ಐಪಿಎಲ್‌ ಆರಂಭಕ್ಕೆ ಬಿಸಿಸಿಐ ಚಿಂತನೆ: 2023ರಿಂದ 5 ತಂಡಗಳ ಟೂರ್ನಿ ಆರಂಭ

ಜಾಗತಿಕ ಕ್ರಿಕೆಟ್‌ನಲ್ಲಿ ದೊಡ್ಡಮಟ್ಟದ ಛಾಪು ಮೂಡಿಸಿರುವ ರೋಚಕ ಕ್ರಿಕೆಟ್‌ ಕದನ ಇಂಡಿಯನ್‌ ಪ್ರೀಮಿಯರ್‌ ಲೀಗ್‌(IPL) ಇದೀಗ ಮತ್ತೊಂದು ಹೆಜ್ಜೆ ಮುಂದೆ ಸಾಗುತ್ತಿದೆ. ಬಹು ವರ್ಷಗಳ ನಿರೀಕ್ಷೆಯಂತೆ ಮಹಿಳಾ ಐಪಿಎಲ್‌ ಆರಂಭಕ್ಕೆ ವೇದಿಕೆ ಸಿದ್ಧವಾಗಿದೆ.
ಚೊಚ್ಚಲ ಆವೃತ್ತಿಯ ಮಹಿಳಾ ಐಪಿಎಲ್‌ ಟೂರ್ನಿ 2023ರ ಮಾರ್ಚ್‌ ತಿಂಗಳಲ್ಲಿ ನಡೆಯುವ ಸಾಧ್ಯತೆ ಇದೆ. ಮುಂದಿನ ವರ್ಷ ನಡೆಯಲಿರುವ ಮಹಿಳಾ ಟಿ20 ವಿಶ್ವಕಪ್‌ ಮುಕ್ತಾಯದ ಬೆನ್ನಲ್ಲೇ ಭಾರತದಲ್ಲಿ ಮಹಿಳಾ ಐಪಿಎಲ್‌ ನಡೆಯಲಿದೆ. ಈ ಚೊಚ್ಚಲ ಆವೃತ್ತಿಯ ಮಹಿಳಾ ಐಪಿಎಲ್‌ ಟೂರ್ನಿಯಲ್ಲಿ 5 ತಂಡಗಳು ಕಣಕ್ಕಿಳಿಸಲು ಬಿಸಿಸಿಐ ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ.

ಮಹಿಳಾ ಐಪಿಎಲ್‌ ಟೂರ್ನಿಯ ಮೊದಲ ಆವೃತ್ತಿಯ ಪಂದ್ಯಾವಳಿಯು ರೌಂಡ್‌ ರಾಬಿನ್‌ ಲೀಗ್‌ ಮಾದರಿಯಲ್ಲಿ ನಡೆಯಲಿದ್ದು, ಅಂಕಪಟ್ಟಿಯ ಅಗ್ರ ಎರಡು ತಂಡಗಳು ಫೈನಲ್‌ಗೆ ಅರ್ಹತೆ ಪಡೆಯಲಿವೆ. ಮೂರು ಮತ್ತು 4ನೇ ಸ್ಥಾನ ಪಡೆಯುವ ತಂಡಗಳ ನಡುವೆ 2ನೇ ಸ್ಥಾನಕ್ಕಾಗಿ ಎಲಿಮಿನೇಟರ್‌ ಪಂದ್ಯ ನಡೆಯಲಿದೆ. ಪುರುಷರ ಐಪಿಎಲ್‌ನಂತೆ ಮಹಿಳಾ ಐಪಿಎಲ್‌ನಲ್ಲೂ ಸಹ ಪ್ರತಿ ತಂಡದಲ್ಲಿ ಐವರು ವಿದೇಶಿ ಆಟಗಾರ್ತಿಯರನ್ನು ಕಣಕ್ಕಿಳಿಸಬಹುದಾಗಿದ್ದು, ಐದು ವಿದೇಶಿ ಆಟಗಾರ್ತಿಯರಲ್ಲಿ ನಾಲ್ವರು ಐಸಿಸಿ ಫುಲ್‌ ಮೆಂಬರ್‌ ತಂಡದವರೇ ಆಗಿರಬೇಕು.

ಇದಲ್ಲದೇ ಐದು ತಂಡಗಳ ಆಯ್ಕೆಗಾಗಿ ಬಿಸಿಸಿಐ ಹಲವು ಮಾರ್ಗಗಳನ್ನು ಅನುಸರಿಸುವ ಸಾಧ್ಯತೆ ಇದೆ. ಧರ್ಮಶಾಲಾ ಮತ್ತು ಜಮ್ಮು ಒಳಗೊಂಡ ಉತ್ತರ ವಲಯ, ಕೊಚ್ಚಿನ್‌ ಮತ್ತು ವೈಝಾಗ್‌ ಒಳಗೊಂಡ ದಕ್ಷಿಣ ವಲಯ, ಇಂಧೋರ್‌, ನಾಗ್ಪುರ ಮತ್ತು ರಾಯ್‌ಪುರ ಒಳಗೊಂಡ ಕೇಂದ್ರವಲಯ, ರಾಂಚಿ, ಕಟಕ್‌ ಒಳಗೊಂಡ ಪೂರ್ವವಲಯ ಮತ್ತು ಗುವಾಹಟಿ, ಪುಣೆ ಮತ್ತು ರಾಜ್‌ಕೋಟ್‌ ಒಳಗೊಂಡ ಪಶ್ಚಿಮ ವಲಯದ ತಂಡಗಳನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ.

ಅಹ್ಮದಾಬಾದ್‌, ದೆಹಲಿ, ಮುಂಬೈ, ಬೆಂಗಳೂರು, ಚೆನ್ನೈ ಮತ್ತು ಕೊಲ್ಕತ್ತಾ ಮಹಿಳಾ ಐಪಿಎಲ್‌ಗೆ ಆತಿಥ್ಯ ನೀಡಲಿದೆ. ಆದರೆ ಬಿಸಿಸಿಐ ಆಡಳಿತ ಮಂಡಳಿಯಲ್ಲಿ ಮಹಿಳಾ ಐಪಿಎಲ್‌ ಬಗ್ಗೆ ಅಂತಿಮ ತೀರ್ಮಾನ ಹೊರಬರಬೇಕಿದೆ. ಎಲ್ಲವೂ ನಿಗದಿಯಂತೆ ನಡೆದದ್ದೇ ಆದಲ್ಲಿ ಮುಂದಿನ ವರ್ಷದಿಂದ ಭಾರತದಲ್ಲಿ ಮಹಿಳಾ ಐಪಿಎಲ್‌ ಆರಂಭವಾಗಲಿದೆ. ಆದರೆ ಪುರುಷರ ಐಪಿಎಲ್‌ಗೆ ದೊರೆತ ಯಶಸ್ಸು ಮಹಿಳಾ ಐಪಿಎಲ್‌ ಟೂರ್ನಿಗೆ ಲಭಿಸುವುದೇ ಎಂಬ ಸಣ್ಣ ಅನುಮಾನವೂ ಸಹ ಇದೆ.

#women’s cricket #bcci #round robbin #women’s ipl in india #march 2023

More News