Modi v/s kejriwal: ಪ್ರಧಾನಿ ಮೋದಿ ಅವರ ತಾಯಿಯ ಬಗ್ಗೆ AAP ಮುಖಂಡ ಅವಹೇಳನೆ

ದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬಗ್ಗೆ ಅವಾಚ್ಯ ಶಬ್ಧಗಳನ್ನು ಬಳಸಿದ ಆರೋಪ ಎದುರಿಸುತ್ತಿರುವ, ಆಮ್‌ ಆದ್ಮಿ ಪಕ್ಷ[AAP]ದ ಗುಜರಾತ್ ಘಟಕದ ಮುಖ್ಯಸ್ಥ ಗೋಪಾಲ್‌ ಇಟಾಲಿಯಾ ಬಂಧನದಿಂದ ಬಿಡುಗಡೆಗೊಂಡಿದ್ದಾರೆ. ಆದರೆ ಪ್ರಧಾನಿ ಮೋದಿ ಅವರ ತಾಯಿಯ ಬಗ್ಗೆ ಗೋಪಾಲ್‌ ಇಟಾಲಿಯಾ ಆಡಿದ ಮಾತುಗಳು ಬಿಜೆಪಿಯನ್ನು ರೊಚ್ಚಿಗೆಬ್ಬಿಸಿದೆ.

ಗೋಪಾಲ್‌ ಇಟಾಲಿಯಾ ಅವರು ಪ್ರಧಾನಿ ಮೋದಿ ಅವರ ತಾಯಿಯನ್ನು ಅಪಹಾಸ್ಯ ಮಾಡಿರುವ ವಿಚಾರ ಅಸಹನೀಯ ಎಂದಿರುವ ಬಿಜೆಪಿ, ಇದಕ್ಕಾಗಿ ಗುಜರಾತ್‌ ರಾಜ್ಯದ ಜನತೆ ಆಪ್‌ಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಿಡಿಕಾರಿದೆ. ಪ್ರಧಾನಿ ತಾಯಿಯನ್ನು ನಿಂದಿಸುವ ಮೂಲಕ ಗುಜರಾತ್‌ನಲ್ಲಿ ರಾಜಕೀಯ ಜನಪ್ರಿಯತೆ ಗಳಿಸಬುದು ಎಂದು ನೀವು ಭಾವಿಸಿದ್ದರೆ, ಗುಜರಾತಿಗಳು ಮುಂಬರುವ ಚುನಾವಣೆಯಲ್ಲಿ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಲಿದ್ದಾರೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಆಪ್‌ ನಾಯಕರ ವಿರುದ್ಧ ಗುಡುಗಿದ್ದಾರೆ.

ಅರವಿಂದ್ ಕೇಜ್ರಿವಾಲ್ ಅವರ ಸೂಚನೆಯ ಮೇರೆಗೆ ಗೋಪಾಲ್ ಇಟಾಲಿಯಾ‌ ಇಂತಹ ಕೀಳು ಪದಗಳನ್ನು ಬಳಸಿ ನಿಂದಿಸಿದ್ದಾರೆ ಎಂದು ಆರೋಪಿಸಿರುವ ಸ್ಮೃತಿ ಇರಾನಿ, ಗುಜರಾತ್ ಆಪ್‌ ನಾಯಕರು ಈ ಹಿಂದೆಯೂ ಹಿಂದೂ ಸಮಾಜ ಮತ್ತು ದೇವಸ್ಥಾನಕ್ಕೆ ಹೋಗುವ ಮಹಿಳೆಯರನ್ನು ಕುರಿತು ಕೀಳಾಗಿ ಮಾತನಾಡಿದ್ದಾರೆ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಆಪ್ ನಾಯಕರು ರಾಜಕೀಯದೊಂದಿಗೆ ಯಾವುದೇ ಸಂಬಂಧವಿಲ್ಲದ ಶತಾಯುಷಿ ಮಹಿಳೆಯನ್ನು ನಿಂದಿಸಿರುವುದು ಅಕ್ಷಮ್ಯ ಅಪರಾಧ. ಆ ತಾಯಿಯ ಏಕೈಕ ಅಪರಾಧ ಎಂದರೆ ಆಕೆ ನರೇಂದ್ರ ಮೋದಿ ಎಂಬ ಯುಗಪುರುಷನಿಗೆ ಜನ್ಮ ನೀಡಿರುವುದು ಎಂದು ಸ್ಮೃತಿ ಇರಾನಿ ಭಾವನಾತ್ಮಕವಾಗಿ ಹೇಳಿದ್ದಾರೆ.

ತಾನು ಪಾಟಿದಾರ್ ಸಮುದಾಯದಕ್ಕೆ ಸೇರಿದವನಾಗಿದ್ದರಿಂದಲೇ ಬಿಜೆಪಿ ತನ್ನನ್ನು ಗುರಿಯಾಗಿಸಿ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದೆ ಎಂದು ಗೋಪಾಲ್‌ ಇಟಾಲಿಯಾ ಆರೋಪಿಸಿದ್ದಾರೆ. ಆದರೆ ಅವರು ಓರ್ವ ಶತಾಯುಷಿ ಮಹಿಳೆಯನ್ನು ಅವಮಾನಿಸಿರುವುದನ್ನು ಪಾಟಿದಾರ್‌ ಸಮುದಾಯವೇ ಒಪ್ಪುವುದಿಲ್ಲ. ಸಮಾಜ ಒಪ್ಪಲಾರದ್ದನ್ನು ಮಾಡಿ ಜಾತಿಯ ಹಿಂದೆ ಅಡಗಿಕೊಳ್ಳುವುದು ಹೇಡಿಗಳ ಕೆಲಸ ಎಂದು ಸ್ಮೃತಿ ಇರಾನಿ ಕಿಡಿಕಾರಿದ್ದಾರೆ.

ತಮ್ಮ ರಾಜಕಿಯ ಉದ್ದೇಶಗಳ ಈಡೇರಿಕೆಗಾಗಿ ಅರವಿಂದ್‌ ಕೇಜ್ರಿವಾಲ್‌ ಮತ್ತವರ ಆಪ್‌ ಪಕ್ಷ ಯಾವ ಮಟ್ಟಕ್ಕಾದರೂ ಇಳಿಯಬಹುದು ಎಂಬುದಕ್ಕೆ ಈ ಘಟನೆ ಸಾಕ್ಷಿ. ಆದರೆ ಗುರಾತಿಗಳು ಮಹಿಳೆಯರ ಬಗ್ಗೆ ಅದರಲ್ಲೂ ವಿಶೇಷವಾಗಿ ತಾಯಂದಿರ ಬಗ್ಗೆ ಅಪಾರ ಗೌರವ ಹೊಂದಿದ್ದು, ಪ್ರಧಾನಿ ಮೋದಿ ಅವರ ತಾಯಿಯನ್ನು ನಿಂದಿಸಿರುವ ಆಪ್‌ ಪಕ್ಷಕ್ಕೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಸ್ಮೃತಿ ಇರಾನಿ ಇದೇ ವೇಳೆ ಭರವಸೆ ವ್ಯಕ್ತಪಡಿಸಿದರು.

ಪ್ರಧಾನಿ ಮೋದಿ ಮತ್ತು ಅವರ ತಾಯಿಯ ವಿರುದ್ದ ಅವಾಚ್ಯ ಶಬ್ಧಗಳನ್ನು ಬಳಸಿದ ಆರೋಪದ ಮೇಲೆ, ರಾಷ್ಟ್ರೀಯ ಮಹಿಳಾ ಆಯೋಗವು ಗೋಪಾಲ್‌ ಇಟಾಲಿಯಾ ಅವರನ್ನು ವಿಚಾರಣೆಗೆ ನಿನ್ನೆ(ಅ.13-ಗುರುವಾರ) ದೆಹಲಿಗೆ ಕರೆಸಿಕೊಂಡಿತ್ತು. ಈ ವೇಳೆ ಕಚೇರಿಯ ಹೊರಗೆ ಆಪ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಎನ್‌ಸಿಡಬ್ಲೂ ಮುಖ್ಯಸ್ಥೆ ರೇಖಾ ಶರ್ಮಾ ಅವರ ಆದೇಶದ ಮೇರೆಗೆ ಗೋಪಾಲ್‌ ಇಟಾಲಿಯಾ ಅವರನ್ನು ಬಂಧಿಸಲಾಗಿತ್ತು.

ಮೂರು ಗಂಟೆಗಳ ಬಳಿಕ ಗೋಪಾಲ್‌ ಇಟಾಲಿಯಾ ಅವರನ್ನು ದೆಹಲಿ ಪೊಲೀಸರು ಬಿಡುಗಡೆ ಮಾಡಿದ್ದರು. ಗೋಪಾಲ್‌ ಇಟಾಲಿಯಾ ಪಾಟಿದಾರ್‌ ಸಮುದಾಯಕ್ಕೆ ಸೇರಿದವರಾಗಿರುವುದರಿಂದಲೇ ಅವರಿಗೆ ಅನಗತ್ಯ ಕಿರುಕುಳ ನೀಡಲಾಗುತ್ತಿದೆ ಎಂದು ಅರವಿಂದ್‌ ಕೇಜ್ರಿವಾಲ್‌ ಆರೋಪಿಸಿದ್ದರು.

#PRIME MINISTER #NARENDRA MODI #AAP #ARAVIND KEJRIWAL #SMIRITHI IRANI #UNION MINISTER #GUJARATHI PEOPLE #PM MODI MOTHER

More News