ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಪಕ್ಷದ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಸ್ವಾತಂತ್ರ್ಯಾ ನಂತರ ಪಕ್ಷದ 37ನೇ ಅಧ್ಯಕ್ಷರನ್ನು ಆಯ್ಕೆ ಮಾಡಲು ದೇಶಾದ್ಯಂತ ಕನಿಷ್ಠ 9,200 ಕಾಂಗ್ರೆಸ್ ಪ್ರತಿನಿಧಿಗಳು ಮತ ಚಲಾಯಿಸಲಿದ್ದಾರೆ. ಬರೋಬ್ಬರಿ 24 ವರ್ಷಗಳ ಸುದೀರ್ಘ ಅಂತರದ ಬಳಿಕ ಗಾಂಧಿಯೇತರರು ಪಕ್ಷದ ಚುಕ್ಕಾಣಿ ಹಿಡಿಯಲಿದ್ದಾರೆ.

ಗಾಂಧಿ ಕುಟುಂಬದ ಸದಸ್ಯರು ಸಂಪೂರ್ಣ ಚುನಾವಣಾ ಪ್ರಕ್ರಿಯೆಯಿಂದ ಅಂತರ ಕಾಯ್ದುಕೊಂಡಿದ್ದರೂ, ಇಂದು ಮತ ಚಲಾಯಿಸಲಿದ್ದಾರೆ. ಅಧ್ಯಕ್ಷೀಯ ಚುನಾವಣೆಯ ಮತದಾನ ಪ್ರಕ್ರಿಯೆಯು ಇಂದು ಎಲ್ಲಾ ರಾಜ್ಯಗಳ ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆಯಲಿದೆ. ಆಯಾ ರಾಜ್ಯಗಳ ಪ್ರಾದೇಶಿಕ ನಾಯಕರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ವಿಶೇಷವೆಂದರೆ ಕಾಂಗ್ರೆಸ್ ಅಧ್ಯಕ್ಷರು ಚುನಾವಣೆಯ ಮೂಲಕ ಆಯ್ಕೆಯಾಗುತ್ತಿರುವುದು ಇದು ಕೇವಲ ಆರನೇ ಬಾರಿ ಎಂಬುದು ಗಮನಾರ್ಹ ಸಂಗತಿ.

ಮತದಾನ ಯಾವಾಗ?
ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯ ಮತದಾನ ಪ್ರಕ್ರಿಯೆಯ ಸಮಯವನ್ನು ಎಐಸಿಸಿ ಈಗಾಗಲೇ ನಿಗದಿಪಡಿಸಿದೆ. ಇಂದು ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಕಾಂಗ್ರೆಸ್ ನಾಯಕರು ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಬಹುದು. ಆಯಾ ರಾಜ್ಯಗಳ ಪ್ರಾದೇಶಿಕ ಕಚೇರಿಯಲ್ಲಿ ಮತದಾನಕ್ಕೆ ಬೇಕಾದ ವ್ಯವಸ್ಥೆ ಮಾಡಲಾಗಿದೆ.

ರಾಹುಲ್, ಸೋನಿಯಾ ಮತ ಚಲಾಯಿಸುವುದು ಎಲ್ಲಿ?
ಕಾಂಗ್ರೆಸ್‌ನ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಚುನಾವಣೆಯಲ್ಲಿ ಭಾಗವಹಿಸಲಿದ್ದಾರೆ. ಸದ್ಯ ಕಾಂಗ್ರೆಸ್ ನಡೆಸುತ್ತಿರುವ ʼಭಾರತ್ ಜೋಡೋ ಯಾತ್ರೆʼ ರಾಜ್ಯದಲ್ಲಿದ್ದು, ಸಂಗನಕಲ್ಲುನಲ್ಲಿರುವ ಪಕ್ಷದ ವಿಶೇಷ ಮತಗಟ್ಟೆಯಲ್ಲಿ ರಾಹುಲ್ ಮತ ಚಲಾಯಿಸಲಿದ್ದಾರೆ. ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರತಿನಿಧಿಗಳಾಗಿರುವ ಒಟ್ಟು 41 ‘ಭಾರತ ಯಾತ್ರಿಗಳು’ ಕೂಡಾ ಇದೇ ಕ್ಯಾಂಪ್‌ಸೈಟ್‌ನಲ್ಲಿ ಮತ ಚಲಾಯಿಸಲಿದ್ದಾರೆ. ಇನ್ನೊಂದೆಡೆ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಸೋನಿಯಾ ಮತ್ತು ಪ್ರಿಯಾಂಕಾ ಮತದಾನ ಮಾಡುವ ನಿರೀಕ್ಷೆಯಿದೆ.

ಫಲಿತಾಂಶ ಯಾವಾಗ?
ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶಗಳನ್ನು ಅಕ್ಟೋಬರ್ 19ರಂದು, ಅಂದರೆ ಬುಧವಾರ ಪ್ರಕಟಿಸಲಾಗುತ್ತದೆ. ಇಬ್ಬರೂ ಅಭ್ಯರ್ಥಿಗಳು ಪ್ರಬಲ ಹಿನ್ನೆಲೆಯನ್ನು ಹೊಂದಿದ್ದರೂ, ಪ್ರಾಥಮಿಕ ವರದಿಗಳ ಪ್ರಕಾರ ಮಲ್ಲಿಕಾರ್ಜುನ ಖರ್ಗೆ ಅವರು ಚುನಾವಣೆಯಲ್ಲಿ ಮುನ್ನಡೆ ಸಾಧಿಸುತ್ತಾರೆ ಎಂದು ನಿರೀಕ್ಷಿಸಲಾಗಿದೆ. ಏಕೆಂದರೆ ಇವರಿಗೆ ಗಾಂಧಿ ಕುಟುಂಬದ ಬೆಂಬಲ ಇರುವುದು ನಿಶ್ಚಿತವಾಗಿದೆ.
ಈ ಇಬ್ಬರೂ ನಾಯಕರು ವಿಭಿನ್ನ ನೆಲೆಯಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಿರುವುದಾಗಿ ಹೇಳಿದ್ದಾರೆ. ಶಶಿ ತರೂರ್ ಅವರು ಪಕ್ಷದ ಸಿದ್ಧಾಂತಗಳಲ್ಲಿ ʼಬದಲಾವಣೆʼ ತರಲು ನನ್ನನ್ನು ಆಯ್ಕೆ ಮಾಡಿ ಎಂದು ಹೇಳಿದರೆ, ಮಲ್ಲಿಕಾರ್ಜುನ ಖರ್ಗೆ ಅವರು ಪಕ್ಷದ ಸಿದ್ಧಾಂತವನ್ನು ಅನುಸರಿಸುತ್ತೇನೆ ಎಂದು ಹೇಳಿದ್ದಾರೆ.
ಈ ಹಿಂದಿನ ಚುನಾವಣಾ ಫಲಿತಾಂಶ ಏನಾಗಿತ್ತು?
2000ದಲ್ಲಿ ನಡೆದ ಇಂತಹ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಮತ್ತು ಜಿತೇಂದ್ರ ಪ್ರಸಾದ್ ಸ್ಪರ್ಧಿಸಿದ್ದರು. ಒಟ್ಟು 7,700 ಮತಗಳಲ್ಲಿ ಸೋನಿಯಾ 7,448 ಪಡೆದರೆ, ಪ್ರಸಾದ ಪಡೆದದ್ದು ಕೇವಲ 94 ಮತ ಮಾತ್ರ. ಉಳಿದ ಮತಗಳು ಅಸಿಂಧು ಅಥವಾ ಚಲಾವಣೆಯಾಗಲಿಲ್ಲ.
ಕೊನೆಯ ಗಾಂಧಿಯೇತರ ಅಧ್ಯಕ್ಷರು ಯಾರು?
ಕೊನೆಯ ಗಾಂಧಿಯೇತರ ಕಾಂಗ್ರೆಸ್ ಅಧ್ಯಕ್ಷರಾದ ಸೀತಾರಾಮ್ ಕೇಸ್ರಿ ಅವರು ಎರಡು ವರ್ಷಕ್ಕೂ ಕಡಿಮೆ ಅವಧಿಗೆ ಪಕ್ಷದ ನೇತೃತ್ವ ವಹಿಸಿದ್ದರು. ಸೋನಿಯಾ ಗಾಂಧಿಯನ್ನು ಪಕ್ಷದ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಲು 1998ರ ಮಾರ್ಚ್ 14ರಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಅವರನ್ನು ಅನೌಪಚಾರಿಕವಾಗಿ ತೆಗೆದುಹಾಕಿತು.




